4 ಸಾವಿರ ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಸರಸ್ವತಿ ನದಿ ಮತ್ತೆ ಉದ್ಭವ! ಕೂತುಹಲ ಮೂಡಿಸಿದ ರಾಜಸ್ಥಾನದಲ್ಲಿ ನಡೆದ ಘಟನೆ.

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು; ಇದು ನಾವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಹೇಳುವ ಮಂತ್ರವಾಗಿದೆ. ಇದನ್ನು ಹೇಳುವ ಮೂಲಕ ಜಲ ಮೂಲಗಳನ್ನು ನೆನೆಯುತ್ತೆವೆ. ಈ ನದಿಗಳನ್ನು ಜಗತ್ತಿನ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುವ ದೇವತೆಗಳೆಂದು ಪೂಜಿಸಲಾಗುತ್ತದೆ.

ಭರತ ಭೂಮಿಯನ್ನು ಪುಣ್ಯಗೊಳಿಸುವ ಈ ನದಿಗಳಿಗೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಯಾಕೆಂದರೆ ಈ ಪುಣ್ಯ ಭೂಮಿಯಲ್ಲಿ ಹರಿಯುವ ಪ್ರತಿ ನದಿಯನ್ನು ತಾಯಿಯ ಸ್ವರೂಪದಲ್ಲಿ ಕಾಣುತ್ತಾರೆ. ಇಲ್ಲಿ ಹರಿಯೂವ ಪುಣ್ಯ ನದಿಗಳಲ್ಲಿ ಸ್ನಾನ ಮಾಡಿದರೆ, ಜೀವನದ ಪಾಪದ ಫಲಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಇಂತಹ ನಂಬಿಕೆಗಳ ಭೂಮಿಯಲ್ಲಿ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಕಣ್ಮರೆಯಾದ ಭರತ ಭೂಮಿಯ ಜೀವ ನದಿ ಸರಸ್ವತಿಯು ಈಗ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ರಾಜಸ್ಥಾನದಲ್ಲಿ ಕೋಳವೆ ಬಾವಿಗೆಂದು ಭೂಮಿಯನ್ನು ಅಗೆಯುವ ಸಂದರ್ಭ ನಡೆದ ಘಟನೆ. ಪುರಾಣ ಮತ್ತು ಇತಿಹಾಸಗಳಲ್ಲಿ ಗಂಗಾ ನದಿಗಿರುವ ಪ್ರಾಮುಖ್ಯತೆಯಷ್ಟೇ ಸರಸ್ವತಿ ನದಿಗೂ ಇರುವುದರಿಂದ ಭಾರೀ ಚರ್ಚೆಗಳು ನಡೆಯುತ್ತಿವೆ.

ರಾಜಸ್ಥಾನದ ಜೈಸಲ್ಮೇರ್‌ನ ಮರುಭೂಮಿಯಲ್ಲಿ ವಿಸ್ಮಯವೊಂದು ನಡೆದಿದೆ. ಕೊಳವೆಬಾವಿ ತೆಗೆಯುವ ವೇಳೆ ಜೈಸಲ್ಮೇರ್‌ನ ಮರುಭೂಮಿಯಲ್ಲಿ ನೀರು ಇದ್ದಕ್ಕಿದ್ದಂತೆ ಉಕ್ಕಿ ಹರಿಯಲು ಆರಂಭಿಸಿದೆ. ಆದರೆ ಕೊಳವೆಬಾವಿ ತೆಗೆಯುವ ವೇಳೆ ನೀರು ಉಕ್ಕಿ ಹರಿಯುವುದು ಸಾಮಾನ್ಯವಲ್ಲ ಎಂದು ನೀವು ಅಂದುಕೊಳ್ಳ ಬಹುದು. ಹೌದು ಕೊಳವೆಬಾವಿ ತೆಗೆಯುವ ವೇಳೆ ನೀರು ಉಕ್ಕಿ ಹರಿಯುವುದು ಸಾಮಾನ್ಯವೆ. ಆದರೆ ಈ ಘಟನೆಗೆ ಯಾಕಿಷ್ಟು ಮಹತ್ವವೆಂದರೆ, ಈ ಪ್ರದೇಶದಲ್ಲಿ ಪ್ರಾಚೀನ ನದಿ ಸರಸ್ವತಿ ಭೂಮಿಯ ಕೆಳಗೆ ಗುಪ್ತ ಗಾಮಿನಿಯಾಗಿ ಹರಿಯುತ್ತಿದ್ದಾಳೆ ಎಂಬ ಪ್ರತೀತಿ ಇರುವ ಕಾರಣ ಮಹತ್ವವಾಗಿದೆ.

ಶನಿವಾರ, ಮೋಹನ್‌ಗಢದ ಕಾಲುವೆ ಪ್ರದೇಶದ ಚಾಕ್ 27 ಬಿಡಿ ಬಳಿ ಕಾರ್ಮಿಕರು ಕೊಳವೆಬಾವಿಯನ್ನು ಕೊರೆಯುತ್ತಿದ್ದಾಗ, 850 ಅಡಿ ಆಳದಲ್ಲಿ, ನೀರು ಮತ್ತು ಅನಿಲವು ಒಟ್ಟಿಗೆ ನೆಲದಿಂದ ಹೊರಹೊಮ್ಮಿ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿತು. ಪ್ರವಾಹದಂತೆ ಉಕ್ಕಿದ ನೀರಿನ ಹರಿವು ಸ್ವಲ್ಪ ಹೊತ್ತಿನಲ್ಲೇ ಸುತ್ತಮುತ್ತಲಿನ ಹೊಲಗಳಲ್ಲಿ ಸಂಪೂರ್ಣವಾಗಿ ಪ್ರವಾಹದಂತ ಪರಿಸ್ಥಿತಿಯನ್ನು ನಿರ್ಮಿಸಿದೆ.

ಇನ್ನು ಬೋರ್‌ವೆಲ್‌ ಕೊರೆಯಲು ಬಂದಿದ್ದ ಟ್ರಕ್ ಸೇರಿದಂತೆ ಯಂತ್ರೋಪಕರಣಗಳು ಏರುತ್ತಿರುವ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡವು. ಕೆಲವೇ ಕ್ಷಣಗಳಲ್ಲಿ, ನೀರಿನ ಮಟ್ಟ ಏರುತ್ತಲೇ ಇದ್ದುದರಿಂದ ಆ ಪ್ರದೇಶವು ತುಂಬಿದ ಕೊಳದಂತೆ ಕಾಣಿಸಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇನ್ನು ಅನೇಕರು ಗುಪ್ತ ಗಾಮಿನಿಯಾಗಿ ಹರಿಯುತ್ತಿರವ ಸರಸ್ವತಿಯು ಮೇಲಕ್ಕೆ ಬಂದಳು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರದೇಶವೂ ಹಿಂದೆ ಪ್ರಾಚೀನ ನದಿ ಸರಸ್ವತಿ ಹರಿಯುತ್ತಿದ್ದ ಜಾಗವಾಗಿರುವ ಕಾರಣಕ್ಕೆ ಜನರಲ್ಲಿ ಕುತೂಹಲ ಹೆಚ್ಚಿಸಿದೆ.

ಆದರೆ ಈ ಘಟನೆ ನಡೆದ ಸ್ಥಳದಲ್ಲಿ 24 ಗಂಟೆ ಕಳೆದರೂ ನೀರಿನ ಹರಿವು ಕಡಿಮೆಯಾಗದೇ ಹಾಗೆಯೇ ಇದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಸ್ಥಳದಿಂದ ದೂರ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಘಟನೆಯು ಅಪರೂಪವಾಗಿದ್ದರೂ, ಇದು ದೀರ್ಘಕಾಲದವರೆಗೆ ನೀರು ನಿಲ್ಲುವ ಅಥವಾ ಪ್ರದೇಶಕ್ಕೆ ಹಾನಿಯಾಗುವ ಅಪಾಯವನ್ನು ಉಂಟುಮಾಡುವುದಿಲ್ಲ ಎನ್ನಲಾಗಿದೆ.

ಸರಸ್ವತಿ ನದಿಯು: ಋುಗ್ವೇದ ಹಾಗೂ ಮಹಾಭಾರತದಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿಯು ಸುಮಾರು 4000 ವರ್ಷಗಳ ಹಿಂದೆ ಜೀವಂತವಾಗಿತ್ತು ಎನ್ನಲಾಗಿದೆ. ಈ ನದಿ, ಹಿಮಾಲಯದಲ್ಲಿ ಹುಟ್ಟಿ ಈಗಿನ ಹರಿಯಾಣ, ಪಂಜಾಬ್‌, ರಾಜಸ್ಥಾನ, ಪಾಕಿಸ್ತಾನದ ಕೆಲವು ಭಾಗ ಹಾಗೂ ಗುಜರಾತ್‌ ಮೂಲಕ ಅರಬ್ಬಿ ಸಮುದ್ರ ಸೇರುತ್ತಿತ್ತು ಎಂದು ಬಹುತೇಕರು ನಂಬುತ್ತಾರೆ. ಹೆಚ್ಚು ಕಡಿಮೆ 1500 ಕಿ.ಮೀ.ನಷ್ಟು ದೀರ್ಘವಾಗಿ ಈ ನದಿ ಹರಿಯುತ್ತಿತ್ತು ಎನ್ನಲಾಗಿದೆ.

ಇದಕ್ಕೂ ಮುನ್ನ 2015 ರಲ್ಲಿ ಹರಿಯಾಣದ ಯಮುನಾನಗರದಲ್ಲಿರುವ ಮುಗಲ್‌ವಾಲಿ ಗ್ರಾಮದ ಸ್ಥಳದಲ್ಲಿ ಸ್ಥಳೀಯರು ಮತ್ತು ಅಧಿಕಾರಿಗಳು ಅಗೆಯುತ್ತಿದ್ದಂತೆ ಪೌರಾಣಿಕ ಸರಸ್ವತಿ ನದಿಯಿಂದ ನೀರು ಹೊರಹೊಮ್ಮಿದೆ ಎನ್ನಲಾಗಿತ್ತು. ಇದರ ಕುರಿತು ಸಂಶೋಧನೆ ಇನ್ನು ನಡೆಯುತ್ತಿದೆ.

Source : https://kannada.news18.com/news/national-international/jaisalmer-tubewell-water-burst-did-saraswati-river-came-up-after-4000-years-hps-1959579.html

Views: 0

Leave a Reply

Your email address will not be published. Required fields are marked *