ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ ಮಹಿಳಾ ತಂಡ; ಕನ್ನಡದಲ್ಲೇ ತಂಡದ ಸಿದ್ಧತೆ ವಿವರಿಸಿದ ಶ್ರೇಯಾಂಕಾ.

ಬೆಂಗಳೂರು: ಜೂನ್ 16ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ(India women’s vs South Africa women’s) ಮತ್ತು ಭಾರತ ಮಹಿಳಾ(INDW vs SAW) ಏಕದಿನ(INDW vs SAW 1st ODI) ಸರಣಿಗೆ ಉಭಯ ತಂಡಗಳ ಆಟಗಾರ್ತಿಯರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ. ತಂಡದ ಸಿದ್ಧತೆ ಬಗ್ಗೆ ಶ್ರೇಯಾಂಕಾ ಪಾಟೀಲ್(Shreyanka Patil) ಕನ್ನಡದಲ್ಲೇ ವಿವರಿಸಿದ್ದಾರೆ. ಈ ವಿಡಿಯೊವನ್ನು ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಉದಯೋನ್ಮುಖ ಆಟಗಾರ್ತಿಯಾಗಿರುವ ಶ್ರೇಯಾಂಕಾ ಏಕದಿನ ಮತ್ತು ಟಿ20 ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾನುವಾರದಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಎಲ್ಲ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಏಕೈಕ ಟೆಸ್ಟ್​ ಮತ್ತು 3 ಟಿ20 ಪಂದ್ಯಗಳು ಚೆನ್ನೈಯ ಚೆಪಾಕ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಪಂದ್ಯ ಸಿದ್ಧತೆ ಬಗ್ಗೆ ಮಾತನಾಡಿದ ಶ್ರೇಯಾಂಕ, ‘ಎಲ್ಲರಿಗೂ ನಮಸ್ಕಾರ, ನಾವು ಬೆಂಗಳೂರಿನಲ್ಲಿದ್ದೇವೆ. ಇಲ್ಲಿನ ವಾತಾವರಣ ತುಂಬಾ ಹಿತ ನೀಡಿದೆ. ಮೊದಲ ಅಭ್ಯಾಸ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದೇವೆ. ಎಲ್ಲರು ತುಂಬಾ ಎನರ್ಜಿಯಿಂದ ಅಭ್ಯಾಸ ನಡೆಸಿದೆವು. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಕಾತರಗೊಂಡಿದ್ದೇವೆ. ಇಲ್ಲಿ ನಡೆದ ಡಬ್ಲ್ಯುಪಿಎಲ್​ ಪಂದ್ಯಾವಳಿಯ ವೇಳೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸ್ಟೇಡಿಯಂ ತುಂಬಿ ಹೋಗಿತ್ತು. ಇದೀಗ ಏಕದಿನ ಸರಣಿಗೂ ಅದೇ ರೀತಿ ಸ್ಟೇಡಿಯಂಗೆ ಬಂದು ಟೀಮ್​ ಇಂಡಿಯಾಕ್ಕೆ ಸಪೋರ್ಟ್​ ಮಾಡಿ’ ಎಂದು ಕೇಳಿಕೊಂಡಿದ್ದಾರೆ. ಡ್ಯಾಶಿಂಗ್​ ಓಪನರ್​ ಶಫಾಲಿ ವರ್ಮಾ ಕೂಡ ಬಿಸಿಸಿಐ ವಿಶೇಷ ವಿಡಿಯೊದಲ್ಲಿ ಮಾತನಾಡಿ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ ಅವರು ಮೂರು ಮಾದರಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಗಾಯದಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಈ ಸರಣಿ ಮೂಲಕ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಕಳೆದ ಬಾಂಗ್ಲಾ ವಿರುದ್ಧದ ಸರಣಿಯಿಂದ ಅವರು ಹೊರಗುಳಿದಿದ್ದರು. ವೇಗಿ ಪೂಜಾ ವಸ್ತ್ರಕರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದ ಅಗ್ರ ಕ್ರಮಾಂಕದ ಬ್ಯಾಟರ್ ಪ್ರಿಯಾ ಪೂನಿಯಾ ಏಕದಿನ ಮತ್ತು ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.

ಏಕದಿನ ತಂಡ

ಹರ್ಮನ್‌ಪ್ರೀತ್‌ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್‌), ಉಮಾ ಚೆಟ್ರಿ (ವಿಕೆಟ್ ಕೀಪರ್‌), ದಯಾಳನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭನ, ಶ್ರೇಯಾಂಕಾ ಪಾಟೀಲ್​, ಸೈಕಾ ಇಶಾಕ್, ಪೂಜಾ ವಸ್ತ್ರಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪೂನಿಯಾ

Source : https://vistaranews.com/sports/indw-vs-saw-the-countdown-for-indw-vs-saw-1st-odi-begun-in-bengaluru/673966.html

Leave a Reply

Your email address will not be published. Required fields are marked *