RAKESH POOJARY : ”ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ” ಎಂದು ರಿಷಬ್ ತಿಳಿಸಿದ್ದಾರೆ.

‘ಕಾಮಿಡಿ ಕಿಲಾಡಿ’ ಶೋ ಮೂಲಕ ಕರುನಾಡಿನ ಮನೆ ಮನೆ ತಲುಪಿದ್ದ ಪ್ರತಿಭೆ ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ. ಬಹುಕಾಲ ಬಾಳಿ ಬದುಕಬೇಕಿದ್ದ ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯನಟ ಭಾನುವಾರ ರಾತ್ರಿ ಉಡುಪಿಯ ನಿಟ್ಟೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದರು. ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ತಮ್ಮ 34ರ ಹರೆಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು ಮಾತ್ರ ದುರಂತವೇ ಸರಿ. ಕಿರಿವಯಸ್ಸಿನಲ್ಲೇ ಕೊನೆಯುಸಿರೆಳೆದ ನಟನಿಗೆ ಅಭಿಮಾನಿಗಳೂ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.
‘ಕಾಂತಾರ ಚಾಪ್ಟರ್ 1’ ಕನ್ನಡ ಚಿತ್ರರಂಗದ ಬಹುನರೀಕ್ಷಿತ ಚಿತ್ರ. ಈ ಸಿನಿಮಾದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆ ಹಲವು ಪ್ರತಿಭೆಗಳು ತೆರೆ ಹಂಚಿಕೊಂಡಿದ್ದಾರೆ. ಆ ಪೈಕಿ ರಾಕೇಶ್ ಪೂಜಾರಿ ಕೂಡಾ ಒಬ್ಬರಾಗಿದ್ದರು. ಇದೀಗ ಅವರನ್ನು ಸ್ಮರಿಸಿ ಕಾಂತಾರ ಸಾರಥಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಪೋಸ್ಟ್ ಶೇರ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ಪೋಸ್ಟ್: ನಟ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ರಾಕೇಶ್ ಪೂಜಾರಿ ಭಾವಚಿತ್ರ ಹಂಚಿಕೊಂಡು, ”ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಪೋಸ್ಟ್: ಕಾಂತಾರ ಸಿನಿಮಾದಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ರಾಕೇಶ್ ಪೂಜಾರಿ ಅವರ ಫೋಟೋ ಹಂಚಿಕೊಂಡು, ”ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ” ಎಂದು ಬರೆದುಕೊಂಡಿದೆ.
ಜೊತೆಗೆ, ಅದ್ಭುತ ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದೇವೆ. ಮನರಂಜನಾ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಗಳನ್ನು ಮತ್ತು ಅವರ ಪ್ರತಿಭೆಯನ್ನು ಸ್ಮರಿಸಲಾಗುವುದು. ಈ ಕಠಿಣ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಹೃದಯ ಮಿಡಿಯುತ್ತಿದೆ. ಈ ದುಃಖದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನಮ್ಮ ಸಂತಾಪ ಮತ್ತು ಪ್ರಾರ್ಥನೆಗಳಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ಅನುಶ್ರೀ ಪೋಸ್ಟ್: ಕನ್ನಡ ಚಿತ್ರರಂಗದ ಜನಪ್ರಿಯ ಆ್ಯಂಕರ್ ಅನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಾಕೇಶ್ ಪೂಜಾರಿ ಜೊತೆಗಿರುವ ಫೋಟೋ ಹಂಚಿಕೊಂಡು, ”ರಾಕೇಶ. ನಗು ಆರೋಗ್ಯವಾಗಿರುತ್ತೀಯ. ನಗಿಸು ಸುಖವಾಗಿರುತ್ತೀಯ. ಇದೆಲ್ಲ ಸುಳ್ಳು ಅಲ್ವಾ ಮಾರಾಯ! ನಿಂಗೆ ಹೇಗೆ ಹೇಳಲಿ ವಿದಾಯ! ಒಂದಂತೂ ಸತ್ಯ ರಾಕಿ, ನಿನ್ನ ಮುಗುಳ್ನಗು ಅಮರ. ಹೋಗಿ ಬಾ ತಮ್ಮ” ಎಂದು ಬರೆದುಕೊಂಡಿದ್ದಾರೆ.
ಹುಟ್ಟೂರು ಉಡುಪಿಯಲ್ಲಿ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ಜರುಗಿದೆ. ಅನುಶ್ರೀ ಸೇರಿ ಅನೇಕರು ರಾಕೇಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
Source : ETV Bharat
Views: 25