ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರೋಹಿತ್ ಶರ್ಮಾ.

ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 251 ರನ್ ಕಲೆಹಾಕಿದರೆ, ಭಾರತ ತಂಡ ಈ ಗುರಿಯನ್ನು ಕೇವಲ 49 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಈ ಹಿಂದೆ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದರು. ಅದರಂತೆ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ 37 ವರ್ಷದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇವೆಲ್ಲವೂ ಕೇವಲ ವದಂತಿ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಟ್​ಮ್ಯಾನ್ “ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಹೊಂದುತ್ತಿಲ್ಲ. ದಯವಿಟ್ಟು ಇಂತಹ ವದಂತಿಗಳನ್ನು ಹರಡಬೇಡಿ” ಎಂದು ಮನವಿ ಮಾಡಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆಯುವುದು ಕನ್ಫರ್ಮ್ ಆಗಿದೆ.

ಅಲ್ಲದೆ ಭವಿಷ್ಯದ ಬಗ್ಗೆ ಯಾವುದೇ ಯೋಜನೆಗಳಿಲ್ಲ ಎಂದು ತಿಳಿಸಿರುವ ರೋಹಿತ್ ಶರ್ಮಾ, ಏನು ಆಗುತ್ತಿದೆಯೋ ಅದು ಮುಂದುವರಿಯುತ್ತದೆ ಎಂದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಮತ್ತಷ್ಟು ಕಾಲ ಆಡುವ ಇರಾದೆಯಲ್ಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯೊಂದಿಗೆ ರೋಹಿತ್ ಶರ್ಮಾ:

https://twitter.com/i/status/1898898562261434537

ಸದ್ಯ ನಿವೃತ್ತಿ ನೀಡುತ್ತಿಲ್ಲ ಎಂದಿರುವ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಮುಂದಿನ ಎರಡು ವರ್ಷಗಳಲ್ಲಿ ಅವರ ವಯಸ್ಸು 39 ಆಗಿರಲಿದೆ. ಅತ್ತ ಏಕದಿನ ವಿಶ್ವಕಪ್ ಗೆಲ್ಲದಿರುವ ಕೊರಗು ಹೊಂದಿರುವ ಹಿಟ್​ಮ್ಯಾನ್ ಅವರ ಮುಂದಿನ ಟಾರ್ಗೆಟ್ ಕೂಡ 50 ಓವರ್​ಗಳ ವಿಶ್ವಕಪ್​.

ಹೀಗಾಗಿ ಪ್ರಸ್ತುತ ಫಾರ್ಮ್​ ಅನ್ನು ಮುಂದಿನ ಎರಡು ವರ್ಷಗಳ ಕಾಲ ಮುಂದುವರೆಸಿ ಏಕದಿನ ವಿಶ್ವಕಪ್​ನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳಲು ಪ್ಲ್ಯಾನ್ ರೂಪಿಸಿದ್ದಾರೆ. ಇದಾಗ್ಯೂ 37 ವರ್ಷದ ರೋಹಿತ್ ಶರ್ಮಾ ಮುಂದಿನ ಎರಡು ವರ್ಷಗಳ ಕಾಲ ತಂಡದಲ್ಲಿ ಇರಲಿದ್ದಾರಾ ಎಂಬುದೇ ಪ್ರಶ್ನೆ.

Source : https://tv9kannada.com/sports/cricket-news/rohit-sharma-confirms-hes-not-retiring-from-odi-cricket-zp-989181.html

Leave a Reply

Your email address will not be published. Required fields are marked *