
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆಯನ್ನು ಮಣಿಸಿದ ಸೌರಾಷ್ಟ್ರ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಗೆಲ್ಲಲು ಕೇವಲ 115 ರನ್ಗಳ ಗೆಲುವಿನ ಗುರಿ ಪಡೆದ ಸೌರಾಷ್ಟ್ರ ತಂಡ ನಾಯಕ ಅರ್ಪಿತ್ ವಸವಡ ಅವರ ಅಜೇಯ 47 ರನ್ಗಳ ನೆರವಿನಿಂದ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದೀಗ ಬಲಿಷ್ಠ ಕರ್ನಾಟಕ ತಂಡವನ್ನು ಬಗ್ಗು ಬಡಿದಿರುವ ಸೌರಾಷ್ಟ್ರ ತಂಡ ಫೈನಲ್ ಪಂದ್ಯದಲ್ಲಿ ಮನೋಜ್ ತಿವಾರಿ ನಾಯಕತ್ವದ ಬಂಗಾಳ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ಫೈನಲ್ ಪಂದ್ಯ ಫೆಬ್ರವರಿ 16 ರಂದು ನಡೆಯಲಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಆರ್ ಸಮರ್ಥ್ ಕೇವಲ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ 9 ರನ್ಗಳಿಗೆ ಸುಸ್ತಾದರು. ನಂತರ ಬಂದ ಮನೀಶ್ ಪಾಂಡೆ, ಶ್ರೇಯಾಸ್ ಗೋಪಾಲ್ ಕೂಡ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ಆದರೆ ಒಂದೆಡೆ ಭದ್ರವಾಗಿ ಬೇರೂರಿದ್ದ ನಾಯಕ ಮಯಾಂಕ್, ಶರತ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ಶರತ್ 66 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಮಯಾಂಕ್ 249 ರನ್ಗಳ ದ್ವಿಶತಕದ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ನೆರವಿನಿಂದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 407 ರನ್ ಕಲೆಹಾಕಿತು.