“ಮೀಸಲು ಹಂಚಿಕೆ ಜಾತಿ ಆಧಾರಿತವಲ್ಲ ; ಎಚ್.ಆಂಜನೇಯ”

ಚಿತ್ರದುರ್ಗ:17

ಹಿಂದುಳಿವಿಕೆಯೇ ಪ್ರಧಾನ: ಆ.19ರಂದು ಜಾರಿಗೊಳ್ಳಬೇಕು; ಮುಖ್ಯಮಂತ್ರಿಗೆ ಎಚ್.ಆಂಜನೇಯ ಪತ್ರ

ಚಿತ್ರದುರ್ಗ;ಆ.17
ಆಗಸ್ಟ್ 19 ರಂದು ತಾವುಗಳು ಕರೆದಿರುವ ವಿಶೇಷ ಸಚಿವ ಸಂಪುಟದಲ್ಲಿಯೇ
ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಮಾಜಿ ಸಚಿವ ಎಚ್.ಆಂಜನೇಯ ಮುಖ್ಯಮಂತ್ರಿಗೆ
ಕೋರಿಕೆ ಪತ್ರ ಬರೆದಿದ್ದಾರೆ.

ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಮಹತ್ವದ ತೀರ್ಪನ್ನು ಆಗಸ್ಟ್ 1, 2024ರಂದು ಸುಪ್ರೀಂ ಕೋರ್ಟ್ ನೀಡಿದೆ. ಜೊತೆಗೆ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ಸಂಖ್ಯೆ, ಅವರ ಹಿಂದುಳಿಯುವಿಕೆ ಸೇರಿ ನಿಖರ ದತ್ತಾಂಶ ಸಂಗ್ರಹಿಸಿ ಅದರ ಆಧಾರದಡಿ ಮೀಸಲಾಗಿ ಹಂಚಿಕೆ ಮಾಡಲು ಸೂಚಿಸಿದೆ.
ತಾವುಗಳು ಕೂಡ ಈ ವಿಷಯದಲ್ಲಿ ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಎಲ್ಲಿಯೂ ಸಣ್ಣ ಲೋಪ ಆಗದ ರೀತಿ ಒಳಮೀಸಲಾತಿ ಹಂಚಿಕೆಗೆ ಕ್ರಮಕೈಗೊಂಡಿದ್ದೀರಿ. ಎಷ್ಟೇ ಒತ್ತಡ ಬಂದರೂ ಯಾವುದಕ್ಕೂ ಜಗ್ಗದೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕದಸ್ಯ ವಿಚಾರಣಾ ಆಯೋಗ
ರಚಿಸಿ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಪ್ರಸ್ತುತ ಸ್ಥಿತಿಗತಿ
ಅಧ್ಯಯನದೊಂದಿಗೆ ನಿಖರ ಮಾಹಿತಿ ಸಂಗ್ರಹಿಸಲು ಕಾರಣಕರ್ತರಾಗಿದ್ದೀರಿ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಾತಿ ಆಧಾರವಾಗಿಟ್ಟುಕೊಳ್ಳದೆ ಹಿಂದುಳಿಯುವಿಕೆ ಆಧಾರದಡಿ ಐದು ಗುಂಪುಗಳನ್ನಾಗಿಸಿ ಆಯೋಗವು ಮೀಸಲಾತಿ ಹಂಚಿಕೆ ಮಾಡಿದೆ. ಛಲವಾದಿ-ಮಾದಿಗ ಸಂಬಂಧಿತ ಕೆಲ ಜಾತಿಗಳು ಅದಲು-ಬದಲು ಮಾಡಿರುವ ಮೂಲ ಉದ್ದೇಶವೇ ಅವರ ಹಿಂದುಳಿಯುವಿಕೆ ಆಧಾರ.
ಗುಂಪುಗಳ ರಚನೆ ವೇಳೆ ಅತ್ಯಂತ ಹೆಚ್ಚು ಹಿಂದುಳಿದ ಸಣ್ಣ ಜಾತಿಗಳನ್ನು (ಎ) ಶೇ.1, ಮಾದಿಗ ಮತ್ತು ಅದೇ ರೀತಿ ಅಸ್ಪೃಶ್ಯತೆ ಜೊತೆಗೆ ಅತ್ಯಂತ ಹಿಂದುಳಿರುವ ಜಾತಿಗಳನ್ನು (ಬಿ) ಶೇ.6, ಹೊಲೆಯ ಮತ್ತು ಅದೇ ರೀತಿ ಅಸ್ಪೃಶ್ಯತೆ ಜೊತೆಗೆ ಹಿಂದುಳಿರುವ ಜಾತಿಗಳನ್ನು (ಸಿ) ಶೇ.5, ಅಸ್ಪೃಶ್ಯರಲ್ಲದ ಭೋವಿ, ಲಂಬಾಣಿ, ಕೊರಚ, ಕೊರಮ ಈ ನಾಲ್ಕು ಜಾತಿಗಳನ್ನು (ಡಿ) ಶೇ.4, ಮಾದಿಗ, ಛಲವಾದಿ ಎಂದು ಗುರುತಿಸಿಕೊಳ್ಳದೆ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಎಂದೇ ಗುರುತಿಸಿಕೊಂಡಿರುವ ಗುಂಪನ್ನು (ಇ) ಶೇ.1 ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಲಾಗಿದ್ದು, ಈ ಗುಂಪಿನಲ್ಲಿ ಹೊಲೆಯ-ಮಾದಿಗರು
ಇಬ್ಬರೂ ಇದ್ದಾರೆ.

