Ravindra Jadeja: ಸರ್ ಎಂದು ಕರೆಯಬೇಡಿ, ಬಾಪು ಅನ್ನಿ ಸಾಕು: ರವೀಂದ್ರ ಜಡೇಜಾ

I hate being called Sir; call me Bapu" - Ravindra Jadeja

ಟೀಮ್ ಇಂಡಿಯಾದ (Team India) ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಸರ್ ಎಂದು ಕರೆಯುತ್ತಿರುವುದು ಗೊತ್ತೇ ಇದೆ. 2013 ರಲ್ಲಿ ಮಹೇಂದ್ರ ಸಿಂಗ್​ ಧೋನಿ ಸೋಷಿಯಲ್ ಮೀಡಿಯಾದಲ್ಲಿ ಸರ್ ರವೀಂದ್ರ ಜಡೇಜಾ ಎಂದು ಸಂಬೋಧಿಸಿದ ಪರಿಣಾಮ ಅವರ ಹೆಸರಿನ ಮುಂದೆ ಸರ್ ಸೇರ್ಪಡೆಯಾಯಿತು. ಆದರೆ ಜನರು ಸರ್ ಎಂದು ಕರೆಯುತ್ತಿರುವುದು ಖುದ್ದು ಜಡೇಜಾ ಅವರಿಗೂ ಇಷ್ಟವಿಲ್ಲ. ಬದಲಾಗಿ ನನ್ನನ್ನು ಬಾಪು ಎಂದು ಕರೆಯಿರಿ ಎಂದಿದ್ದಾರೆ ಟೀಮ್ ಇಂಡಿಯಾದ ಆಟಗಾರ.

ಸಂದರ್ಶನವೊಂದರಲ್ಲಿ ಮಾತನಾಡಿದ ರವೀಂದ್ರ ಜಡೇಜಾ, ಜನರು ನನ್ನನ್ನು ನನ್ನ ಹೆಸರಿನಿಂದ ಕರೆಯಬೇಕು. ಅಷ್ಟೇ ಸಾಕು. ನಾನು ಸರ್ ಎಂದು ಕರೆಯುವುದನ್ನು ದ್ವೇಷಿಸುತ್ತೇನೆ. ನೀವು ಬಯಸಿದರೆ, ನನ್ನನ್ನು ಬಾಪು ಎಂದು ಕರೆಯಿರಿ. ಅದು ನನಗೆ ಇಷ್ಟವಾಗುತ್ತದೆ. ಈ ಸರ್-ವಾರ್, ನನಗೆ ಇಷ್ಟವಿಲ್ಲ. ವಾಸ್ತವವಾಗಿ, ಜನರು ನನ್ನನ್ನು ಸರ್ ಎಂದು ಕರೆದಾಗ ನಾನು ಹೆಚ್ಚಾಗಿ ಗಮನಿಸುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ.

ನಾನು ಗುಜರಾತಿನ ಜಾಮ್‌ನಗರದವ. ಅಲ್ಲಿ ಎಲ್ಲರೂ ನನ್ನನ್ನು ಪ್ರೀತಿಯಿಂದ ‘ಬಾಪು’ ಎಂದು ಕರೆಯುತ್ತಾರೆ. ಹಾಗಾಗಿ ‘ಸರ್’ ಬದಲು ಬಾಪು ಎಂದು ಕರೆಯದರೆ ನನಗೆ ಹೆಚ್ಚು ಇಷ್ಟವಾಗುತ್ತದೆ ಎಂದು ಜಡೇಜಾ ಹೇಳಿದ್ದಾರೆ.

