IPL 2024: ಪ್ಲೇಆಫ್ ಸುತ್ತಿನಲ್ಲಿ ಆರ್ಸಿಬಿ ತಂಡವು ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಸಾಧ್ಯವಾಗದೆ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನಭವಿಸಿತು. ಈ ಪಂದ್ಯದ ಸೋಲಿನ ನಂತರ ಆರ್ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಂಡುಬಂದ ದೃಶ್ಯ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಗಳ ಕಣ್ಣೀರ ಕಟ್ಟೆ ಒಡೆಯುವಂತೆ ಮಾಡಿದೆ.

ಬರೋಬ್ಬರಿ 1 ತಿಂಗಳ ಸತತ ಸೋಲುಗಳ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದ ಆರ್ಸಿಬಿಯ (RCB) ಗೆಲುವಿನ ಸರಣಿ ಕೊನೆಗೂ ಅಂತ್ಯಗೊಂಡಿದೆ. ಮೇ ತಿಂಗಳ ಆರಂಭದಲ್ಲಿ ಆರಂಭವಾದ ಆರ್ಸಿಬಿ ಜಯದ ಓಟ ಇದೇ ಮೇ ತಿಂಗಳ 22 ರಂದು ರಾಜಸ್ಥಾನ್ ರಾಯಲ್ಸ್ (Rajastan Royals) ವಿರುದ್ಧದ ಎಲಿಮಿನೇಟರ್ ಪಂದ್ಯದ ಸೋಲಿನೊಂದಿಗೆ ನಿಂತಿದೆ. ಈ ಮೂಲಕ ಈ ಬಾರಿಯಾದರೂ ಕಪ್ ಗೆಲ್ಲಬೇಕೆನ್ನುವ ಆರ್ಸಿಬಿಯ ಶತಕೋಟಿ ಅಭಿಮಾನಿಗಳ ಹೆಬ್ಬಯಕೆಗೆ ನೋವಿನ ತೆರೆ ಬಿದ್ದಿದೆ. ವಾಸ್ತವವಾಗಿ ಲೀಗ್ ಆರಂಭದ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್ಸಿಬಿ ಆ ಬಳಿಕ ಸತತ 6 ಸೋಲುಗಳನ್ನು ಕಂಡಿತ್ತು. ಇದರಿಂದ ತಂಡ ಪ್ಲೇಆಫ್ ಸ್ಪರ್ಧೆಯಿಂದ ಭಾಗಶಃ ಹೊರಬಿದ್ದಿತ್ತು. ಆದರೆ ಆ ನಂತರ ಯಾರೂ ಊಹಿಸದಂತೆ ಪುಟಿದೆದ್ದಿದ್ದ ಆರ್ಸಿಬಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇಆಫ್ ಪ್ರವೇಶಿಸಿತ್ತು. ಆದರೆ ಈ ಪ್ಲೇಆಫ್ ಸುತ್ತಿನಲ್ಲಿ ತಂಡವು ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಸಾಧ್ಯವಾಗದೆ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನಭವಿಸಿತು. ಈ ಪಂದ್ಯದ ಸೋಲಿನ ನಂತರ ಆರ್ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಂಡುಬಂದ ದೃಶ್ಯ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಗಳ ಕಣ್ಣೀರ ಕಟ್ಟೆ ಒಡೆಯುವಂತೆ ಮಾಡಿದೆ.
ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ
ಆರ್ಸಿಬಿ ಮೊದಲ ಐಪಿಎಲ್‌ನಿಂದಲೂ ಈ ಟೂರ್ನಿಯಲ್ಲಿ ಆಡುತ್ತಿರುವ ತಂಡವಾಗಿದೆ. ಆದರೆ ತಂಡವು ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಪ್ರತಿ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗ, ಆರ್ಸಿಬಿ ಅಭಿಮಾನಿಗಳು ಈ ಬಾರಿ ಕಪ್ ನಮ್ಮದೆ ಎಂಬ ಭರವಸೆಯಿಂದ ಕಾದು ಕುಳಿತಿರುತ್ತಾರೆ. ಆದರೆ ಪಂದ್ಯಾವಳಿ ಮುಂದುವರೆದಂತೆ, ಎಲ್ಲಾ ಭರವಸೆಗಳು ಹುಸಿಯಾಗುತ್ತವೆ. ಈ ಬಾರಿಯೂ ಅಂಥದ್ದೇ ಘಟನೆ ನಡೆದಿದೆ. ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ್ದು, ಈ ಬಾರಿ ಎಲ್ಲರನ್ನೂ ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಭಾವನಾತ್ಮಕ ವಿಡಿಯೋ ಹಂಚಿಕೊಂಡ ಫ್ರಾಂಚೈಸಿ
ಏತನ್ಮಧ್ಯೆ, ಆರ್ಸಿಬಿ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ಆಟಗಾರರ ಮನಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸಿದೆ. ಬುಧವಾರ ರಾತ್ರಿ ರಾಜಸ್ಥಾನ್ ವಿರುದ್ಧ ಸೋತ ಬಳಿಕ ಇಡೀ ತಂಡದ ಎಲ್ಲಾ ಆಟಗಾರರು ಹತಾಶೆ ಮತ್ತು ನಿರಾಶೆಯಿಂದ ಮೈದಾನದಿಂದ ನಿರ್ಗಮಿಸಿದರು. ಆದರೆ ತಂಡವು ಡ್ರೆಸ್ಸಿಂಗ್ ರೂಮ್ ತಲುಪಿದಾಗ ಏನಾಯಿತು ಎಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಅದರ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಎಲ್ಲಾ ಆಟಗಾರರು ಬಹಳ ದುಃಖ ಮತ್ತು ನೋವಿನಲ್ಲಿರುವುದನ್ನು ಕಾಣಬಹುದಾಗಿದೆ. ಸುಮಾರು ಮೂರೂವರೆ ನಿಮಿಷಗಳ ಈ ವಿಡಿಯೋ ಎಲ್ಲವನ್ನೂ ತಾನೇ ಹೇಳುತ್ತಿದೆ.
ಪಂದ್ಯ ಹೀಗಿತ್ತು..
ಇನ್ನು ಈ ಪಂದ್ಯದ ಬಗ್ಗೆ ಮಾತನಾಡಿದರೆ, ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಸೋತಾಗಲೇ ಆರ್ಸಿಬಿಗೆ ಮೊದಲ ಹೊಡೆತ ಬಿದ್ದಿತು. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತದೆ ಎಂದಾಗಲೇ ಫಲಿತಾಂಶ ಹೀಗೆ ಇರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಏಕೆಂದರೆ ಅಹಮದಾಬಾದ್‌ನಲ್ಲಿ ಕತ್ತಲಾದಂತೆ ಸಾಕಷ್ಟು ಇಬ್ಬನಿ ಬೀಳುತ್ತದೆ. ಹೀಗಾಗಿ ಇದರ ಲಾಭ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಸಿಗುತ್ತದೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಸ್ಕೋರ್ ಬೋರ್ಡ್‌ನಲ್ಲಿ ಕನಿಷ್ಠ 200 ರನ್ ಹಾಕಬೇಕಾಗಿತ್ತು. ಆದರೆ ತಂಡವು ಕೇವಲ 172 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 19 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಿ ಅರ್ಹತಾ ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿತು.