IND vs SA: ಭಾರತ ನೀಡಿದ್ದ 203ರನ್ಗಳ ಗುರಿಯನ್ನ ಬೆನ್ನಟ್ಟಿದ ಅತಿಥೇಯ ತಂಡ 17.5 ಓವರ್‌ಗಳಲ್ಲಿ 141ಕ್ಕೆ ಆಲೌಟ್ ಆಗುವ ಮೂಲಕ 61ರನ್ಗಳ ಹೀನಾಯ ಸೋಲು ಕಂಡಿತು.

ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕ (Sanju Samson Century) ಹಾಗೂ ಭಾರತೀಯ ಸ್ಪಿನ್ ಬೌಲರ್ಗಳ ಅಮೋಘ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಟೀಮ್ ಇಂಡಿಯಾ 61ರನ್ಗಳ ಭರ್ಜರಿ ಜಯ ಸಾಧಿಸಿದೆ. ತವರಿನಂಗಳದಲ್ಲಿ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಹರಿಣ ಪಡೆ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಭಾರತದ ಮುಂದೆ ನಿಲ್ಲಲಾರದಾಯಿತು. ಸೂರ್ಯಕುಮಾರ್ ಯಾದವ್ (Surya Kumar Yaday) ಬಳಗ ನೀಡಿದ್ದ 203ರನ್ಗಳ ಗುರಿಯನ್ನ ಬೆನ್ನಟ್ಟಿದ ಅತಿಥೇಯ ತಂಡ 17.5 ಓವರ್‌ಗಳಲ್ಲಿ 141ಕ್ಕೆ ಆಲೌಟ್ ಆಗುವ ಮೂಲಕ 61ರನ್ಗಳ ಹೀನಾಯ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕ್ಲಾಸೆನ್ (25) ಅಗ್ರ ಸ್ಕೋರರ್ ಆದರು. ಭಾರತದ ಬೌಲರ್‌ಗಳಲ್ಲಿ ವರುಣ್ ಚಕ್ರವರ್ತಿ 3, ರವಿ ಬಿಷ್ಣೋಯ್ 3, ಅವೇಶ್ ಖಾನ್ 2 ಮತ್ತು ಅರ್ಷದೀಪ್ ಸಿಂಗ್ ಒಂದು ವಿಕೆಟ್ ಪಡೆದರು.
ಸಂಜು ಸ್ಯಾಮ್ಸನ್ ದಾಖಲೆಯ ಶತಕ
ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಯಾಮ್ಸನ್, ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ ಅದೇ ಸಾಧನೆ ಮಾಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ಸಂಜು ನಿಧಾನವಾಗಿ ಇನಿಂಗ್ಸ್ ಆರಂಭಿಸಿದರು. ಕೇಶವ್ ಮಹಾರಾಜ್ ಎಸೆದ ಮೂರನೇ ಓವರ್ ನಲ್ಲಿ ಸ್ಯಾಮ್ಸನ್ ಸತತ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಇನ್ನಿಂಗ್ಸ್ ಗೆ ವೇಗ ನೀಡಿದರು. ಇನ್ನೋರ್ವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (7) ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು.
ಆದರೆ ಸಂಜು ನಾಯಕ ಸೂರ್ಯಕುಮಾರ್ ಯಾದವ್ (21: 17 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್) ಜೊತೆಗೆ 66 ರನ್ ಸೇರಿಸಿದರು. 9ನೇ ಓವರ್ ನಲ್ಲಿ ಪ್ಯಾಟ್ರಿಕ್ ಬೌಲಿಂಗ್ ನಲ್ಲಿ ಸೂರ್ಯ ಕ್ಯಾಚ್ ನೀಡಿ ಔಟಾದರು. ಭಾರತ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 99 ರನ್ ಗಳಿಸಿತು.
ಮಿಂಚಿದ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್
ಬಳಿಕ ಕ್ರೀಸ್ ಗೆ ಬಂದ ತಿಲಕ್ ವರ್ಮಾ (33) ಜತೆಗೂಡಿ ಸ್ಯಾಮ್ಸನ್ ವಿಜೃಂಭಿಸಿದರು. ಸ್ಯಾಮ್ಸನ್ 47 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ಗಳ ನೆರವಿನಿಂದ 107ರನ್ಗಳಿಸಿದರು. 15 ಓವರ್‌ಗಳ ಅಂತ್ಯಕ್ಕೆ ಭಾರತ 167 ರನ್ ಗಳಿಸಿತು. ಆದರೆ 15ನೇ ಓವರ್‌ನಲ್ಲಿ ತಿಲಕ್ ವರ್ಮಾ, ಮುಂದಿನ ಓವರ್‌ನಲ್ಲಿ ಸ್ಯಾಮ್ಸನ್ ಔಟಾದ ಕಾರಣ ಭಾರತದ ಸ್ಕೋರ್ ನಿಧಾನವಾಯಿತು. ನಂತರ ಬಂದ ಬ್ಯಾಟ್ಸ್ ಮನ್ ಗಳಾದ ಹಾರ್ದಿಕ್ (2), ರಿಂಕು ಸಿಂಗ್ (11) ಮತ್ತು ಅಕ್ಷರ್ ಪಟೇಲ್ (7) ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಸ್ಯಾಮ್ಸನ್
ಬಾಂಗ್ಲಾದೇಶದ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 111 ರನ್ಗಳಿಸಿದ್ದರು. ಈ ಶತಕದ ಮೂಲಕ ಟಿ20 ಕ್ರಿಕೆಟ್ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಶತಕ ಸಿಡಿಸಿದ ಭಾರತದ 4ನೇ ಬ್ಯಾಟರ್ ಎನಿಸಿಕೊಂಡರು. ಸಂಜು ಸ್ಯಾಮ್ಸನ್ಗೂ ಮೊದಲು ಫ್ರಾನ್ಸ್‌ನ ಗುಸ್ತಾವ್ ಮೆಕಿಯಾನ್, ದಕ್ಷಿಣ ಆಫ್ರಿಕಾದ ರಿಲೀ ರೊಸೊವ್ ಮತ್ತು ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಟಿ20 ಈ ಸಾಧನೆ ಮಾಡಿದ್ದರು.
ಒಂದೇ ಇನ್ನಿಂಗ್ಸ್ನಲ್ಲಿ ಹೆಚ್ಚು ಸಿಕ್ಸರ್
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 10 ಭರ್ಜರಿ ಸಿಕ್ಸರ್ ಸಿಡಿಸಿದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ ಸಿಡಿಸಿದ ಜಂಟಿ ಹೆಚ್ಚು ಸಿಕ್ಸರ್ಗಳಾಗಿವೆ. ಈ ಹಿಂದೆ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ 2017ರಲ್ಲಿ ಶ್ರೀಲಂಕಾ ವಿರುದ್ಧ 10 ಸಿಕ್ಸರ್ ಸಿಡಿಸಿದ್ದರು.