ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.17:
ಮನುಷ್ಯ ದೈಹಿಕವಾಗಿ ಸಾಮರ್ಥ್ಯವಂತನಾಗಿ ಆರೋಗ್ಯಕರ ಜೀವನ ನಡೆಸಬೇಕಾದರೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತ್ಯಾವಶ್ಯಕ ಎಂದು ಡಾ. ಬಸವಕುಮಾರ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ದುರ್ಗಾ ಇಲೆವೆನ್ ಕ್ರಿಕೇಟರ್ಸ್ ವತಿಯಿಂದ ನಾಲ್ಕನೇ ಬಾರಿಗೆ ಆಯೋಜಿಸಲಾಗಿರುವ ರಾಜ ವೀರ ಮದಕರಿ ನಾಯಕ ಕಪ್–2025 ರಾಜ್ಯಮಟ್ಟದ ಟೆನ್ನಿಸ್ ಬಾಲ್ ಹೊನಲು–ಬೆಳಕಿನ ಲೀಗ್ ಕಮ್ ನಾಕೌಟ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಬುಧವಾರ ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಮಕ್ಕಳು ಮೈದಾನದಲ್ಲಿ ಆಟವಾಡುವ ಬದಲು ಮೊಬೈಲ್‌ಗಳಿಗೆ ಸೀಮಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ಪೋಷಕರು ಕೂಡ ಮಕ್ಕಳನ್ನು ಆಟಕ್ಕೆ ಕಳುಹಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದರು.
ನಮ್ಮ ಹಿಂದಿನ ತಲೆಮಾರಿನವರು ಹೊಲ-ಗದ್ದೆಗಳಲ್ಲಿ ಶ್ರಮಪಟ್ಟು ಕೆಲಸ ಮಾಡುತ್ತಾ ಪೌಷ್ಟಿಕ ಆಹಾರ ಸೇವನೆ ಮಾಡಿ, ನೆಮ್ಮದಿಯ ನಿದ್ರೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಆದರೆ ಇಂದಿನ ಯಂತ್ರಮಯ ಜೀವನದಿಂದ ದೈಹಿಕ ಶ್ರಮ ಕಡಿಮೆಯಾಗಿ, ಕಡಿಮೆ ವಯಸ್ಸಿನಲ್ಲೇ ವಿವಿಧ ರೋಗಗಳು ಕಾಡುತ್ತಿವೆ. ದೈಹಿಕ ಶ್ರಮ ಮತ್ತು ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯಕರ ಜೀವನ ಸಾಧ್ಯವೆಂದು ಡಾ. ಬಸವಕುಮಾರ್ ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಸಿ.ಬಿ. ನಾಗರಾಜ್ ಮಾತನಾಡಿ, ಸ್ನೇಹಜೀವಿ ಬಳಗದ ವತಿಯಿಂದ ನಾಲ್ಕನೇ ಬಾರಿ ಈ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಹೇಳಿದರು. ಟೂರ್ನಿಯಲ್ಲಿ
- 🥇 ಪ್ರಥಮ ಬಹುಮಾನ: ₹2,00,001
- 🥈 ದ್ವಿತೀಯ ಬಹುಮಾನ: ₹1,00,001
- 🥉 ತೃತೀಯ ಬಹುಮಾನ: ₹50,001
ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ಉತ್ತಮ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ವಿಶೇಷ ಟ್ರೋಫಿ ಹಾಗೂ ಸರಣಿ ಶ್ರೇಷ್ಠ ಆಟಗಾರರಿಗೆ ಎಲ್‌ಇಡಿ ಟಿವಿ ಬಹುಮಾನವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.
ಈ ರಾಜ್ಯಮಟ್ಟದ ಟೂರ್ನಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 43 ತಂಡಗಳು ಭಾಗವಹಿಸಿದ್ದು, ಐದು ದಿನಗಳಲ್ಲಿ 115 ಪಂದ್ಯಗಳು ನಡೆಯಲಿವೆ. ಹೊರ ಜಿಲ್ಲೆಗಳಿಂದ 17 ತಂಡಗಳು ಹಾಗೂ ಚಿತ್ರದುರ್ಗ ಜಿಲ್ಲೆಯಿಂದ 26 ತಂಡಗಳು ಪಾಲ್ಗೊಂಡಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಆಯೋಜಿತ ಕ್ರಿಕೆಟ್ ಟೂರ್ನಿಯ ಸೂರಪ್ಪ, ರಾಜೀವ್, ರಾಮು, ಅನೀಸ್, ಅರ್ಜುನ ಹಾಗೂ ದುರ್ಗನ್ ಕ್ರಿಕೆಟರ್ಸ್ ತಂಡದ ಆಟಗಾರರು ಸೇರಿದಂತೆ ಹಲವರು ಹಾಜರಿದ್ದರು.
Views: 21