ಆರ್​ಸಿಬಿ ತವರು ಪಂದ್ಯಗಳ ಟಿಕೆಟ್ ಮಾರಾಟ ಆರಂಭ; ಕನಿಷ್ಠ, ಗರಿಷ್ಠ ಬೆಲೆ ಎಷ್ಟು ಗೊತ್ತಾ?

ಇಲ್ಲಿಯವರೆಗೆ ನಡೆದಿರುವ 17 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ, ಈ ಬಾರಿಯಾದರೂ ಆ ಬರವನ್ನು ನೀಗಿಸಿಕೊಳ್ಳಬೇಕೆಂಬ ಇರಾದೆಯೊಂದಿಗೆ ಕೆಲವು ತಿಂಗಳ ಹಿಂದೆ ನಡೆದಿದ್ದ ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿ ಪೂರ್ಣ ಹೊಸ ತಂಡದೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದೆ. ಲೀಗ್​ನ ಮೊದಲ ಪಂದ್ಯದಲ್ಲೇ ಆರ್​ಸಿಬಿ ಆಡುತ್ತಿರುವ ಕಾರಣಕ್ಕೆ ಈ ಪಂದ್ಯಕ್ಕೆ ಸಾಕಷ್ಟು ಹೈಪ್ ಕ್ರಿಯೆಟ್ ಆಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ರಜತ್ ಪಡೆ, ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಮಾರ್ಚ್​ 22 ರಂದು ಈಡನ್ ಗಾರ್ಡನ್ಸ್​ನಲ್ಲಿ ಎದುರಿಸಲಿದೆ. ಇನ್ನು ತನ್ನ ತವರು ಪಂದ್ಯವನ್ನು ಏಪ್ರಿಲ್ 2 ರಂದು ಗುಜರಾತ್ ವಿರುದ್ಧ ಆಡಲಿದೆ. ಇದೀಗ ಈ ಪಂದ್ಯದ ಆನ್​ಲೈನ್ ಟಿಕೆಟ್ ಮಾರಾಟವನ್ನು ಇಂದಿನಿಂದ ಆರಂಭಿಸಲಾಗಿದೆ.

ಟಿಕೆಟ್ ಮಾರಾಟ ಆರಂಭ

ಮಾರ್ಚ್​ 19 ರಂದು ಆರ್​ಸಿಬಿ ತನ್ನ ಮೊದಲ ತವರು ಪಂದ್ಯದ ಟಿಕೆಟ್​ಗಳ ಮಾರಾಟವನ್ನು ಆರಂಭಿಸಿತ್ತು. ಆದರೆ ಈ ಆನ್​ಲೈನ್ ಟಿಕೆಟ್​ಗಳ ಮಾರಾಟ ಆರಂಭದವಾದ ಕೆಲವೇ ಗಂಟೆಗಳಲ್ಲಿ ಪ್ರಮುಖ ಸ್ಟಾಂಡ್​ಗಳ ಟಿಕೆಟ್​ಗಳು ಸೋಲ್ಡ್ ಔಟ್ ಆಗಿವೆ. ಈ ಸುದ್ದಿ ಬರೆಯುವ ಹೊತ್ತಿಗೆ ಆರ್​ಸಿಬಿ ವೆಬ್​ಸೈಟ್​ನಲ್ಲಿ ಬಾಕಿ ಇರುವ ಟಿಕೆಟ್​ಗಳನ್ನು ಪರಿಶೀಲಿಸಿದಾಗ ಕೇವಲ 2 ಸ್ಟ್ಯಾಂಡ್​ಗಳ ಟಿಕೆಟ್​ಗಳು ಮಾತ್ರ ಮಾರಾಟಕ್ಕೆ ಲಭ್ಯವಿದ್ದವು.

42 ಸಾವಿರ ರೂ. ಗರಿಷ್ಠ ಬೆಲೆ

ಆರ್​ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್​ನ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ಈ ಪಂದ್ಯದ ಟಿಕೆಟ್​ ಬೆಲೆ ನಿರೀಕ್ಷೆಯಂತೆ ದುಬಾರಿಯಾಗಿದೆ. ಆರ್​ಸಿಬಿ ವೆಬ್​ಸೈಟ್​ನಲ್ಲಿರುವಂತೆ, ಈ ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 2300 ರೂಗಳಿದ್ದರೆ, ಗರಿಷ್ಠ ಟಿಕೆಟ್​ ಬೆಲೆಯನ್ನು 42000 ರೂಗಳಿಗೆ ನಿಗದಿಪಡಿಸಲಾಗಿದೆ. ಪ್ರಸ್ತುತ ಇದೀಗ ವೆಬ್​ಸೈಟ್​ನಲ್ಲಿ ಎರಡು ಸ್ಟ್ಯಾಂಡ್​ಗಳ ಟಿಕೆಟ್​ಗಳನ್ನು ಖರೀದಿಸಬಹುದಾಗಿದ್ದು, ಅದರಲ್ಲಿ ಒಂದು ಸ್ಟ್ಯಾಂಡ್​ನ ಟಿಕೆಟ್​ ಬೆಲೆ 20 ಸಾವಿರ ರೂಗಳಿದ್ದರೆ, ಇನ್ನೊಂದು ಸ್ಟ್ಯಾಂಡ್​ನ ಟಿಕೆಟ್ ಬೆಲೆ 10 ಸಾವಿರ ರೂ ಆಗಿದೆ.

ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಾಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್ ಮತ್ತು ಮೋಹಿತ್ ರಾಥಿ.

Source : https://tv9kannada.com/sports/cricket-news/rcb-gujarat-ipl-tickets-sale-psr-993416.html

Leave a Reply

Your email address will not be published. Required fields are marked *