ಚೊಚ್ಚಲ IPL ಕಿರೀಟಕ್ಕಾಗಿ RCB Vs PBKS ಜಟಾಪಟಿ; ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆಲುವು ಎಷ್ಟರ ಮಟ್ಟಿಗೆ ನಿರ್ಣಾಯಕ?

IPL 2025 Final – ಅಂತೂ ಕಳೆದ 2 ತಿಂಗಳಿಂದ ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ದಿನಕ್ಕಗಿ ಕ್ಷಣಗಣನೆ ಅರಂಭಗೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಚುಟುಕು ಕ್ರಿಕೆಟ್ ಹಬ್ಬವಾದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಲಿದ್ದು ಗೆಲುವಿಗಾಗಿ ಹೋರಾಡಲಿವೆ. ಮಳೆಯ ಸಾಧ್ಯತೆಯ ನಡುವೆಯೂ ಅಭಿಮಾನಿಗಳು ರೋಚಕ ಜಟಾಪಟಿಯ ನಿರೀಕ್ಷೆಯಲ್ಲಿದ್ದಾರೆ.

  • ಅಹಮದಾಬಾದ್‌ನಲ್ಲಿ ಮಂಗಳವಾರ RCB Vs ಪಂಜಾಬ್‌ ಕಿಂಗ್ಸ್‌ ನಡುವೆ ಹೈವೋಲ್ಟೇಜ್‌ ಕದನ
  • ಉಭಯ ತಂಗಳು ಈವರೆಗೆ 36 ಬಾರಿ ಮುಖಾಮಖಿಯಾಗಿದ್ದು ತಲಾ 18 ಬಾರಿ ಗೆಲುವಿನ ನಗೆ
  • ಈ ಸೀಸನ್ ನಲ್ಲಿ 3 ಬಾರಿ ಮುಖಾಮುಖಿಯಾಗಿದ್ದು ರಾಯಲ್ ಚಾಲೆಂಜರ್ಸ್ 2 ಬಾರಿ ಜಯಭೇರಿ

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಮಂಗಳವಾರ ಫೈನಲ್‌ ಪಂದ್ಯದಲ್ಲಿ ಎದುರಾಗುವುದರೊಂದಿಗೆ ಸುಮಾರು 2 ತಿಂಗಳು ದೇಶಾದ್ಯಂತ ನಡೆದ 18ನೇ ಆವೃತಿಯ ಐಪಿಎಲ್‌ ಚುಟುಕು ಕ್ರಿಕೆಟ್‌ ಮುಕ್ತಾಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದ ವೇದಿಕೆ ಸಜ್ಜಾಗಿದೆ. ಎರಡನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಇಲ್ಲಿ ಟಾಸ್ ಗೆಲುವು ನಿರ್ಣಾಯಕವಾಗುವ ಸಾಧ್ಯತೆಗಳು ಇಲ್ಲದಿಲ್ಲ.

ಎರಡು ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ಗೆ ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. ‘ಈ ಸಲ ಕಪ್‌ ನಮ್ದೇ’ ಎನ್ನುವ ಜಪವಾಕ್ಯ ಈ ಬಾರಿಯಾದರೂ ನಿಜವಾಗಲಿ ಎಂದು ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಎರಡೂ ತಂಡಗಳು ಇದುವರೆಗೂ ಟ್ರೋಫಿ ಗೆಲ್ಲದೇ ಇರುವುದರಿಂದ 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಮೇಲೆ ಕ್ರೀಡಾಭಿಮಾನಿಗಳ ದೃಷ್ಟಿ ನೆಟ್ಟಿದೆ.

ಮೋದಿ ಕ್ರೀಡಾಂಗಣದಲ್ಲಿ ಸಾವಿರಾರು ಮಂದಿ ಆರ್‌ಸಿಬಿ ಅಭಿಮಾನಿಗಳು ವಿರಾಟ್‌ ಅವರ ಮೇಲಿನ ಅಭಿಮಾನಕ್ಕೆ 18ನೇ ಸಂಖ್ಯೆಯ ಜೆರ್ಸಿಯನ್ನು ತೊಟ್ಟು ಸಾಗರೋಪಾದಿಯಲ್ಲಿಸೇರಿ ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುವ ನಿರೀಕ್ಷೆಯಿದೆ. ತಂಡದಲ್ಲಿತಮ್ಮ ಉಪಸ್ಥಿತಿ ಮಾತ್ರವಲ್ಲದೆ, ವೈಯಕ್ತಿಕ ಅತ್ಯುತ್ತಮ ಪ್ರದರ್ಶನದ ಮೂಲಕವೂ ಆಸರೆಯಾಗಿರುವ ಕೊಹ್ಲಿ ಐಪಿಎಲ್‌ ಫೈನಲ್‌ ತಲುಪಿರುವುದು ಇದು ನಾಲ್ಕನೇ ಬಾರಿ.

ಆರ್ ಸಿಬಿ ಪ್ರಶಸ್ತಿ ಗೆಲ್ಲುವ ಫೇವರಿಟ್

ಕ್ವಾಲಿಫೈಯರ್‌ 1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನವನ್ನು ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೆ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಕೊಹ್ಲಿತಂಡಕ್ಕೆ ಆಧಾರವಾಗಿದ್ದರೆ, ಬೌಲಿಂಗ್‌ನಲ್ಲಿ ಜೋಷ್‌ ಹೇಜಲ್‌ವುಡ್‌ 21 ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಆರ್‌ಸಿಬಿಗೆ ಆಸರೆ ಒದಗಿಸಿರುವವರ ಪೈಕಿ ವಿರಾಟ್‌ ಕೊಹ್ಲಿ ಒಬ್ಬರೇ ಇಲ್ಲ. ಫಿಲ್‌ ಸಾಲ್ಟ್‌ , ನಾಯಕ ರಜತ್‌ ಪಾಟೀದಾರ್‌, ಜಿತೇಶ್‌ ಶರ್ಮ, ಕೃಣಾಲ್‌ ಪಾಂಡ್ಯ, ಹೇಜಲ್‌ವುಡ್‌, ಯಶ್‌ ದಯಾಳ್‌, ಸುಯಾಶ್‌, ರೊಮಾರಿಯೊ ಶೆಫರ್ಡ್‌ ಹೀಗೆ ತಂಡದ ಪ್ರತಿಯೊಬ್ಬ ಸದಸ್ಯನೂ ಫೈನಲ್‌ ತನಕದ ತಂಡದ ಪಯಣದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸುವ ಮೂಲಕ ಹೆಗಲು ನೀಡಿದ್ದಾರೆ.

ಅತ್ತ ಕಳೆದ ಆವೃತ್ತಿಯಲ್ಲಿ ಕೋಲ್ಕೊತಾ ತಂಡಕ್ಕೆ ಪ್ರಶಸ್ತಿ ದಕ್ಕಿಸಿಕೊಟ್ಟಿರುವ, ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌, 18 ವರ್ಷದ ಐಪಿಎಲ್‌ ಇತಿಹಾಸದಲ್ಲಿ ಮೂರು ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷವೂ ಪಂಜಾಬ್‌ ತಂಡವನ್ನು ಫೈನಲ್‌ ತಲುಪಿಸುವ ಮೂಲಕ ತಮ್ಮ ನಾಯಕತ್ವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪ್ರಶಸ್ತಿ ಗೆಲುವಿನ ಶ್ರೇಯವನ್ನು ಅಯ್ಯರ್‌ ನೀಡಿರಲಿಲ್ಲ ಎನ್ನುವ ಟೀಕೆಗಳು ಕೇಳಿಬಂದಿದ್ದವು. ಪ್ರಭ್‌ಸಿಮ್ರನ್‌ ಸಿಂಗ್‌, ಜೋಷ್‌ ಇಂಗ್ಲಿಸ್‌, ಪ್ರಿಯಾಂಶ್‌ ಆರ್ಯ, ಶಶಾಂಕ್‌ ಸಿಂಗ್‌, ಅಯ್ಯರ್‌ ಪಡೆಗೆ ಆಸರೆ ಒದಗಿಸಿದ್ದಾರೆ. ಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್‌ ಸ್ಪಿನ್ನರ್‌ ಯಜ್ವೇಂದ್ರ ಚಾಹಲ್‌ ಕ್ವಾಲಿಫೈಯರ್‌ 2 ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ತಂಡ, ಚಾಹಲ್‌ ಫೈನಲ್‌ನಲ್ಲಿ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದೆ.

