ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ, ಜ.05:
ರಾಜ್ಯದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎನ್. ಮಂಜಪ್ಪ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 4–5 ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಸಂಘಟಿತವಾಗಿ ಬಲಪಡಿಸುವ ಕಾರ್ಯ ನಡೆಯುತ್ತಿದ್ದು, ಪಕ್ಷದ ರಾಷ್ಟ್ರೀಯ ನಾಯಕ Akhilesh Yadav ಅವರ ಸಂಪೂರ್ಣ ಸಹಕಾರದಿಂದ ಜಿಲ್ಲೆ ಜಿಲ್ಲೆಗೂ ಪ್ರವಾಸ ನಡೆಸಿ ಸಂಘಟನೆ ವಿಸ್ತರಿಸಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಸಮಾಜವಾದಿ ಪಾರ್ಟಿ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಪಕ್ಷಗಳಲ್ಲಿದ್ದ ಅನೇಕ ಕಾರ್ಯಕರ್ತರು ಸಮಾಜವಾದಿ ಪಾರ್ಟಿಗೆ ಸೇರ್ಪಡೆಯಾಗುತ್ತಿದ್ದು, ಅವರ ಸಾಮರ್ಥ್ಯವನ್ನು ಗುರುತಿಸಿ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಮುಂಬರುವ ನಾಲ್ಕು ವಿಧಾನಪರಿಷತ್ ಸದಸ್ಯರ ಸ್ಥಾನಗಳ ಚುನಾವಣೆಯಲ್ಲೂ ಪಕ್ಷ ಸ್ಪರ್ಧೆ ಮಾಡಲಿದ್ದು, ಇತರ ಚುನಾವಣೆಗಳಿಗೂ ಅಭ್ಯರ್ಥಿಗಳ ಹುಡುಕಾಟ ಈಗಾಗಲೇ ಆರಂಭವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಎಸ್., ರಾಜ್ಯದ ಜನತೆ ಎಲ್ಲ ಪಕ್ಷಗಳ ಆಡಳಿತವನ್ನು ಕಂಡು ಬೇಸತ್ತು ಪರ್ಯಾಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜವಾದಿ ಪಾರ್ಟಿ ಜನರ ಆಶಾಭಾವನೆಗೆ ಸ್ಪಂದಿಸಿ ಮುಂದೊಂದು ದಿನ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಆಸಕ್ತರು ಹಾಗೂ ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರು ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮೊಳಕಾಲ್ಲೂರು ಅಧ್ಯಕ್ಷ ಜಯ್ಯಣ್ಣ, ಕಾರ್ಯದರ್ಶಿ ಬಾಲರಾಜ್, ಹೊಸದುರ್ಗ ಅಧ್ಯಕ್ಷ ನಾಗರಾಜ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಬೂಬ್ ಪಾಷ, ಮಧುಕುಮಾರ್, ಪ್ರದೀಪ್ ಸೇರಿದಂತೆ ಹಲವು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
Views: 29