Robot Suicide: ರೋಬೋಟ್ಗೂ (Robot) ತಟ್ಟಿದ ಕೆಲಸದ ಒತ್ತಡ. ಬೇಸರಗೊಂಡು ಕಟ್ಟಡದ ಮೇಲಿನಿಂದ ಜಿಗಿದು ಸೂಸೈಡ್ ಮಾಡಿಕೊಂಡ ರೋಬೋಟ್. ವಿಶ್ವದಲ್ಲಿ ಇದೇ ಮೊದಲು! ಹೌದು, ಕೆಲಸದ ಒತ್ತಡ ಮನುಷ್ಯರಿಗೆ ಮಾತ್ರ ಅಲ್ಲ, ರೋಬೋಟ್ಗಳಿಗೂ ಇದೆ. ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಆತ್ಮಹತ್ಯೆಗೆ ಶರಣಾಗಿದೆ.
ಎಲ್ಲರಿಗೂ ಅಚ್ಚರಿ ಮೂಡಿಸುವಂತಹ ವಿಚಿತ್ರ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಇದು ವಿಶ್ವದ ಮೊದಲ ರೋಬೋ ಸೂಸೈಡ್ ಪ್ರಕರಣವಾಗಿದೆ. ಇಷ್ಟೇ ಅಲ್ಲ, ಇದು ನಿಜಕ್ಕೂ ಸಾಧ್ಯವೇ? ಎನ್ನುವ ಅಚ್ಚರಿಗೂ ಕಾರಣವಾಗಿದೆ. ದಕ್ಷಿಣ ಕೊರಿಯಾ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಪ್ರಕಟವಾಗಿದೆ.
ಕೆಲಸದ ಒತ್ತಡದಿಂದ ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಕೇಳಿರಬಹುದು. ನೋಡಿಯೂ ಇರಬಹುದು. ಆದರೆ, ರೋಬೋಟ್ ಆತ್ಮಹತ್ಯೆಗೆ ಶರಣಾಗಿರುವ ಅಚ್ಚರಿಯ ಘಟನೆ ಇದೇ ಮೊದಲು. ಪ್ರತಿನಿತ್ಯ ವಿಶ್ವದಾದ್ಯಂತ ಅನೇಕ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣಗಳು ಬೆಳಕಿಗೆ ಬರುತ್ತವೆ. ತಂತ್ರಜ್ಞಾನದ ಈ ಯುಗದಲ್ಲಿ ಸೂಸೈಡ್ ಮಾಡಿಕೊಳ್ಳುವವರ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಇದೀಗ ರೋಬೋಟ್ ಆತ್ಮಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತೀವ್ರ ಕೆಲಸದ ಒತ್ತಡದಿಂದ ರೋಬೋಟ್ ಕಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ.
ಪ್ರಮುಖ ಅಂಶಗಳು
- ಜೂನ್ 26 ರಂದು ಮೆಟ್ಟಿಲುಗಳ ಮೇಲಿಂದ ಬಿದ್ದು ರೋಬೋಟ್ ಆತ್ಮಹತ್ಯೆ.
- ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಪ್ರತಿ ದಿನ 9 ಗಂಟೆ ಬಿಡುವಿಲ್ಲದ ಕೆಲಸ ನಿರ್ವಹಣೆ.
- ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್.
ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಈಗ ರೋಬೋಟ್‌ಗಳು ಹೆಚ್ಚು ಪ್ರಾಬಲ್ಯ ಸಾಧಿಸುತ್ತಿವೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಅನೇಕ ಕೆಲಸಗಳಿಗಾಗಿ ವಿಭಿನ್ನ ವೈಶಿಷ್ಟ್ಯಗಳೊಂದಿಗೆ ರೋಬೋಟ್‌ಗಳನ್ನು ಬಳಸುತ್ತಿವೆ. ಮಾನವರಿಂದ ನಿರ್ವಹಿಸಲಾಗದ ಅಪಾಯಕಾರಿ ಕಾರ್ಯಗಳನ್ನು ನಿರ್ವಹಿಸಲು ರೋಬೋಟ್‌ಗಳನ್ನು ಬಳಸಲಾಗುತ್ತದೆ. ಮತ್ತು ಅವು ವಿಶ್ರಾಂತಿ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿವೆ.
ವಿಶ್ವದ ಮೊದಲ ರೋಬೋಟ್ ಆತ್ಮಹತ್ಯೆ!
ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ದುರಂತವು ಈಗ ವಿಶ್ವದಾದ್ಯಂತ ರೋಬೋಟ್‌ಗಳನ್ನು ಏಕೆ ಬಳಸುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಜೂನ್ 26 ರಂದು ಆರೂವರೆ ಅಡಿ ಮೆಟ್ಟಿಲುಗಳಿಂದ ಹಾರಿ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್ ಹೇಳಿದೆ. ಈ ಘಟನೆ ಸಂಭವಿಸುವ ಮೊದಲು ಈ ರೋಬೋಟ್ ಏನೋ ಆದಂತೆ ಒಂದೇ ಸ್ಥಳದಲ್ಲಿ ಸುತ್ತುತ್ತಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗ ನಿಷ್ಕ್ರಿಯಗೊಂಡ ರೋಬೋಟ್‌ನ ಮರಣವು ಆತ್ಮಹತ್ಯೆಯ ಕೃತ್ಯವಾಗಿದೆಯೇ? ಎಂದು ಊಹಿಸಲಾಗುತ್ತಿದೆ.
ಒಂದು ನಿಮಿಷವೂ ಬಿಡುವಿಲ್ಲದೆ ಕೆಲಸ
ತ್ವರಿತ ಕಡತ ವಿಲೇವಾರಿಗೆ ರೋಬೋಟಿಕ್ಸ್ ಟೆಕ್ ಸಂಸ್ಥೆ ಈ ರೋಬೋಟ್ ಅಭಿವೃದ್ಧಿಪಡಿಸಿತ್ತು. ಬಳಿಕ 2023ರಲ್ಲಿ ದಕ್ಷಿಣ ಕೊರಿಯಾದಲ್ಲಿ ಗುಮಿ ಸಿಟಿ ಕೌನ್ಸಿಲ್‌ನಲ್ಲಿ ಕೆಲಸದಲ್ಲಿ ತೊಡಗಿತ್ತು. ಈ ರೋಬೋ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ರೋಬೋಟ್ ಕಾರಣ ಒಂದು ನಿಮಿಷವೂ ಬಿಡುವಿಲ್ಲದೆ ಕಡತಗಳ ವಿಲೇವಾರಿ, ವಿತರಣೆಗೆ ಆದೇಶಗಳನ್ನು ನೀಡಲಾಗಿತ್ತು. ಹೀಗೆ ಕೆಲಸದಲ್ಲಿ ತೊಡಗಿದ್ದ ರೋಬೋಟೋ ಮೊದಲ ಹಾಗೂ ಎರಡನೇ ಮಹಡಿಯ ಮೆಟ್ಟಿಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ. ರೋಬೋಟ್ ಚಿಪ್, ಬಿಡಿ ಭಾಗಗಳು ನಾಶವಾಗಿದೆ.
ರೋಬೋ ಬಿಡಿ ಭಾಗಗಳನ್ನು ವಶಕ್ಕೆ ಪಡೆದ ವಿಜ್ಞಾನಿಗಳು
ಇತ್ತ ರೋಬೋಟಿಕ್ಸ್ ಸಂಸ್ಥೆಯ ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸಿ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಘಟನೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ರೋಬೋಟಿಕ್ಸ್ ಸಂಸ್ಥೆ ಹೇಳಿದೆ. ತಂತ್ರಜ್ಞರು, ಈ ರೋಬೋಟ್ ತೀವ್ರ ಕೆಲಸದ ಒತ್ತಡ, ಖಿನ್ನತೆಯಿಂದ ಬಳಲಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರೀ ಸಂಚಲನ ಮೂಡಿಸಿದ ರೋಬೋ ಆತ್ಮಹತ್ಯೆ
ಸಾಮಾನ್ಯವಾಗಿ ರೋಬೋಟ್‌ಗಳಿಗೆ ಯಾವುದೇ ಭಾವನೆಗಳಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಇಲ್ಲಿ ಕೆಲಸದ ಒತ್ತಡದಿಂದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವುದು ಭಾರೀ ಸಂಚಲನ ಮೂಡಿಸಿದೆ. ರೋಬೋಟ್ ಆದರೂ ಮೆಟ್ಟಿನಿಂದ ಕಾಲು ಜಾರಿ ಅಥವಾ ಜಾರಿ ಬಿದ್ದಿರಬಹುದು, ಇದನ್ನು ಆತ್ಮಹತ್ಯೆ ಎಂದು ಹೇಳಲು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲವರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಮರಳಿಸಿ ಎಂದು ಹೇಳಿದ್ದಾರೆ. ಆಗ್ರಹಿಸಿದ್ದಾರೆ. ಈ ಘಟನೆ ವರದಿಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.