ಜಾತಿ ಸಂಬಂಧಿತಗಳಿಗಿಂತಲೂ ಹಿಂದುಳಿರುವಿಕೆ ಪ್ರಕಾರ ಎ, ಬಿ, ಸಿ, ಡಿ, ಇ ಎಂದು ಗುಂಪು ರಚಿಸಲಾಗಿದೆ. ಆದರೆ, ಈ ವಿಷಯದಲ್ಲಿ ನಮ್ಮ ಸಹೋದರರಾದ ಹೊಲೆಯ ಸಮುದಾಯದವರು ಗೊಂದಲಕ್ಕೆ ಸಿಲುಕಿದ್ದಾರೆ. ವಾಸ್ತುವವಾಗಿ ಜಾತಿ ಆಧಾರಿತ ಗುಂಪು ರಚಿಸಿಲ್ಲ, ಅವರವರ ಹಿಂದುಳಿವಿಕೆ ಪರಿಗಣಿಸಿ ವರ್ಗೀಕರಣ ಮಾಡಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಆಗಿದೆ. ಈ ಸತ್ಯ ಅರಿತೋ ಅಥವಾ ತಿಳಿಯದೆಯೋ ಛಲವಾದಿ ಸಮುದಾಯದಲ್ಲಿನ ಕೆಲವರು ಅನಗತ್ಯ ಗೊಂದಲ
ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಈ ವಿಷಯಕ್ಕೆ ತಾವು ಯಾವುದೇ ರೀತಿ ಮನ್ನಣೆ ನೀಡಬಾರದು. ಒಂದು ವೇಳೆ ಮಾದಿಗ (ಬಿ) ಗುಂಪಿನಲ್ಲಿರುವ ಛಲವಾದಿ ಸಂಬಂಧಿತ ಜಾತಿಗಳಾದ ಪರಿಯಾ, ಮುಗೇರಾ ಇವುಗಳನ್ನು ಹೊಲೆಯ (ಸಿ) ಗುಂಪಿಗೆ ಸೇರಿಸಿದರೂ ಮಾದಿಗರಿರುವ (ಬಿ) ಗುಂಪು ಜನಸಂಖ್ಯೆಯಲ್ಲಿ ಹೆಚ್ಚು ಇರುತ್ತದೆ. ಇಲ್ಲಿ ಮುಖ್ಯವಾಗಿ ಜಾತಿ ಜನಸಂಖ್ಯೆ ಮೇಲೆ ಮೀಸಲಾತಿ ಹಂಚಿಕೆ ಆಗಿಲ್ಲವೆಂಬ ಸತ್ಯ ಅರಿತುಕೊಳ್ಳಬೇಕು. ಅವರವರ ಹಿಂದುಳಿವಿಕೆಯನ್ನೇ
ಪ್ರಧಾನವಾಗಿಟ್ಟುಕೊಂಡು ಮೀಸಲಾತಿ ವರ್ಗೀಕರಣ ಮಾಡಲಾಗಿದೆ.

ಪ್ರಜ್ಞಾವಂತರು, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗತಿಯಲ್ಲಿ ಮಾದಿಗರಿಗಿಂತಲೂ
ಮುಂದಿರುವ ಸಹೋದರರಾದ ಹೊಲೆಯ ಸಮುದಾಯದವರು ಒಳಮೀಸಲಾತಿ ವರ್ಗೀಕರಣವನ್ನು ಸಂವಿಧಾನದ ಕಣ್ಣುಗಳಲ್ಲಿ ನೋಡಬೇಕಾಗಿದೆ. ಯಾವುದೇ ರೀತಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಿದರೆ ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧ ನಡೆ ಆಗಿರಲಿದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ದೇವನೂರು ಮಹಾದೇವ ಅಂತಹ ಹಿರಿಯ ಸಾಹಿತಿಗಳು ಪ್ರಜ್ಞಾಪೂರ್ವಕವಾಗಿಯೇ ಮುಖ್ಯಮಂತ್ರಿಗೆ
ಪತ್ರ ಬರೆದು ಯಥವತ್ತಾಗಿ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿರುವುದು, ಇದೇ ರೀತಿ ಅನೇಕ ಅನ್ಯ ಸಮುದಾಯದವರು, ಛಲವಾದಿ ಜಾತಿಯ ಪ್ರಜ್ಞಾವಂತರು ವರದಿ ಜಾರಿಗೊಳಿಸುವಂತೆ ಕೋರಿದ್ದಾರೆ.
ಒಟ್ಟು ಕುಟುಂಬದಲ್ಲಿದ್ದವರು, ಅಣ್ಣ-ತಮ್ಮದಿರುಗಳಾದ ನಾವುಗಳು ಯಾರೋಬ್ಬರ ಮಧ್ಯಸ್ಥಿಕೆ ಇಲ್ಲದೆ ಆಸ್ತಿ ಹಂಚಿಕೆ ಮಾಡಿಕೊಳ್ಳುವ ರೀತಿ ಒಳಮೀಸಲಾತಿ ಜಾರಿ ವಿಷಯದಲ್ಲಿ ಪ್ರಬುದ್ಧತೆ ಮೆರೆಯಬೇಕಾಗಿದೆ. ಮಾದಿಗರು ಚಪ್ಪಲಿ ಹೊಲೆದು, ಚರಡಿ, ಕಕ್ಕಸ್ ಗುಂಡಿಗಳಲ್ಲಿ ಸ್ವಚ್ಛತೆ ನಡೆಸುತ್ತಲೇ ಜೀವಿಸುತ್ತಿರುವ ಜನರು. ಪೌರಕಾರ್ಮಿಕರಲ್ಲಿ ಶೇ.99ರಷ್ಟು ಮಂದಿ ಮಾದಿಗರೇ ಇದ್ದಾರೆ. ಇದರರ್ಥ ಅತ್ಯಂತ ಕೀಳುಮಟ್ಟದ ಜೀವನದಲ್ಲಿ ಮಾದಿಗರು ಇದ್ದಾರೆಂಬುದಕ್ಕೆ ಕನ್ನಡಿ ಆಗಿದೆ.
ಆದ್ದರಿಂದ ಛಲವಾದಿ ಸಮುದಾಯದವರು ಯಾವುದೇ ರೀತಿ ಗೊಂದಲಕ್ಕೆ ಸಿಲುಕದೆ ಸಂವಿಧಾನದ ಆಶಯಗಳೊಂದಿಗೆ ಚಿಂತನೆ ನಡೆಸಬೇಕು. ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಾದಿಗ ಮತ್ತು ಸಣ್ಣಪುಟ್ಟ ಜಾತಿಗಳು ತಮ್ಮಂತೆ ಶಿಕ್ಷಣ, ಉದ್ಯೋಗ, ಹಣ-ಆಸ್ತಿ ಗಳಿಕೆಯಲ್ಲಿ ಮುಖ್ಯವಾಹಿನಿಗೆ ಬರಲಿ ಎಂಬ ಮಾತೃಹೃದಯ ಹೊಂದಬೇಕು.
ಇಲ್ಲದಿದ್ದರೇ ಅಣ್ಣ-ತಮ್ಮಂದಿರ ಸಣ್ಣ ಮನಸ್ಥಾಪದಿಂದ ದಲಿತ ಶಕ್ತಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಈ ಎಲ್ಲ ಸತ್ಯವನ್ನು ಅನುಭವದಿಂದಲೇ ಪಡೆದಿರುವ ಸಾಮಾಜಿಕ ನ್ಯಾಯದ ಹರಿಕಾರರು, ರಾಷ್ಟ್ರಮಟ್ಟದಲ್ಲಿ ಅಹಿಂದ ವರ್ಗದ ಚಾಂಪಿಯನ್ ಎಂಬ ಗೌರವಕ್ಕೆ ಪಾತ್ರರಾಗಿರುವ ತಾವು
ಆಗಸ್ಟ್ 19ರಂದು ಕರೆದಿರುವ ವಿಶೇಷ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೊಳಿಸಿದ ಕೀರ್ತಿಗೆ ಪಾತ್ರರಾಗಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಕೋರಿದ್ದಾರೆ.

Views: 13

Leave a Reply

Your email address will not be published. Required fields are marked *