Rinku Singh: ಬಡ ಕ್ರಿಕೆಟಿಗರಿಗಾಗಿ ಹಾಸ್ಟೆಲ್ ನಿರ್ಮಿಸಿದ ರಿಂಕು ಸಿಂಗ್

ಏಪ್ರಿಲ್ 9, 2023...ಈ ದಿನವನ್ನು ಯಾರು ಮರೆತರೂ ಇಬ್ಬರು ಕ್ರಿಕೆಟಿಗರು ಮಾತ್ರ ತಮ್ಮ ಜೀವಮಾನದಲ್ಲಿ ಮರೆಯಲ್ಲ. ಅದರಲ್ಲಿ ಒಬ್ಬರು ಯಶ್ ದಯಾಳ್. ಮತ್ತೊಬ್ಬರು ರಿಂಕು ಸಿಂಗ್. ದಯಾಳ್ ಪಾಲಿಗೆ ಕಾಡುವ ಕನಸಾಗಿ ಏಪ್ರಿಲ್ ಕಾಡಿದ್ರೆ, ರಿಂಕು ಪಾಲಿಗೆ ಅವಿಸ್ಮರಣೀಯ ದಿನ. ಏಕೆಂದರೆ ಗುಜರಾತ್ ಟೈಟಾನ್ಸ್ ಹಾಗೂ ಕೆಕೆಆರ್ ನಡುವಣ ಪಂದ್ಯದಲ್ಲಿ ಯಶ್ ದಯಾಳ್ ಅವರ ಕೊನೆಯ ಓವರ್​ನಲ್ಲಿ ರಿಂಕು ಸಿಂಗ್ 5 ಭರ್ಜರಿ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡಕ್ಕೆ ಕಷ್ಟಸಾಧ್ಯದ ಗೆಲುವು ತಂದುಕೊಟ್ಟಿದ್ದರು.ಅಂದಿನಿಂದ ಮನೆಮಾತಾಗಿರುವ ರಿಂಕು ಸಿಂಗ್ ಅವರ ಮತ್ತೊಂದು ಮುಖ ಕೂಡ ಇದೀಗ ಅನಾವರಣಗೊಂಡಿದೆ. ಉತ್ತರ ಪ್ರದೇಶ ಮೂಲದ ರಿಂಕು ಸಿಂಗ್ ಬಡ ಕುಟುಂಬದಿಂದ ಅರಳಿದ ಪ್ರತಿಭೆ. ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಇಂದು ಪ್ರಸಿದ್ಧಿ ಪಡೆದಿರುವ ಆಟಗಾರನಾಗಿ ಬೆಳೆದು ನಿಂತಿದ್ದಾರೆ.ಆದರೆ ರಿಂಕು ಸಿಂಗ್ ತಾನು ಸವೆಸಿದ ಹಾದಿಯನ್ನು ಮಾತ್ರ ಮರೆಯಲಿಲ್ಲ. ಎಲ್​ಪಿಜಿ ಗ್ಯಾಸ್ ವಿತಕರಾಗಿರುವ ಅವರ ತಂದೆಗೆ ಮಗನ ಕ್ರಿಕೆಟ್ ಅಭ್ಯಾಸಕ್ಕಾಗಿ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಇನ್ನು ಅಣ್ಣ ಆಟೋರಿಕ್ಷಾ ಚಾಲಕ. ಮತ್ತೋರ್ವ ಅಣ್ಣ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಬೆಂಬಲದ ಹೊರತಾಗಿಯೂ ರಿಂಕು ಸಿಂಗ್ ಆರ್ಥಿಕ ಸಂಕಷ್ಟದಿಂದ ಒದ್ದಾಡಿದ್ದರು.ತನ್ನಂತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಬಡ ಉದಯೋನ್ಮುಖ ಕ್ರಿಕೆಟಿಗರಿಗೆ ನೆರವಾಗಲು ರಿಂಕು ಸಿಂಗ್ ಮುಂದಾಗಿದ್ದಾರೆ. ಆದರೆ ಇದು ಈ ನೇಮ್-ಫೇಮ್​ ಬಂದ ಬಳಿಕವಲ್ಲ. ಬದಲಾಗಿ ಈ ಹಿಂದೆಯೇ ರಿಂಕು ಸಿಂಗ್ ಇಂತಹದೊಂದು ಮಹತ್ವಾಕಾಂಕ್ಷೆಯ ಕಾರ್ಯಕ್ಕೆ ಕೈ ಹಾಕಿದ್ದರು.