ಬೆಂಗಳೂರಲ್ಲಿ ಮಳೆ ಎಷ್ಟೇ ಬರಲಿ, RCB vs CSK ಮ್ಯಾಚ್ ನಡೆಯುತ್ತೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್.


 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಧಾವಿಸಿದೆ. ಇದೀಗ ಲೀಗ್ ಹಂತದ ಅತ್ಯಂತ ಮಹತ್ವದ ಪಂದ್ಯದಲ್ಲಿ ಬದ್ದ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಹೌದು, ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವು ಉಭಯ ತಂಡಗಳ ಪಾಲಿಗೆ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.

ಆರಂಭದಲ್ಲಿ ಸತತ ಸೋಲು ಕಂಡಿದ್ದ ಆರ್‌ಸಿಬಿ ತಂಡವು ಇದೀಗ ಸತತ 5 ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದೀಗ ತವರಿನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಬಗ್ಗುಬಡಿದು ಪ್ಲೇ ಆಫ್‌ಗೇರುವ ಕನಸು ಕಾಣುತ್ತಿದೆ ಫಾಫ್ ಡು ಪ್ಲೆಸಿಸ್ ಪಡೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಶನಿವಾರ ಪಂದ್ಯ ನಡೆಯುವ ಸಮಯದಲ್ಲೇ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿರುವುದು ಆರ್‌ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಒಂದು ವೇಳೆ ಪಂದ್ಯ ನಡೆಯದೇ, ಮಳೆಯಿಂದ ರದ್ದಾದರೇ, ಚೆನ್ನೈ ಹಾಗೂ ಆರ್‌ಸಿಬಿ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅನಾಯಾಸವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಇದೇ ವೇಳೆ ಬೆಂಗಳೂರು ತಂಡದ ಹೋರಾಟ ಅಂತ್ಯವಾಗಲಿದೆ.

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಆತಂಕ ಬೇಡ. ಯಾಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್‌ ಏರ್ ಸಿಸ್ಟಂ ಅಳವಡಿಸಲಾಗಿದೆ. ಎಷ್ಟೇ ಮಳೆ ಬಂದರೂ. ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಿಸಲು ಸಾಧ್ಯವಾಗುತ್ತದೆ. ಹೌದು, ಸುಮಾರು ಒಂದು ದಶಕದ ಹಿಂದೆಯೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್‌ ಏರ್‌ ಸಿಸ್ಟಂ ಅಳವಡಿಸಿಕೊಂಡಿದೆ. ಇದು ಎಂತಹ ಮಳೆ ಬಂದರೂ, ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭ ಮಾಡುವಂತ ವಾತಾವರಣ ನಿರ್ಮಿಸಲಿದೆ.

ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಬ್ ಸರ್ಫೇಸ್ ಏರೇಷನ್ ಮತ್ತು ವ್ಯಾಕ್ಯೂಂ ಪವರ್ಡ್‌ ಡ್ರೈನೇಜ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹೆಗ್ಗಳಿಕೆ ಪಡೆದ ರಾಜ್ಯದ ಹೆಮ್ಮೆಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಇನ್ನು ಮುಂದೆ ವರುಣನ ಕಾಟ ಶಾಶ್ವತವಾಗಿ ಮರೆಯಾಗಿದೆ. ಈ ಸಬ್‌ ಏರ್‌ ಸಿಸ್ಟಂನಲ್ಲಿ 200 HP ಮಷೀನ್ ಕೆಲಸ ಮಾಡುತ್ತದೆ. ಇದು ನಿಮಿಷಕ್ಕೆ ಮೈದಾನದಲ್ಲಿರುವ 10,000 ಲೀಟರ್‌ ನೀರನ್ನು ಇಂಗಿಸುವ ಕೆಲಸ ಮಾಡುತ್ತದೆ. ಎಷ್ಟೇ ದೊಡ್ಡ ಮಳೆ ಬಂದು ನಿಂತರೂ ಕೇವಲ 30ರಿಂದ 40 ನಿಮಿಷದೊಳಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆರಂಭಿಸಲು ಸಾಧ್ಯವಾಗಲಿದೆ.

ಉಭಯ ತಂಡಗಳ ಪಾಲಿಗೆ ಡು ಆರ್ ಡೈ ಎನಿಸಿಕೊಂಡಿರುವ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗದಿರಲಿ ಹಾಗೆಯೇ ಈ ಪಂದ್ಯವನ್ನು ಗೆದ್ದು ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವಂತಾಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.

Source : https://kannada.asianetnews.com/gallery/cricket-sports/ipl-2024-how-the-subair-system-can-come-to-rcb-rescue-vs-csk-in-rainy-bengaluru-kvn-sdmob4#image10

Leave a Reply

Your email address will not be published. Required fields are marked *