ಇದೇ ವೇಳೆ ಮಾಧ್ಯಮಗಳಿಂದ ದೂರ ಉಳಿಯುತ್ತಿರುವ ಬಗ್ಗೆ ಕೂಡ ಸ್ಪಷ್ಟನೆ ನೀಡಿದರು. ನೀವು ನನ್ನ ಬಗ್ಗೆ ಬರೆದರೆ, ನಾನು ಕಂಬ್ಯಾಕ್ ಮಾಡುತ್ತೇನೆ ಎಂದು ನೀವು ಭಾವಿಸುತ್ತೀರಾ?. ವಿಮರ್ಶಕರು ನಿರಂತರವಾಗಿ ತಮ್ಮನ್ನು ದುರ್ಬಲಗೊಳಿಸಿದಾಗ ನಮಲ್ಲೇ ಆತಂಕ ಮೂಡುತ್ತದೆ. ಇಂತಹ ಸಂದರ್ಭದಲ್ಲಿ ನನಗೆ ತಂದೆ ಹೇಳಿದ ಮಾತೊಂದು ನೆನಪು ಬರುತ್ತದೆ.

ನಮ್ಮ ತಂದೆಯವರು ನನಗೆ ಯಾವತ್ತೂ “ಚಮಚಗಿರಿ” ಮಾಡದಂತೆ ಎಚ್ಚರಿಕೆ ನೀಡಿದ್ದರು. “ಗ್ರೌಂಡ್ ಮೇ ಪ್ರದರ್ಶನ ಕರೋ, ಬಸ್ ಬಾತ್ ಖತಮ್” (ಮೈದಾನದಲ್ಲಿ ಪ್ರದರ್ಶನ ನೀಡು, ಅಲ್ಲಿಗೆ ಎಲ್ಲವೂ ಕೊನೆಗೊಳ್ಳುತ್ತೆ) ಎಂದು ಹೇಳಿದ್ದರು. ಇದನ್ನೇ ಪಾಲಿಸುತ್ತಾ ವೃತ್ತಿ ಜೀವನದಲ್ಲಿ ಬೀಳು ಏಳುಗಳನ್ನು ಕಂಡಿದ್ದೇನೆ ಎಂದು ಜಡೇಜಾ ಹೇಳಿದರು.

ಇದಕ್ಕೆ ಸಾಕ್ಷಿಯೇ ರವೀಂದ್ರ ಜಡೇಜಾ ಅವರ ಇತ್ತೀಚಿನ ಕಂಬ್ಯಾಕ್. ಗಾಯಗೊಂಡು 5 ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿದಿದ್ದ ಜಡೇಜಾ ಅವರಿಗೆ ತಂಡದಲ್ಲಿ ಸ್ಥಾನ ಸಿಗಬೇಕಿದ್ದರೆ ರಣಜಿ ಟೂರ್ನಿ ಆಡಿ ಫಿಟ್​ನೆಸ್ ಸಾಬೀತುಪಡಿಸುವಂತೆ ಬಿಸಿಸಿಐ ಸೂಚಿಸಿತ್ತು. ಅದರಂತೆ ರಣಜಿ ಕ್ರಿಕೆಟ್​ನಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದ ಜಡ್ಡು ತಮಿಳುನಾಡು ವಿರುದ್ಧ 7 ವಿಕೆಟ್ ಪಡೆದು ಮಿಂಚಿದ್ದರು.

ಈ ಭರ್ಜರಿ ಪ್ರದರ್ಶನದ ಫಲವಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. 5 ತಿಂಗಳುಗಳ ಬಳಿಕ ಕಂಬ್ಯಾಕ್ ಮಾಡಿದ್ದ ಜಡ್ಡು ನಾಗ್ಪುರ ಟೆಸ್ಟ್​ನಲ್ಲಿ ಒಟ್ಟು 7 ವಿಕೆಟ್ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲಿ 70 ರನ್​ ಬಾರಿಸಿದ್ದರು. ಪರಿಣಾಮ ಮೊದಲ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಯಾಗಿ ರವೀಂದ್ರ ಜಡೇಜಾ ಮ್ಯಾನ್ ಆಫ್ ದಿ ಮ್ಯಾಚ್ ತಮ್ಮದಾಗಿಸಿಕೊಂಡಿದ್ದರು. ಅಲ್ಲಿಗೆ ಜಡೇಜಾ ಹೇಳಿದಂತೆ ಬಾತ್ ಖತಂ.

 

source https://tv9kannada.com/sports/cricket-news/i-hate-being-called-sir-call-me-bapu-ravindra-jadeja-kannada-news-zp-au50-521272.html

Leave a Reply

Your email address will not be published. Required fields are marked *