ತರಾಸು ರಂಗ ಮಂದಿರದಲ್ಲಿ ರಾಜವೀರ ಮದಕರಿನಾಯಕರ 270 ನೇ ಪಟ್ಟಾಭಿಷೇಕ ಮಹೋತ್ಸಮ ಆಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. ೦೧ : ಕೇಂದ್ರ ಸರ್ಕಾರ ೨೦೧೯ರ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಚಿತ್ರದುರ್ಗದಲ್ಲಿ ಮದಕರಿ ಥೀಮ್ ಪಾರ್ಕ ನಿರ್ಮಾಣ ಮಾಡಬೇಕು ಅದೇ ರೀತಿ ರಾಜ್ಯ ಸರ್ಕಾರ ತನ್ನ ಪಠ್ಯದಲ್ಲಿ ಮದಕರಿ ನಾಯಕ ಮತ್ತು ಗಂಡೋಬಳವ್ವನಾಗತಿಯ ಜೀವನ ಚರಿತೆಯನ್ನು ಸೇರಿಸಬೇಕು, ರಾಜಾವೀರಮದಕರಿನಾಯಕನ ಜಯಂತಿಯನ್ನು ಸರ್ಕಾರವೇ ಆಚರಿಸಬೇಕೆಂದು ನಾಯಕ ಸಮಾಜದ ಶ್ರೀ ಪ್ರಸನ್ನಾಂದ ಶ್ರೀಗಳು ಆಗ್ರಹಿಸಿದ್ದಾರೆ.

ನಾಡ ದೊರೆ ರಾಜವೀರ ಮದಕರಿನಾಯಕ ಪಟ್ಟಾಭಿಷೇಕ ಅಲಂಕರಿಸಿದ ದಿನವಾದ ಜು.೧ ರಂದು ನಗರದ ತರಾಸು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಿತ್ರದುರ್ಗವನ್ನು ಆಳಿದ ನಾಯಕರಲ್ಲಿ ಮದಕರಿ ನಾಯಕ ಪ್ರಮುಖವಾಗಿದ್ಧಾನೆ, ಈತನ ಆಳ್ವಿಕೆಯಲ್ಲಿ ಚಿತ್ರದುರ್ಗ ಸುಭೀಕ್ಷವಾಗಿತ್ತು, ಹೂರಗಿನಿಂದ ಬೇರೆಯವರು ದಂಡೆತ್ತಿ ಬಂದರೂ ಸಹಾ ಅವರನ್ನು ಹೊಡೆದೂಡಿಸಿ ತನ್ನ ರಾಜ್ಯವನ್ನು ಉಳಿಸಿಕೊಂಡಿದ್ಧಾನೆ, ೧೨ನೇ ವರ್ಷದಲ್ಲಿ ಪಟ್ಟವನ್ನು ಕಟ್ಟಿದ ತಾಯಿ ಗಂಡೋಬಳವ್ವನಾಗತಿ ಆತ ಪ್ರಬಲ್ಯಾಕ್ಕೆ ಬರುವವರೆಗೂ ಆಧಿಕಾರವನ್ನು ನಡೆಸಿ ಅತನನ್ನು ಉತ್ತಮ ರಾಜನನ್ನಾಗಿ ಮಾಡುವುದರ ಮೂಲಕ ಈ ಭಾಗಕ್ಕೆ ಉತ್ತಮ ರಾಜನನ್ನು ಕೊಡುಗೆಯಾಗಿ ನೀಡಿದ್ದಾಳೆ ಎಂದರು.

