ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ, 29: ಚಿತ್ರದುರ್ಗದ ಗಮಕಲಾಭಿಮಾನಿಗಳ ಸಂಘದ 40 ನೇ ವಾರ್ಷಿಕೋತ್ಸವದ ಸ್ಮರಣೆಗಾಗಿ ನಡೆಸುತ್ತಿರುವ ಮಾಸಿಕ ಗಮಕ ಕಾರ್ಯಕ್ರಮದ 29ನೇ ಅಧಿವೇಶನವನ್ನು ಇಲ್ಲಿನ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ಕನ್ನಡದ ಉದ್ದಾಮ ಸಾಹಿತಿ ಡಾ. ಡಿವಿಜಿ ಅವರ “ಮಂಕುತಿಮ್ಮನ ಕಗ್ಗ” ಪದ್ಯಗಳ ವಾಚನ ಹಾಗೂ ವ್ಯಾಖ್ಯಾನ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಪುನರ್ಜೋತಿ ಐ ಬ್ಯಾಂಕಿನ ಸಂಸ್ಥಾಪನಾ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಶಿವರಾಂ ಉದ್ಘಾಟಿಸಿ ಮಾತನಾಡುತ್ತಾ ಗಮಕ ಕಲೆಯು ಮಾನವರ ರಸಭಾವಗಳನ್ನು ಉದ್ದೀಪಿಸುವ ಸಂಗೀತದ ವಿವಿಧ ರಾಗಗಳನ್ನು ಬಳಸಿಕೊಂಡು ಕಾವ್ಯದ ಅಂತಸತ್ವವನ್ನು ಕಲಾರಸಿಕರಿಗೆ ಫಲಕಾರಿಯಾಗಿ ಮುಟ್ಟಿಸುವ ಪ್ರಮುಖ ಸಾಧನ. ಚತುರ ಗಮಕಿಗಳು ಪ್ರಭಾವಶಾಲಿ ವಾಚನದಿಂದ, ಅಕ್ಷರಸ್ಥರನ್ನು ಮಾತ್ರವಲ್ಲದೆ, ನಿರಕ್ಷರಿಗಳನ್ನೂ ಕಾವ್ಯಪ್ರಯೋಗ ಪರಿಣತರನ್ನಾಗಿ ಮಾಡಿರುವರಲ್ಲವೇ. ನಾಡು ನುಡಿ, ಸಂಸ್ಕೃತಿಗಳ ಪ್ರಗತಿಗೆ ಇಂತಹ ಅಪರೂಪದ ಕಲೆಗೆ ಪ್ರೋತ್ಸಾಹ ಅಗತ್ಯವಷ್ಟೇ, ಎಂದರು.
ಕಾವ್ಯವಾಚನ ಮಾಡಿದ ನಿವೃತ್ತ ಪ್ರಾಚಾರ್ಯ ವಿದ್ವಾನ್ ಅನಂತ ಕೃಷ್ಣಜೋಯಿಸರು ಸಂಗೀತದ ವಿವಿಧ ರಾಗಗಳ ಆಲಾಪಗಳ ಸಹಿತ ಸ್ಪಷ್ಟ ಪದೋಚ್ಚಾರ, ಉಚ್ಚಕಂಠ, ದ್ವನಿಯ ಏರಿಳಿತ, ಮೊದಲಾದ ಕೌಶಲ್ಯಗಳನ್ನು ಬಳಸಿಕೊಂಡು ಅಕ್ಕಿಯೊಳಗನ್ನವನು, ಪುಸ್ತಕದಿ ದೊರೆತರಿವು, ಹೊಟ್ಟೆಯೊಂದರ ರಗಳೆ ,ಗ್ರೀಸಿನಾ ಕಬ್ಬ ಮೊದಲಾದ ಪದ್ಯಗಳನ್ನು ಶೋತ್ರುಗಳು ಸೈ-ಸೈ ಎನ್ನುವಂತೆ ವಾಚಿಸಿದರು.
ಸಮರ್ಥ ವ್ಯಾಖ್ಯಾನಕಾರ ವಿದ್ವಾನ್ ಗಣಪತಿ ಭಟ್ ಅವರು ವಾಚನಕ್ಕೆ ಪ್ರಾಚೀನ ,ಅರ್ವಾಚೀನ ಹಾಗೂ ಸಮಕಾಲಕನ ವಿದ್ಯಮಾನಗಳ ಮೆರಗು ಹಚ್ಚಿ ಪದ್ಯಗಳ ಜೀವದ್ರವ್ಯಕ್ಕೆ ವ್ಯತ್ಯಯವಾಗದಂತೆ ಕೇಳುಗರ ಅರಿವಿನ ವಿಸ್ತಾರ ಹೆಚ್ಚಾಗುವಂತೆ ವ್ಯಾಖ್ಯಾನ ಮಾಡಿದರು. ಇದೇ ಸಂದರ್ಭದಲ್ಲಿ ಅವರು ಇಂದು ಡಿವಿಜಿಯವರ 50ನೇ ಪುಣ್ಯ ದಿನ. ಇಂತಹ ದಿನದಂದು ಅವರದೇ ಕಾವ್ಯದ ವಾಚನ- ವ್ಯಾಖ್ಯಾನಗಳ ಕಾರ್ಯಕ್ರಮವನ್ನು ಇರಿಸಿಕೊಂಡು ಆ ಶ್ರೇಷ್ಠ ಕವಿಯನ್ನು ಸ್ಮರಿಸಿಕೊಂಡದ್ದು ನಿಜಕ್ಕೂ ಶ್ಲಾಘನೀಯ ಎಂದರು.
ಗಾಯಕ ಗಂಗಾಧರ್ ಗಮಕ ಪ್ರಾರ್ಥನೆಯ ಮೂಲಕ ಆರಂಭವಾದ ಸಭೆಯಲ್ಲಿ ಸಂಘದ ಕಾರ್ಯದರ್ಶಿ ವಿದ್ವಾನ್ ಮೀನಾಕ್ಷಿ ಭಟ್ ಸ್ವಾಗತಿಸಿದರು. ಶಶಿಧರ ಶ್ಯಾನುಭೋಗ್ ಸಂಸ್ಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ಅತಿಥಿಗಳನ್ನು ಪರಿಚಯಿಸಿದರು. ನಿರ್ದೇಶಕಿ ಬಿ .ಎಲ್. ಉಮಾ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷೆ ಶ್ರೀಮತಿ ಕೆ. ಆರ್ .ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ರೀ ಅನಂತಕೃಷ್ಣ ವಂದಿಸಿದರು.
ಮುಂದಿನ ಮಾಸಿಕ ಕಾರ್ಯಕ್ರಮವು ತಾರೀಕು 25.01.2026 ಭಾನುವಾರ ಸಂಜೆ 6 ಗಂಟೆಗೆ ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಅಂದು ಗಮಕಿ ಶ್ರೀಮತಿ ಚಂಪಕಾ ಶ್ರೀಧರ್ ಅವರ ವಾಚನಕ್ಕೆ ವಿದ್ವಾನ್ ಅಚ್ಯುತ ಅವಧಾನಿಯವರು ವ್ಯಾಖ್ಯಾನ ನೀಡುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
Views: 21