ಹೇಗಿದೆ ಮೋದಿ ಕ್ರೀಡಾಂಗಣದ ಪಿಚ್ ?

ಈ ಪಂದ್ಯವು ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿ ಶ್ರೇಯಸ್ ಅಯ್ಯರ್ ಅವರು ಅಜೇಯ 97 ರನ್ ಗಳಿಸಿದ ಅದೇ ಪಿಚ್‌ನಲ್ಲಿ ನಡೆಯಲಿದೆ. ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆ ಹಾಕಿತ್ತು. ಹಾಗಾಗಿ ಇಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ಭರಪೂರ ರನ್ ಗಳಿಕೆಯನ್ನು ಇತ್ತಂಡಗಳೂ ನಿರೀಕ್ಷಿಸಬಹುದು. ಆದರಲ್ಲೂ ಇಬ್ಬನಿಯ ಪ್ರಭಾವದಿಂದಾಗಿ ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಮಾಡುವವರಿಗೆ ಅನುಕೂಲ ಹೆಚ್ಚು. ಹೀಗಾಗಿ ಟಾಸ್ ಗೆದ್ದ ತಂಡವು ಇಲ್ಲಿ ಚೇಸಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ನಿಟ್ಟಿನಲ್ಲಿ ಟಾಸ್ ನಿರ್ಣಾಯಕವಾಗಲಿದೆ.

ಮಳೆ ಸಾಧ್ಯತೆಯೇನು?

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.

ಪಂದ್ಯ ಆರಂಭ: ರಾತ್ರಿ 7.30

ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್,

ರಾಯಲ್ ಚಾಲೆಂಜರ್ಸ್ ಸಂಭಾವ್ಯ ತಂಡ

ರಜತ್‌ ಪಾಟಿದಾರ್‌(ನಾಯಕ), ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್, ಜಿತೇಶ್‌ ಶರ್ಮಾ, ಲಿವಿಂಗ್‌ಸ್ಟನ್‌, ಕೃಣಾಲ್‌ ಪಾಂಡ್ಯ, ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌, ಜೋಷ್‌ ಹೇಜಲ್‌ವುಡ್‌, ಸುಯಾಶ್‌ ಶರ್ಮ, ಭುವನೇಶ್ವರ್‌ ಕುಮಾರ್‌, ನುವಾನ್‌ ತುಷಾರ, ಯಶ್‌ ದಯಾಳ್‌.

ಪಂಜಾಬ್‌ ಕಿಂಗ್ಸ್ ಸಂಭಾವ್ಯ ತಂಡ

ಶ್ರೇಯಸ್‌ ಅಯ್ಯರ್‌ (ನಾಯಕ), ನೇಹಲ್‌ ವಧೇರಾ, ಜೋಶ್‌ ಇಂಗ್ಲಿಸ್‌, ಪ್ರಭ್‌ಸಿಮ್ರನ್‌, ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌, ಹರ್‌ಪ್ರೀತ್‌ ಬ್ರಾರ್‌, ಅಜ್ಮತುಲ್ಲಾ ಓಮರ್ಜಾಯಿ, ಪ್ರಿಯಾಂಶ್‌ ಆರ್ಯ, ಮುಷೀರ್‌ ಖಾನ್‌, ಆಷ್‌ರ್‍ದೀಪ್‌ ಸಿಂಗ್‌, ಯಜ್ವೇಂದ್ರ ಚಾಹಲ, ವೈಶಾಕ್‌ ವಿ., ಕೈಲ್‌ ಜೇಮಿಸನ್‌.

VijayaKarnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *