ಕ್ರೆಡಿಟ್​ ಕಾರ್ಡ್​ ಬಳಕೆ ಕಡಿಮೆ ಮಾಡಿ.. ಆಗಾಗ ಕ್ರೆಡಿಟ್​ ಸ್ಕೋರ್​ ಮೇಲೆ ಗಮನ ಹರಿಸಿ!

ಕ್ರೆಡಿಟ್ ಸ್ಕೋರ್ ನಿಮ್ಮ ಆರ್ಥಿಕ ಶಿಸ್ತನ್ನು ಅಳೆಯುವ ಪ್ರಮುಖ ಸಾಧನವಾಗಿದೆ. 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್​ ಸ್ಕೋರ್ ಹೊಂದಿದ್ದರೆ ನೀವು ಸಾಲವನ್ನು ಪಡೆಯುವುದು ಸುಲಭವಾಗಿದೆ. ಹಾಗಾದರೆ ಈ ಕ್ರೆಡಿಟ್​ ಸ್ಕೋರ್​ ಪಡೆಯಲು ನಾವು ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನೋಡೋಣಾ ಬನ್ನಿ..

ಹೈದರಾಬಾದ್​, ತೆಲಂಗಾಣ: ಉತ್ತಮ ಕ್ರೆಡಿಟ್ ಸ್ಕೋರ್‌ನೊಂದಿಗೆ ನೀವು ಮನೆ ಮತ್ತು ಕಾರು ಸಾಲಗಳ ಮೇಲೆ ಬಡ್ಡಿ ರಿಯಾಯಿತಿಗಳನ್ನು ಪಡೆಯಬಹುದು. ಉದಾಹರಣೆಗೆ, ಒಂದು ದೊಡ್ಡ ಸರ್ಕಾರಿ ಬ್ಯಾಂಕ್ ನಿಮ್ಮ ಕ್ರೆಡಿಟ್​ ಸ್ಕೋರ್​ 800 ಇದ್ದಲ್ಲಿ ವೈಯಕ್ತಿಕ ಗೃಹ ಸಾಲದ ಮೇಲೆ ಶೇಕಡಾ 8.50 ರಷ್ಟು ಬಡ್ಡಿ ದರ ವಿಧಿಸುತ್ತಿದೆ. 20 ವರ್ಷಗಳ ಅವಧಿಗೆ ರೂ.50 ಲಕ್ಷ ಸಾಲದ ಮೇಲಿನ ಬಡ್ಡಿ ರೂ.54.13 ಲಕ್ಷವಾಗಿರುತ್ತದೆ. ಅದೇ ವ್ಯಕ್ತಿಯೊಬ್ಬ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಆತನಿಗೆ ಬ್ಯಾಂಕ್​ 8.80 ಪ್ರತಿಶತ ಬಡ್ಡಿ ವಿಧಿಸುತ್ತದೆ. ಅಂದರೆ, 56.42 ಲಕ್ಷ ರೂ.ವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಅದಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ 9.65 ಶೇಕಡಾ ಬಡ್ಡಿ ರೂಪದಲ್ಲಿ ಬ್ಯಾಂಕ್​ ಸಾಲ ನೀಡುತ್ತದೆ. ಆಗ ಬಡ್ಡಿ ಹೊರೆ 63.03 ಲಕ್ಷ ರೂ.ವರೆಗೂ ತಲುಪುತ್ತದೆ. ಹಾಗಾಗಿ ಆರ್ಥಿಕವಾಗಿ ಶಿಸ್ತು ಹೊಂದಿರುವವರು ದೀರ್ಘಾವಧಿಯಲ್ಲಿ ಪ್ರಯೋಜನ ಪಡೆಯುತ್ತಾರೆ.

ಸಮಯಕ್ಕೆ ಸರಿಯಾಗಿ ಪಾವತಿಸಿ..: ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಲು, EMI ಗಳು ಮತ್ತು ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸಮಯೋಚಿತವಾಗಿ ಮರುಪಾವತಿ ಮಾಡುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದಂದು ಬಿಲ್ ಪಾವತಿಗಳನ್ನು ಪಾವತಿಸಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದರೆ.. ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಯನ್ನು ಸ್ವಯಂಚಾಲಿತಗೊಳಿಸಿ.

800 ಕ್ರೆಡಿಟ್ ಸ್ಕೋರ್​ ಇದ್ದ ವ್ಯಕ್ತಿಯೊಬ್ಬ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಅಂತಿಮ ದಿನಾಂಕದೊಳಗೆ ಪಾವತಿಸುವುದಿಲ್ಲ ಎಂದಿಟ್ಟುಕೊಳ್ಳಿ. ಎರಡ್ಮೂರು ದಿನಗಳ ನಂತರ ಆತ ಬಿಲ್ ಪಾವತಿಸಿದ ಅಂತ ತಿಳಿದುಕೊಳ್ಳೋಣ.. ಆಗ ಆತನ ಕ್ರೆಡಿಟ್​ ಸ್ಕೋರ್​ 800 ರಿಂದ 776 ಕ್ಕೆ ಕುಸಿಯುತ್ತದೆ. ಆ ನಂತರ ಆ ವ್ಯಕ್ತಿ ಮುಂದಿನ ತಿಂಗಳಿನಿಂದ ಸರಿಯಾಗಿ ಹಣ ಪಾವತಿಸಿದರೂ ಸಹ ಕ್ರೆಡಿಟ್​ ಸ್ಕೋರ್​ ಇಳಿಕೆಯ ಹಾದಿಯಲ್ಲೇ ಸಾಗುತ್ತದೆ. ಸಹಜ ಸ್ಥಿತಿಗೆ ಮರಳಲು ಹಲವು ತಿಂಗಳುಗಳೇ ಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಎಚ್ಚರಿಕೆ ವಹಿಸುವುದು ಸೂಕ್ತ..

ಕ್ರೆಡಿಟ್​ ಕಾರ್ಡ್​ ಬಳಕೆ ಕಡಿಮೆ ಮಾಡಿ..: ಕ್ರೆಡಿಟ್ ಕಾರ್ಡ್​ ಅನ್ನು ಅವರು ನೀಡಿರುವ ಮೊತ್ತದ ಮಿತಿಯವರೆಗೆ ಬಳಸಬಹುದು. ಆದರೆ, ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವು ಕಡಿಮೆಯಾದರೆ ಒಳಿತು. ಏಕೆಂದರೆ ನಿಮ್ಮ ಕ್ರೆಡಿಟ್​ ಸ್ಕೋರ್ ವೇಗವಾಗಿ ಏರುತ್ತದೆ. ಉದಾಹರಣೆಗೆ ನಿಮ್ಮ ಕ್ರೆಡಿಟ್​ ಕಾರ್ಡ್​ ಒಂದು ಲಕ್ಷದವರೆಗೆ ಮಿತಿ ಇದೆ ಎಂದು ಭಾವಿಸೋಣ. ಒಂದು ತಿಂಗಳಲ್ಲಿ ನೀವು ಕೇವಲ ರೂ.10,000 ಖರ್ಚು ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ನಂತರ ನಿಮ್ಮ ಬಳಕೆಯ ಅನುಪಾತವು 10 ಪ್ರತಿಶತದಷ್ಟು ಇರುತ್ತದೆ. ನಿಮ್ಮ ಬಳಕೆ ಹೆಚ್ಚಿಸುವುದರಿಂದ ಕ್ರೆಡಿಟ್​ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಕ್ರೆಡಿಟ್ ಬಳಕೆಯನ್ನು 30 ಪ್ರತಿಶತದೊಳಗೆ ಇಡುವುದು ಯಾವಾಗಲೂ ಒಳ್ಳೆಯದು.

ಕನಿಷ್ಠ ಬ್ಯಾಲೆನ್ಸ್​ ಉಳಿಸುವುದು ಒಳಿತು: ಅನೇಕರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಉಳಿಸುತ್ತಾರೆ. ಇದು ದಂಡ ಅಥವಾ ಅಪರಾಧ ಶುಲ್ಕವನ್ನು ಪಾವತಿಸುವುದರಿಂದ ನಿಮ್ಮನ್ನು ರಕ್ಷಿಸುತ್ತದೆ. ಹೆಚ್ಚಿನ ಕಾರ್ಡ್‌ಗಳು ಬ್ಯಾಲೆನ್ಸ್‌ನಲ್ಲಿ ತಿಂಗಳಿಗೆ 2.5-4 ಪ್ರತಿಶತದ ನಡುವೆ ಶುಲ್ಕ ವಿಧಿಸುತ್ತವೆ. ಅಂದರೆ ವಾರ್ಷಿಕ ಶೇಕಡ 30-50 ಶುಲ್ಕ ಆಗುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರ ವಹಿಸುವುದು ಸೂಕ್ತ.

ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ಎಚ್ಚರ: ನೀವು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದಾಗಲೆಲ್ಲಾ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತಾರೆ. ನಿಮಗೆ ಅಗತ್ಯವಿಲ್ಲದಿದ್ದರೂ ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದರೆ ನಿಮ್ಮ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಗ ನಿಮಗೆ ನಿಜವಾಗಿಯೂ ಅಗತ್ಯವಿರುವಾಗ ಸಾಲ ಪಡೆಯುವುದು ಕಷ್ಟವಾಗುತ್ತದೆ. ನಿಮಗೆ ಸಾಲದ ಅಗತ್ಯವಿದ್ದಾಗ ಮಾತ್ರ ನಿಮ್ಮ ಅರ್ಹತೆಗೆ ಅನುಗುಣವಾಗಿ ಯಾವ ಬ್ಯಾಂಕ್​​ ಲೋನ್ ನೀಡುತ್ತೆ ಎಂಬುದು ತಿಳಿದುಕೊಳ್ಳಬೇಕು. ಅದರ ನಂತರವೇ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ನಿಮ್ಮ ಲೋನ್​ ಅಫ್ಲಿಕೇಷನ್​ ರಿಜೆಕ್ಟ್​ ಆದರೆ ಅದರ ಬಗ್ಗೆ ಕಾರಣಗಳು ತಿಳಿಯಬೇಕು. ತಪ್ಪುಗಳನ್ನು ತಿದ್ದಿಕೊಂಡು ಮತ್ತೊಮ್ಮೆ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿ.

ನಿಮ್ಮ ಬಳಿ ಹಳೆಯ ಕಾರ್ಡ್ ಇದ್ದರೆ ಹೀಗೆ ಮಾಡಿ: ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೀವು ಹಲವು ವರ್ಷಗಳಿಂದ ಬಳಸುತ್ತಿದ್ದರೆ ನಿಮ್ಮ ಸ್ಕೋರ್ ಅನ್ನು ಹೆಚ್ಚಿಸಲು ಇದು ನಿರ್ಣಾಯಕವಾಗುತ್ತದೆ. ಆದ್ದರಿಂದ, ತರಾತುರಿಯಲ್ಲಿ ಅದನ್ನು ನಿಷ್ಕ್ರಿಯಗೊಳಿಸಬೇಡಿ. ವಾರ್ಷಿಕ ಶುಲ್ಕಗಳು ಅಧಿಕವಾಗಿದ್ದರೆ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಅವುಗಳನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂಬುದನ್ನು ಕಂಡುಕೊಳ್ಳಿ..

ನಿಮ್ಮ ಸ್ಕೋರ್​ ಆಗಾಗ ಪರಿಶೀಲಿಸುತ್ತಲೇ ಇರಿ..: ನಿಮ್ಮ ಕ್ರೆಡಿಟ್ ಸ್ಕೋರ್ ಸ್ವಲ್ಪಮಟ್ಟಿಗೆ ಏರಿಳಿತಗೊಳ್ಳುವುದು ಸಹಜ. ಆದರೆ, ನೀವು ಇದ್ದಕ್ಕಿದ್ದಂತೆ ಬಿದ್ದರೆ ಆಗ ನೀವು ಜಾಗರೂಕರಾಗಿರಬೇಕು. ನಿಮ್ಮ ಹೆಸರಿನಲ್ಲಿ ಯಾರಾದರೂ ಮೋಸದಿಂದ ಸಾಲ ಪಡೆದಿದ್ದರೆ ಪರಿಶೀಲಿಸಿ. ಕಾಲಕಾಲಕ್ಕೆ ನಿಮ್ಮ ಅಂಕಗಳನ್ನು ಪರಿಶೀಲಿಸುವುದು ಒಳಿತು.

ವಿಚಾರಣೆಗಳು, EMI ಗಳನ್ನು ಪಾವತಿಸದಿರುವುದು, ಕಾರ್ಡ್ ಬಿಲ್‌ಗಳ ವಿಳಂಬ ಪಾವತಿ ಇತ್ಯಾದಿಗಳನ್ನು ಆಗಾಗ ಪರಿಶೀಲಿಸಿ. ವಿವರಗಳಲ್ಲಿ ಯಾವುದೇ ತಪ್ಪುಗಳಿದ್ದರೆ, ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಬ್ಯೂರೋಗಳಿಗೆ ದೂರು ನೀಡಿ. ಅನಧಿಕೃತ ಸಾಲ ಖಾತೆಗಳ ಬಗ್ಗೆ ಎಚ್ಚರವಿರಲಿ. ಆಗ ಮಾತ್ರ ನಿಮ್ಮ ಕ್ರೆಡಿಟ್ ಸ್ಕೋರ್ 800 ಕ್ಕಿಂತ ಕಡಿಮೆಯಾಗುವುದಿಲ್ಲ.

ಸೆಟಲ್‌ಮೆಂಟ್ ಬಗ್ಗೆ ಗಮನವಿರಲಿ..: ಕೆಲವೊಮ್ಮೆ ಬಾಕಿಗಳನ್ನು ಪಾವತಿಸಲು ಸಾಧ್ಯವಾಗದಿದ್ದಾಗ ಬ್ಯಾಂಕ್‌ನೊಂದಿಗೆ ಪಾವತಿ ಒಪ್ಪಂದವನ್ನು (ಸೆಟಲ್‌ಮೆಂಟ್) ಮಾಡಲಾಗುತ್ತದೆ. 50,000 ಕೊಡಲು ಸಾಧ್ಯವಿಲ್ಲ ಆದರೆ 30,000 ಕೊಡುತ್ತೇವೆ ಎನ್ನುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಪಾವತಿಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹಾಳುಮಾಡಬಹುದು. ಹೊಸ ಸಾಲ ಪಡೆಯಲು ಸಾಧ್ಯವಾಗದಿರಬಹುದು. ಆದ್ದರಿಂದ ಸಾಧ್ಯವಾದಷ್ಟು ಪೂರ್ಣ ಮೊತ್ತವನ್ನು ಪಾವತಿಸಲು ಪ್ರಯತ್ನಿಸಿ. ಸೆಟಲ್‌ಮೆಂಟ್​ಗೆ ಹೋದರೆ.. ಸಾಲದಾತರಿಂದ ಕ್ಲಿಯರೆನ್ಸ್ ಪಡೆಯಲು ಮರೆಯಬೇಡಿ..

Source : https://m.dailyhunt.in/news/india/kannada/etvbhar9348944527258-epaper-etvbhkn/kredit+kaard+balake+kadime+maadi+aagaaga+kredit+skor+mele+gamana+harisi+-newsid-n512343384?listname=newspaperLanding&topic=homenews&index=6&topicIndex=0&mode=pwa&action=click

Leave a Reply

Your email address will not be published. Required fields are marked *