ಇಂತಹ ರಾಜರ ಇತಿಹಾಸವನ್ನು ಎಲ್ಲರು ತಿಳಿಯಬೇಕಿದೆ, ಇದರಿಂದ ಇತಿಹಾಸವನ್ನು ಎಲ್ಲರು ಓದಬೇಕಿದೆ, ಆದರಿಂದ ಮಾತ್ರ ನಮ್ಮ ರಾಜರ ಬಗ್ಗೆ ತಿಳಿಯಲು ಸಾಧ್ಯವಿದೆ. ಚಿತ್ರದುರ್ಗಕ್ಕೆ ಇತಿಹಾಸ, ಪ್ರಾಚೀನ ಪರಂಪರೆಯಿದೆ. ವಿಜಯನಗರದ ದೊರೆ ಕಲ್ಬುರ್ಗಿಯನ್ನು ಗೆದ್ದುಕೊಡುವಂತೆ ಮತ್ತಿ ತಿಮ್ಮಣ್ಣ ನಾಯಕನನ್ನು ಅವಲತ್ತುಕೊಳ್ಳುತ್ತಾರೆ. ಹನ್ನೆರಡು ವರ್ಷದ ಬಾಲಕ ರಾಜವೀರಮದಕರಿನಾಯಕನಿಗೆ ಪಟ್ಟ ಕಟ್ಟಿದಾಗ ಎರಡು ವರ್ಷಗಳ ಕಾಲ ತರಬೇತಿ ನೀಡಿ ನಂತರ ಅಸುನೀಗಿದ ಗಂಡೋಬಳವ್ವ ನಾಗತಿಯ ಶೌರ್ಯ, ಪರಾಕ್ರಮವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ ಸ್ವಾಮೀಜಿ ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ಆಗಬೇಕು. ನಗರದಲ್ಲಿ ಹದಿಮೂರು ಪಾಳೆಯಗಾರರ ಸರ್ಕಲ್ ನಿರ್ಮಿಸಬೇಕಿದೆ. ಐತಿಹಾಸಿಕ ಚಿತ್ರದುರ್ಗವನ್ನಾಳಿದ ರಾಜವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರ್ಪಡೆಯಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆಗೆ ಇತಿಹಾಸವನ್ನು ಮರೆ ಮಾಚಿದಂತಾಗುತ್ತದೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸ್ವಾಮೀಜಿ ಆಗ್ರಹಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಪರಾಕ್ರಮಿ ರಾಜಾವೀರ ಮದಕರಿನಾಯಕನ ಇತಿಹಾಸ, ಸಾಹಸ, ಶೌರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದರಿಂದ ಇತಿಹಸವನ್ನು ಉಳಿಸಬೇಕಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕನ ಥೀಂ ಪಾರ್ಕ್ ಆಗಬೇಕು. ಯಾವುದೇ ರಾಜಕೀಯ ಬೆರೆಸದೆ ಎಲ್ಲಾ ಪಕ್ಷಗಳು ಇದಕ್ಕೆ ಒತ್ತು ಕೊಡಬೇಕು,  ರಾಜಾವೀರ ಮದಕರಿನಾಯಕನಲ್ಲಿ ಸಾಹಸ, ಶೌರ್ಯವನ್ನು ತುಂಬಿದ ಗಂಡೋಬಳವ್ವ ನಾಗತಿಯನ್ನು ಸ್ಮರಿಸುವುದು ಅಷ್ಟೆ ಮುಖ್ಯ ಎಂದರು.

ಕೆ.ಡಿ.ಪಿ. ಸದಸ್ಯ ಕೆ.ಸಿ.ನಾಗರಾಜ್ ಮಾತನಾಡುತ್ತ ಮುಂದಿನ ವರ್ಷ ೨೭೧ ನೇ ಪಟ್ಟಾಭಿಷೇಕ ವಾಲ್ಮೀಕಿ ಭವನದಲ್ಲಿ ನಡೆಯಬೇಕು. ಅದಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಚಿತ್ರದುರ್ಗದ ಕೋಟೆಗೆ ಪ್ರವೇಶಿಸಲು ನೇರವಾದ ದಾರಿ ಆಗಬೇಕು. ರಾಜಾವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಾಯಕ ಸಮಾಜದ ಬೇಡಿಕೆಯನ್ನು ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಸಂಸದ ಗೋವಿಂದ ಕಾರಜೋಳರವರ ಪುತ್ರ ಉಮೇಶ್ ಕಾರಜೋಳ ಮಾತನಾಡಿ ಚಿತ್ರದುರ್ಗದ ಕೋಟೆ ಆಳಿದ ರಾಜಾವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಿಮ್ಮ ಬೇಡಿಕೆ ಈಡೇರಿಕೆಗೆ ದೆಹಲಿಗೆ ನಿಯೋಗ ಹೊರಡೋಣ ಎನ್ನುವ ಸಲಹೆ ನೀಡಿದರು.

ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡುತ್ತ ಪಾಳೆಯಗಾರರ ಇತಿಹಾಸವನ್ನು ಮರೆಮಾಚಬಾರದೆನ್ನುವ ಕಾರಣಕ್ಕಾಗಿ ಮದಕರಿನಾಯಕನ ಜಯಂತಿ, ಸ್ಮರಣೋತ್ಸವ, ಪಟ್ಟಾಭಿಷೇಕ ಆಚರಿಸಿಕೊಂಡು ಬರುತ್ತಿದ್ದೇವೆ. ಇತಿಹಾಸ ಸೃಷ್ಟಿಸಿದವರನ್ನು ಗುರುತಿಸಿ ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ದ್ರೋಹವೆಸಗಿದಂತಾಗುತ್ತದೆ. ಅಪ್ರತಿಮ ಶೂರರನ್ನು ನೆನಪಿಸಿಕೊಳ್ಳಬೇಕು. ಗಂಡೋಬಳವ್ವ ನಾಗತಿ ಇತಿಹಾಸ ಪರಾಕ್ರಮವನ್ನು ಮೆಲಕು ಹಾಕಬೇಕಿದೆ ಎಂದು ಹೇಳಿದರು.

ಚಿತ್ರದುರ್ಗದ ಕೋಟೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಬೇಕು, ಅದೇ ರೀತಿ ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ಬಿಜೆಪಿ. ಹಿರಿಯರೊಬ್ಬರು ಇಲ್ಲಿಗೆ ಬಂದಾಗ ಆಶ್ವಾಸನೆ ನೀಡಿದ್ದರು. ಇದುವರೆವಿಗೂ ಆಗಿಲ್ಲ. ಕೋಟೆಗೆ ನೇರ ದಾರಿಯಾದರೆ ಚಿತ್ರದುರ್ಗ ಕೂಡ ಹಂಪಿ ಮಾದರಿಯಲ್ಲಿ ಅಭಿವೃದ್ದಿಯಾಗಲಿದೆ ಇದಕ್ಕೆ ರಾಜಕಾರಣಿಗಳು ಪಕ್ಷ ಬೇಧ ಮರೆತು ಶ್ರಮಿಸಬೇಕೆಂದು ವಿನಂತಿಸಿದರು.

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆಯ ಸಂದೀಪ್, ನಗರಸಭೆ ಸದಸ್ಯರುಗಳಾದ ದೀಪು, ಭಾಸ್ಕರ್, ನಸ್ರುಲ್ಲಾ, ಹರೀಶ್, ಮಾಜಿ ಸದಸ್ಯರುಗಳಾದ ರಾಘವೇಂದ್ರ, ಫಕೃದ್ದಿನ್, ಶಬ್ಬೀರ್‌ಭಾಷ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ, ಗೋನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಂಡಮ್ಮ, ಸೂರಣ್ಣ, ಜಾನ್ಹವಿ ನಾಗರಾಜ್, ಕೆ.ಎಸ್.ಆರ್.ಟಿ.ಸಿ ಡಿಸಿ ಶ್ರೀನಿವಾಸ್, ರತ್ನಮ್ಮ ಸೈಟ್‌ಬಾಬಣ್ಣ, ತಿಪ್ಪೇಸ್ವಾಮಿ ಕಲ್ಲವ್ವನಾಗತಿಹಳ್ಳಿ, ಕವನ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು. ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್ ಮದಕರಿಯ ಬಗ್ಗೆ ಉಪನ್ಯಾಸ ನೀಡಿದರು. ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ಡಿ.ಗೋಪಾಲಸ್ವಾಮಿ ನಾಯಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಜಾವೀರ ಮದಕರಿನಾಯಕರ ಪ್ರತಿಮೆಗೆ  ಎಲ್ಲಾ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.

Leave a Reply

Your email address will not be published. Required fields are marked *