ಸಚಿನ್- ಗುರುಕೀರತ್ ಸ್ಫೋಟಕ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಗೆದ್ದ ಇಂಡಿಯಾ ಮಾಸ್ಟರ್ಸ್

International Masters League 2025: ಇಂಡಿಯಾ ಮಾಸ್ಟರ್ಸ್ ತಂಡವು ನವಿ ಮುಂಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025ರಲ್ಲಿ ಇಂಗ್ಲೆಂಡ್ ಮಾಸ್ಟರ್ಸ್​ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಸಚಿನ್ ತೆಂಡೂಲ್ಕರ್ ಮತ್ತು ಗುರುಕೀರತ್ ಮಾನ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಕೇವಲ 132 ರನ್ ಗಳಿಸಿತು. ಈ ಗೆಲುವಿನೊಂದಿಗೆ ಭಾರತ ಮಾಸ್ಟರ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ನವಿ ಮುಂಬೈನಲ್ಲಿರುವ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ರ ಮೂರನೇ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವು ಇಂಗ್ಲೆಂಡ್ ಮಾಸ್ಟರ್ಸ್ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡ, ಇಂಗ್ಲೆಂಡ್ ಮಾಸ್ಟರ್ಸ್ ತಂಡವನ್ನು ಬರೋಬ್ಬರಿ 9 ವಿಕೆಟ್​ಗಳಿಂದ ಮಣಿಸಿದೆ. ಇಂಡಿಯಾ ಮಾಸ್ಟರ್ಸ್ ಪರ ತಂಡದ ನಾಯಕ ಸಚಿನ್ ತೆಂಡೂಲ್ಕರ್, ಮತ್ತೊಬ್ಬ ಆರಂಭಿಕ ಗುರುಕೀರತ್ ಸಿಂಗ್ ಮಾನ್ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಂಡಿಯಾ ಮಾಸ್ಟರ್ಸ್ ತಂಡವು ಈ ಹಿಂದೆ ನಡೆದ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಮಾಸ್ಟರ್ಸ್ ತಂಡವನ್ನು ಸೋಲಿಸಿತ್ತು.

132 ರನ್ ಕಲೆಹಾಕಿದ ಇಂಗ್ಲೆಂಡ್ ಮಾಸ್ಟರ್ಸ್

ಈ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಾಸ್ಟರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್‌ಗಳನಷ್ಟೇ ಕಲೆಹಾಕಲು ಶಕ್ತವಾಯಿತು. ತಂಡದ ಪರ ಡ್ಯಾರೆನ್ ಮ್ಯಾಡಿ ಅತಿ ಹೆಚ್ಚು 25 ರನ್ ಗಳಿಸಿದರೆ, ಟಿಮ್ ಆಂಬ್ರೋಸ್ 23 ರನ್‌ಗಳ ಕೊಡುಗೆ ನೀಡಿದರು. ಕ್ರಿಸ್ ಸ್ಕೋಫೀಲ್ಡ್ ಕೂಡ 18 ರನ್​ಗಳ ಕಾಣಿಕೆ ನೀಡಿದರು. ಮತ್ತೊಂದೆಡೆ, ಇಂಡಿಯಾ ಮಾಸ್ಟರ್ಸ್ ಪರ ಬೌಲಿಂಗ್​ನಲ್ಲಿ ಮಿಂಚಿದ ಧವಲ್ ಕುಲಕರ್ಣಿ ಗರಿಷ್ಠ 3 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ ಮತ್ತು ಪವನ್ ನೇಗಿ ಕೂಡ ತಲಾ 2 ವಿಕೆಟ್ ಪಡೆದರು. ಇವರಲ್ಲದೆ, ವಿನಯ್ ಕುಮಾರ್​ಗೆ 1 ವಿಕೆಟ್ ಸಿಕ್ಕಿತು.

ಸಚಿನ್- ಗುರುಕೀರತ್ ಜೊತೆಯಾಟ

133 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ಮತ್ತು ಗುರುಕೀರತ್ ಮಾನ್ ಉತ್ತಮ ಆರಂಭ ನೀಡಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 43 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿದರು. ಈ ಸಮಯದಲ್ಲಿ, ಸಚಿನ್ ತೆಂಡೂಲ್ಕರ್ 21 ಎಸೆತಗಳಲ್ಲಿ 161.90 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 34 ರನ್ ಬಾರಿಸಿದರು. ಮತ್ತೊಂದೆಡೆ, ಗುರುಕೀರತ್ ಸಿಂಗ್ ಮಾನ್ 35 ಎಸೆತಗಳಲ್ಲಿ 180 ಸ್ಟ್ರೈಕ್ ರೇಟ್‌ನಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 63 ರನ್ ಕಲೆಹಾಕಿದರು. ಇವರಿಬ್ಬರಲ್ಲದೆ, ಯುವರಾಜ್ ಸಿಂಗ್ ಕೂಡ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 27 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ರಲ್ಲಿ ಒಟ್ಟು 6 ತಂಡಗಳು ಆಡುತ್ತಿವೆ. ಇಂಡಿಯಾ ಮಾಸ್ಟರ್ಸ್ ಪ್ರಸ್ತುತ ಆಡಿರುವ 2 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಏತನ್ಮಧ್ಯೆ, ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಎರಡು ತಂಡಗಳನ್ನು ಹೊರತುಪಡಿಸಿ, ಬೇರೆ ಯಾವುದೇ ತಂಡದ ಗೆಲುವಿನ ಖಾತೆ ಪ್ರಸ್ತುತ ತೆರೆದಿಲ್ಲ.

Source: https://tv9kannada.com/sports/cricket-news/sachin-mann-power-india-masters-to-victory-psr-983459.html

Views: 0

Leave a Reply

Your email address will not be published. Required fields are marked *