ಅದರಂತೆ ಇದೀಗ ತಮ್ಮ ಬಾಲ್ಯದ ಕೋಚ್ ಅವರೊಂದಿಗೆ ಕೈ ಜೋಡಿಸಿ ಬಡ ಕ್ರಿಕೆಟಿಗರಿಗಾಗಿ ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ. ಈ ಹಾಸ್ಟೆಲ್ ಕೆಲಸಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ.ತಮ್ಮ ಬಾಲ್ಯದಲ್ಲಿ ನೆರವಾಗಿದ್ದ ಕೋಚ್ ಮಸೂದುಝ್-ಜಾಫರ್ ಅಮಿನಿ ನಡೆಸುತ್ತಿರುವ ಅಲಿಗಢ್ ಕ್ರಿಕೆಟ್ ಸ್ಕೂಲ್ ಮತ್ತು ಅಕಾಡೆಮಿಯಲ್ಲಿ ರಿಂಕು ಸಿಂಗ್ ಹಾಸ್ಟೆಲ್​ಗಳನ್ನು ನಿರ್ಮಿಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಶುರುವಾದ ಈ ನಿರ್ಮಾಣ ಕಾರ್ಯವು ಇದೀಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ.ಈ ಹಾಸ್ಟೆಲ್​ನಲ್ಲಿ 14 ಕೊಠಡಿಗಳಿದ್ದು, ಪ್ರತಿ ರೂಮ್​ನಲ್ಲೂ ನಾಲ್ಕು ಮಂದಿ ತಂಗಬಹುದು. ಅಲ್ಲದೆ ಒಂದು ಶೆಡ್ ಮತ್ತು ಪೆವಿಲಿಯನ್ ಹಾಗೂ  ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಹಾಸ್ಟೆಲ್​ನಲ್ಲೇ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸುಮಾರು 50 ಲಕ್ಷ ವೆಚ್ಚವಾಗುತ್ತಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಿಂಕು ಸಿಂಗ್ ಭರಿಸುತ್ತಿದ್ದಾರೆ ಎಂದು ಕೋಚ್ ಮಸೂದುಝ್-ಜಾಫರ್ ಅಮಿನಿ ತಿಳಿಸಿದ್ದಾರೆ.ಒಟ್ಟಿನಲ್ಲಿ ಈ ಬಾರಿಯ ಐಪಿಎಲ್​ ಮೂಲಕ ಒಟ್ಟು 55 ಲಕ್ಷ ರೂ. ಸಂಭಾವನೆ ಪಡೆಯುತ್ತಿರುವ ರಿಂಕು ಸಿಂಗ್, ತನ್ನೂರಿನ ಬಡ ಉದಯೋನ್ಮುಖ ಕ್ರಿಕೆಟಿಗರಿಗಾಗಿ 50 ಲಕ್ಷ ರೂ. ಭರಿಸುತ್ತಿರುವುದು ಮೆಚ್ಚಲೇಬೇಕಾದ ಕೆಲಸ. ಅದರಲ್ಲೂ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ನಾಣ್ಣುಡಿಗೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಸಿಕ್ಸರ್ ಕಿಂಗ್ ರಿಂಕು ಸಿಂಗ್.

source https://tv9kannada.com/photo-gallery/cricket-photos/ipl-2023-rinku-singh-is-building-a-hostel-for-poor-children-kannada-news-zp-au50-557823.html

Leave a Reply

Your email address will not be published. Required fields are marked *