SA20 Final: ಸೌತ್ ಆಫ್ರಿಕಾ ಟಿ20 ಲೀಗ್ನ ಮೂರನೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಕೇಪ್ಟೌನ್ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. 2023 ಮತ್ತು 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮಣಿಸಿ ಎಂಐ ಕೇಪ್ಟೌನ್ ತಂಡ ಇದೇ ಮೊದಲ ಬಾರಿ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ.
![](https://samagrasuddi.co.in/wp-content/uploads/2025/02/image-66-1024x576.png)
ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ MI ಕೇಪ್ಟೌನ್ ತಂಡವು ಚಾಂಪಿಯನ ಪಟ್ಟ ಅಲಂಕರಿಸಿದೆ. ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು 76 ರನ್ಗಳಿಂದ ಮಣಿಸಿ ಎಂಐ ಕೇಪ್ಟೌನ್ ಚೊಚ್ಚಲ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ MI ಕೇಪ್ಟೌನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ MI ಕೇಪ್ಟೌನ್ ತಂಡಕ್ಕೆ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (23) ಹಾಗೂ ರಿಯಾನ್ ರಿಕೆಲ್ಟನ್ (33) ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 51 ರನ್ ಪೇರಿಸಿದ ಬಳಿಕ ರಿಕೆಲ್ಟನ್ ಔಟಾದರು. ಇದರ ಬೆನ್ನಲ್ಲೇ ವ್ಯಾನ್ ಡೆರ್ ಡಸ್ಸೆನ್ ಕೂಡ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ರೀಝ ಹೆಂಡ್ರಿಕ್ಸ್ (0) ಶೂನ್ಯಕ್ಕೆ ಔಟಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾನರ್ ಎಸ್ಟರ್‌ಹುಯಿಜೆನ್ 39 ರನ್ ಬಾರಿಸಿದರೆ, ಜಾರ್ಜ್ ಲಿಂಡೆ 20 ರನ್ಗಳಿಸಿದರು. ಇನ್ನು ಅಂತಿಮ ಹಂತದಲ್ಲಿ ಡೆವಾಲ್ಡ್ ಬ್ರೆವಿಸ್ 18 ಎಸೆತಗಳಲ್ಲಿ 4 ಸಿಕ್ಸ್ಗಳೊಂದಿಗೆ 38 ರನ್ ಚಚ್ಚಿದರು. ಈ ಮೂಲಕ ಎಂಐ ಕೇಪ್ಟೌನ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.
182 ರನ್ಗಳ ಕಠಿಣ ಗುರಿ:
182 ರನ್ಗಳ ಗುರಿ ಪಡೆದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕಗಿಸೊ ರಬಾಡ ಹಾಗೂ ಟ್ರೆಂಟ್ ಬೌಲ್ಟ್ ಯಶಸ್ವಿಯಾದರು. ರಬಾಡ, ಡೇವಿಡ್ ಬೆಡಿಂಗ್ಹ್ಯಾಮ್ (5) ವಿಕೆಟ್ ಪಡೆದರೆ, ಬೌಲ್ಟ್ ಜೋರ್ಡಾನ್ ಹರ್ಮನ್ (1) ವಿಕೆಟ್ ಕಬಳಿಸಿದರು.
ಇನ್ನು ಟೋನಿ ಡಿ ಝೋರ್ಝಿ (26) ಯನ್ನು ರಶೀದ್ ಖಾನ್ ಔಟ್ ಮಾಡಿದರೆ, ಟಾಮ್ ಅಬೆಲ್ (30) ಜಾರ್ಜ್ ಲಿಂಡೆಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ (6) ಲಿಂಡೆ ಎಸೆತದಲ್ಲಿ ಔಟಾದರು. ಇದರ ಬೆನ್ನಲ್ಲೇ ಡೇಂಜರಸ್ ಟ್ರಿಸ್ಟನ್ ಸ್ಟಬ್ಸ್ (15) ವಿಕೆಟ್ ಪಡೆಯುವಲ್ಲಿ ಕಗಿಸೊ ರಬಾಡ ಯಶಸ್ವಿಯಾದರು.
ಅಂತಿಮವಾಗಿ 18.4 ಓವರ್ಗಳಲ್ಲಿ 105 ರನ್ಗಳಿಸಿ ಸನ್ರೈಸರ್ಸ್ ಈಸ್ಟನ್ ಕೇಪ್ ತಂಡವು ಆಲೌಟ್ ಆಯಿತು. ಈ ಮೂಲಕ ಎಂಐ ಕೇಪ್ಟೌನ್ ತಂಡವು 76 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಎಂಐ ಕೇಪ್ಟೌನ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಟ್ರೆಂಟ್ ಬೌಲ್ಟ್ 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದರೆ, ಕಗಿಸೊ ರಬಾಡ 3.4 ಓವರ್ಗಳಲ್ಲಿ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಕಾರ್ಬಿನ್ ಬಾಷ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.
ಎಂಐ ಕೇಪ್ಟೌನ್ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ , ಡೆವಾಲ್ಡ್ ಬ್ರೆವಿಸ್ , ಕಾನರ್ ಎಸ್ಟರ್‌ಹ್ಯೂಜೆನ್ , ಜಾರ್ಜ್ ಲಿಂಡೆ , ಡೆಲಾನೊ ಪಾಟ್‌ಗೀಟರ್ , ರೀಝ ಹೆಂಡ್ರಿಕ್ಸ್ , ಕಾರ್ಬಿನ್ ಬಾಷ್ , ರಶೀದ್ ಖಾನ್ (ನಾಯಕ) , ಕಗಿಸೊ ರಬಾಡಾ , ಟ್ರೆಂಟ್ ಬೌಲ್ಟ್.
ಸನ್ರೈಸರ್ಸ್ ಈಸ್ಟರ್ನ್ ಕೇಪ್ ಪ್ಲೇಯಿಂಗ್ 11: ಟೋನಿ ಡಿ ಝೋರ್ಝಿ , ಡೇವಿಡ್ ಬೆಡಿಂಗ್ಹ್ಯಾಮ್ , ಜೋರ್ಡಾನ್ ಹರ್ಮನ್ , ಐಡೆನ್ ಮಾರ್ಕ್ರಾಮ್ (ನಾಯಕ) , ಟಾಮ್ ಅಬೆಲ್ , ಟ್ರಿಸ್ಟಾನ್ ಸ್ಟಬ್ಸ್ (ವಿಕೆಟ್ ಕೀಪರ್) , ಮಾರ್ಕೊ ಯಾನ್ಸೆನ್ , ಕ್ರೇಗ್ ಓವರ್ಟನ್ , ಲಿಯಾಮ್ ಡಾಸನ್ , ರಿಚರ್ಡ್ ಗ್ಲೀಸನ್ , ಆಂಡಿಲ್ ಸಿಮೆಲೇನ್.