ವಿದ್ಯೆ–ಸಂಸ್ಕೃತಿ–ಮಾನವೀಯತೆಯ ಮಿಲನ: ವಿದ್ಯಾ ವಿಕಾಸ್‌ನಲ್ಲಿ ರಾಜ್ಯೋತ್ಸವ ವಿಶೇಷ.

ಸಾಹಿತಿ–ಪತ್ರಕರ್ತರ ಸಾನ್ನಿಧ್ಯದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ‘ಕನ್ನಡ ಮಾಣಿಕ್ಯ’ ಗೌರವ: ರಾಜ್ಯೋತ್ಸವದಲ್ಲಿ ವಿಶೇಷ ಸನ್ಮಾನ

ಚಿತ್ರದುರ್ಗ, ನ.15:
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 15.11.2025ರಂದು ಭವ್ಯವಾಗಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸಿದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಉದ್ಘಾಟನಾ ಭಾಷಣದಲ್ಲಿ ಕರ್ನಾಟಕದ ವೈಶಿಷ್ಟ್ಯತೆ, ಕನ್ನಡ ನಾಡು-ನುಡಿ, ವಚನ–ಕೀರ್ತನ–ಸಾಹಿತ್ಯ ಪರಂಪರೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿದರು.
ಮಾನವ ಕುಲಂ ತಾನೊಂದೇ ವಲಂ‘ ಎಂಬ ಕುವೆಂಪು ವಾಕ್ಯದಿಂದ ಹಿಡಿದು, ಚಂಪ ಅವರ ಸಾಹಿತ್ಯದವರೆಗೆ ಉದಾಹರಣೆಗಳನ್ನು ನೀಡಿ ಕನ್ನಡದ ಮಾನವನ್ನು ಹಿರಿಮೆ ಮಾಡಿದ ಅವರು, ‘ನೋಡು ಬಾ ಚಿತ್ರದುರ್ಗವ’ ಎಂಬ ತಾವೇ ರಚಿಸಿದ ಪದ್ಯವನ್ನೂ ವಾಚಿಸಿದರು.

ನಂತರ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಯುತ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರು ವಿದ್ಯಾರ್ಥಿಗಳಲ್ಲಿ ಓದು ಅಭ್ಯಾಸದ ಮಹತ್ವವನ್ನು ಎತ್ತಿಹಿಡಿದು, ಮೊಬೈಲ್ ವ್ಯಸನದಿಂದ ದೂರವಿರಲು ದಿನಪತ್ರಿಕೆ ಓದುವಂತೆ ಸಲಹೆ ನೀಡಿದರು. ಸಾಲುಮರದ ತಿಮ್ಮಕ್ಕ ಅವರ ಸರಳ ಜೀವನ, ಪರಿಸರಸೇವೆಯ ಕುರಿತು ಉದಾಹರಣೆ ನೀಡುತ್ತಾ ಅವರು ‘ಇಳಿದು ಬಾ ಒನಕೆ ಓಬವ್ವ’ ಎಂಬ ಹಾಡನ್ನೂ ಹಾಡಿ ಕಬ್ಬಿಣ ಕೋಟೆಯ ಸ್ಫೂರ್ತಿಯನ್ನು ನೆನಪಿಸಿದರು.

ಸಂಸ್ಥೆಯ ಐಸಿಎಸ್‌ಇ ಪ್ರಾಂಶುಪಾಲರಾದ ಶ್ರೀ ಬಸವರಾಜಯ್ಯ.ಪಿ ಅವರು “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಸ್ಲೋಕವನ್ನು ಸ್ಮರಿಸಿ ಕನ್ನಡ ಭಾಷೆಯ ಮಹಿಮೆ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು. ಕನ್ನಡದ ಸರಳತೆ, ಓದಲು–ಬರೆಯಲು ಇರುವ ಸುಗಮತೆಗಳನ್ನು ಕವಿ ಮಹಾಲಿಂಗ ರಂಗ ಅವರ ಪದ್ಯದ ಮೂಲಕ ವಿವರಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎಂ. ಪೃಥ್ವೀಶ ಅವರು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕನ್ನಡಕ್ಕೆ ಕೊಡುಗೆ ನೀಡಬೇಕೆಂಬ ಮನದಾಳದ ಕೋರಿಕೆಯನ್ನು ವ್ಯಕ್ತಪಡಿಸಿ, “ಎಲ್ಲಾದರೂ ಇರು, ಎಂದಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂದು ಕರೆ ನೀಡಿದರು.

ಮುಖ್ಯೋಪಾಧ್ಯಾಯರಾದ ಶ್ರೀ ಎನ್.ಜಿ. ತಿಪ್ಪೇಸ್ವಾಮಿ ಅವರು 1956ರ ನವೆಂಬರ್ 1ರಂದು ರೂಪುಗೊಂಡ ಕರ್ನಾಟಕ ರಾಜ್ಯದ ಇತಿಹಾಸ, ಸಂಸ್ಕೃತಿ, ರಾಜವಂಶಗಳು, ಸಾಹಿತ್ಯ–ಸಂಗೀತ–ಶಿಲ್ಪಕಲೆಗಳ ಪರಂಪರೆಗಳನ್ನು ಸ್ಮರಿಸಿ ವಿದ್ಯಾರ್ಥಿಗಳಿಗೆ ಕನ್ನಡ ನಾಡಿನ ಗೌರವವನ್ನು ಪರಿಚಯಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ. ವಿಜಯಕುಮಾರ್ ಅವರು ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಓದು–ವಿಚಾರಶೀಲತೆಯ ಅಗತ್ಯತೆಯನ್ನು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ 2024–25ನೇ ಸಾಲಿನಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ 9 ವಿದ್ಯಾರ್ಥಿಗಳಿಗೆ ‘ಕನ್ನಡ ಮಾಣಿಕ್ಯ’ ಬಿರುದು ನೀಡಿ ಗೌರವಿಸಲಾಯಿತು.
ಹಾಗೆಯೇ ಶ್ರೀ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಮತ್ತು ಶ್ರೀ ಚಿಕ್ಕಪ್ಪನಹಳ್ಳಿ ಷಣ್ಮುಖ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿಕ್ಷಕರಿಗಾಗಿ ಆಯೋಜಿಸಿದ್ದ **“ಕನ್ನಡ ರಸಪ್ರಶ್ನೆ ಸ್ಪರ್ಧೆ”**ಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಸಮಾರಂಭಕ್ಕೆ ಸೊಬಗು ತುಂಬಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸುನೀತಾ ಪಿ.ಸಿ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ–ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮವನ್ನು ಜಾನವಿ ಸ್ವಾಗತಿಸಿದರು, ಉಷಾ ಮತ್ತು ಸಿರಿಗೌರಿ ಪಿ. ಶೆಟ್ಟಿ ನಿರೂಪಣೆ ನೆರವೇರಿಸಿದರು, ದೀಕ್ಷಿತಾ ಎಂ ವಂದನೆ ಸಲ್ಲಿಸಿದರು.

Views: 99

Leave a Reply

Your email address will not be published. Required fields are marked *