ರಾಯಚೂರು: ಪಾರ್ಟ್ ಟೈಂ ಜಾಬ್ ಆಫರ್ ನಂಬಿ ಬರೋಬ್ಬರಿ 2.77 ಕೋಟಿ ಕಳೆದುಕೊಂಡ ಸರ್ಕಾರಿ ಶಾಲೆ ಶಿಕ್ಷಕಿ

ರಾಯಚೂರು, ಫೆಬ್ರವರಿ 15: ಪಾರ್ಟ್ ಟೈಂ ಜಾಬ್ ಆಫರ್ (ಅರೆಕಾಲಿಕ ಉದ್ಯೋಗದ ಆಮಿಷ) ನಂಬಿ ಸರ್ಕಾರಿ ಶಾಲೆ (Government School) ಶಿಕ್ಷಕಿಯೊಬ್ಬರು ಬರೋಬ್ಬರಿ 2.77 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ (Cyber Crime) ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಾಯಚೂರಿನ (Raichur) ಮಸ್ಕಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕಿ 2023ರ ಸೆಪ್ಟೆಂಬರ್ 3ರಿಂದ ಈ ವರ್ಷದ ಜನವರಿ 12ರ ನಡುವಣ ಅವಧಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದರು. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಈ ವರ್ಷದ ಜನವರಿ 14 ರಂದು ದೂರು ನೀಡಿದ್ದರೂ, ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಪಾರ್ಟ್ ಟೈಮ್ ಕೆಲಸ ಹುಡುಕುತ್ತಿದ್ದ ಶಿಕ್ಷಕಿಗೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿತ್ತು. ಪ್ರತಿನಿತ್ಯ ಇತರರಿಗೆ ವಿಮಾನ ಟಿಕೆಟ್ ಕಾಯ್ದಿರಿಸಲು ಪಾರ್ಟ್‌ಟೈಮ್ ಕೆಲಸ ಮಾಡುವವರನ್ನು ಹುಡುಕುತ್ತಿದ್ದೇವೆ ಎಂಬ ಸಂದೇಶ ಬಂದಿತ್ತು. ಈ ಕೆಲಸದ ಮೂಲಕ ದಿನಕ್ಕೆ 1,000 ರಿಂದ 3,600 ರೂ. ವರೆಗೆ ಸಂಪಾದಿಸಬಹುದು ಎಂದು ಆಫರ್ ನೀಡಿದವರು ಆಮಿಷವೊಡ್ಡಿದ್ದರು. ಜತೆಗೆ ಆ ಕುರಿತು ಸಂದೇಶದಲ್ಲಿ ಲಿಂಕ್ ಅನ್ನು ಸಹ ಒದಗಿಸಿದ್ದರು.

ಶಿಕ್ಷಕಿಯು ಆ ಕೆಲಸದ ಆಫರ್​ ಅನ್ನು ಒಪ್ಪಿ ಸೆಪ್ಟೆಂಬರ್‌ನಿಂದ ಕೆಲಸ ಮಾಡಲು ಪ್ರಾರಂಭಿಸಿದ್ದರು. ವಂಚಕರು ಆಕೆಗೆ ಲಿಂಕ್‌ಗಳನ್ನು ಕಳುಹಿಸುತ್ತಿದ್ದರು ಮತ್ತು ಅವುಗಳನ್ನು ಭರ್ತಿ ಮಾಡಲು ಕೇಳುತ್ತಿದ್ದರು. ದಿನಗಳು ಕಳೆದಂತೆ, ಸೈಬರ್ ವಂಚಕರು ಮಹಿಳೆಯ ಗಳಿಕೆಯನ್ನು ತೋರಿಸಲು ಪ್ರಾರಂಭಿಸಿದರು. ಆದರೆ ಆಕೆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ವಂಚಕರು ಹಣವನ್ನು ಬಿಡುಗಡೆ ಮಾಡಲು ವಿವಿಧ ಶುಲ್ಕಗಳನ್ನು ಪಾವತಿಸುವಂತೆ ಕೇಳಿದರು. ಮಹಿಳೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಲೇ ಇದ್ದರು ಮತ್ತು ಜನವರಿವರೆಗೆ ಕನಿಷ್ಠ 82 ವಿವಿಧ ಖಾತೆಗಳಿಗೆ 2.77 ಕೋಟಿ ರೂ. ವರ್ಗಾವಣೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಇತರರಿಗೆ ಶಿಕ್ಷಕಿಯು ಕೆಲಸದ ಬಗ್ಗೆ ತಿಳಿಸಿದ್ದು, ಅವರು ಲಕ್ಷಗಟ್ಟಲೆ ಹಣವನ್ನು ಸಾಲವಾಗಿ ನೀಡಿದ್ದರು. ಈ ಬಗ್ಗೆ ಶಿಕ್ಷಕಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಹಣ ಪಡೆಯಲು ತನ್ನ ಮನೆಯನ್ನೂ ಅಡಮಾನ ಇಟ್ಟಿದ್ದರು. ವಂಚಕರಿಂದ ಬೇಡಿಕೆ ಹೆಚ್ಚಾದಾಗ ಮತ್ತು ಸಾಲ ನೀಡಿದವರು ಅದನ್ನು ಕೇಳಲು ಪ್ರಾರಂಭಿಸಿದಾಗ, ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಏತನ್ಮಧ್ಯೆ, ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರೂ ಅರೆಕಾಲಿಕ ಉದ್ಯೋಗ ಮಾಡಲು ಮುಂದಾದ ಬಗ್ಗೆ ವಿವರಣೆ ಕೋರಿ ಶಿಕ್ಷಣ ಇಲಾಖೆ ಅವರಿಗೆ ನೋಟಿಸ್ ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *