
ಲೀಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನದಾಟವನ್ನು ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ಅಂತ್ಯಗೊಳಿಸಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಅದ್ಭುತ ಬೌಲಿಂಗ್ನಿಂದ ಇಂಗ್ಲೆಂಡ್ ತಂಡವನ್ನು 465 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, 2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಕೆ.ಎಲ್.
ರಾಹುಲ್ (KL Rahul) ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ 96 ರನ್‌ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದಲ್ಲಿ 465 ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್ ಪರ ಓಲಿ ಪೋಪ್ ಅತ್ಯಧಿಕ 106 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ 99 ರನ್‌ಗಳಿಗೆ ವಿಕೆಟ್ ಒಪ್ಪಿಸಿ 1 ರನ್ನಿಂದ ಶತಕ ವಂಚಿತರಾದರು. ಆದಾಗ್ಯೂ ಬ್ರೂಕ್ ಅವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ಇಂಗ್ಲೆಂಡ್ 465 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಇನ್ನು ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರನೇ ದಿನದ ಆಟದ ಅಂತ್ಯದವರೆಗೆ ಎರಡು ವಿಕೆಟ್‌ಗಳಿಗೆ 90 ರನ್‌ಗಳನ್ನು ಗಳಿಸಿದೆ. ತಂಡದ ಪರ ಕೆ.ಎಲ್. ರಾಹುಲ್ 47 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರೆ, ನಾಯಕ ಶುಭ್ಮನ್ ಗಿಲ್ 6 ರನ್ ಬಾರಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅದ್ಭುತ ಶತಕ ಗಳಿಸಿದ ಉಪನಾಯಕ ಓಲಿ ಪೋಪ್, ಮೂರನೇ ದಿನದಂದು ತಮ್ಮ ಖಾತೆಗೆ ಕೇವಲ 6 ರನ್ ಸೇರಿಸಿ ಪ್ರಸಿದ್ಧ್ ಕೃಷ್ಣಗೆ ಬಲಿಯಾದರು. ಇವರ ನಂತರ, ಹ್ಯಾರಿ ಬ್ರೂಕ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅರ್ಧಶತಕದ ಜೊತೆಯಾಟವನ್ನಾಡಿದರು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಸಿರಾಜ್, ಸ್ಟೋಕ್ಸ್ (20) ವಿಕೆಟ್ ಪಡೆಯುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ನಂತರ ಜೊತೆಯಾದ ಬ್ರೂಕ್ ಹಾಗೂ ಜೇಮಿ ಸ್ಮಿತ್ ಇಂಗ್ಲೆಂಡ್ ಇನ್ನಿಂಗ್ಸ್ ನಿಭಾಯಿಸಿದರು.
ಬುಮ್ರಾ, ಪ್ರಸಿದ್ಧ್ ಮ್ಯಾಜಿಕ್
ಊಟದ ನಂತರ, ಪ್ರಸಿದ್ಧ್ ಕೃಷ್ಣ ಜೇಮೀ ಸ್ಮಿತ್ (40 ರನ್) ಅವರನ್ನು ಔಟ್ ಮಾಡುವ ಮೂಲಕ 73 ರನ್‌ಗಳ ಈ ಪಾಲುದಾರಿಕೆಯನ್ನು ಮುರಿದರು. ಇದಾದ ನಂತರ, ಹ್ಯಾರಿ ಬ್ರೂಕ್ ಕೂಡ 99 ರನ್‌ಗಳಲ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ಬಲಿಯಾದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ವೋಕ್ಸ್ (38 ರನ್) ಮತ್ತು ಬ್ರೈಡೆನ್ ಕಾರ್ಸೆ (22 ರನ್) ಕೂಡ ತಂಡಕ್ಕೆ ಉಪಯುಕ್ತ ರನ್ ಗಳಿಸಿದರು. ಈ ರೀತಿಯಾಗಿ, ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 465 ರನ್‌ಗಳಿಗೆ ಅಂತ್ಯವಾಯಿತು. ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಗರಿಷ್ಠ 5 ವಿಕೆಟ್‌ಗಳನ್ನು ಪಡೆದರೆ, ಪ್ರಸಿದ್ಧ್ ಕೃಷ್ಣ ಮೂರು ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ ಎರಡು ವಿಕೆಟ್‌ಗಳನ್ನು ಪಡೆದರು.
ಟೀಂ ಇಂಡಿಯಾದ ಕೆಟ್ಟ ಆರಂಭ
6 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಕೇವಲ 4 ರನ್‌ಗಳನ್ನು ಗಳಿಸಿ ಬ್ರೈಡನ್ ಕಾರ್ಸೆಗೆ ಬಲಿಯಾದರು. ಇದಾದ ನಂತರ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ತಂಡದ ಇನ್ನಿಂಗ್ಸ್ ನಿಭಾಯಿಸಿ 66 ರನ್‌ಗಳ ಪ್ರಮುಖ ಜೊತೆಯಾಟ ಆಡಿದರು. ಈ ಪಾಲುದಾರಿಕೆಯನ್ನು ಮುರಿದ ನಾಯಕ ಬೆನ್ ಸ್ಟೋಕ್ಸ್, ಸಾಯಿ ಸುದರ್ಶನ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಎರಡನೇ ಹೊಡೆತ ನೀಡಿದರು. ಸುದರ್ಶನ್ 48 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 30 ರನ್ ಗಳಿಸಿ ಔಟಾದರು.