Savings Account: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿಯೂ ಕನಿಷ್ಠ ಒಂದಾದರೂ ಉಳಿತಾಯ ಖಾತೆ ಇದ್ದೇ ಇರುತ್ತದೆ. ಆದರೆ, ಇನ್ನೂ ಕೆಲವರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ನಿಮ್ಮ ಖಾತೆಯನ್ನು ಮುಚ್ಚುವ ಮೊದಲು ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ.

Savings Account: ಪ್ರಸ್ತುತ ಸಮಯದಲ್ಲಿ ವೋಟರ್ ಐಡಿ, ಆಧಾರ್ ಐಡಿ, ರೇಷನ್ ಕಾರ್ಡ್ ರೀತಿಯೇ ಒಂದಾದರೂ ಉಳಿತಾಯ ಖಾತೆಯನ್ನು ಹೊಂದಿರುವುದು ಬಹಳ ಮುಖ್ಯ. ಆದರೆ, ನಮ್ಮಲ್ಲಿ ಕೆಲವರು ಒಂದಕ್ಕಿಂತ ಹೆಚ್ಚಿನ ಸೇವಿಂಗ್ಸ್ ಅಕೌಂಟ್ ಹೊಂದಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರಲ್ಲಿ ಈ ರೀತಿ ಖಾತೆಗಳು ಹೆಚ್ಚಾಗಿರುತ್ತವೆ.
ಹೌದು, ಒಂದು ಕಂಪನಿಯಿಂದ ಇನ್ನೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ ಎಂದರೆ ಉದ್ಯೋಗ ಬದಲಾವಣೆಯೊಂದಿಗೆ ಕೆಲವೊಮ್ಮೆ ಹೊಸ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯುವುದು ಅನಿವಾರ್ಯವಾಗಿರುತ್ತದೆ. ಮಾತ್ರವಲ್ಲ, ಈ ಸಂದರ್ಭದಲ್ಲಿ ಹಳೆಯ ಖಾತೆಯನ್ನು ಚಾಲನೆಯಲ್ಲಿಡಲು, ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳುವುದು ಮತ್ತು ಕಾಲಕಾಲಕ್ಕೆ ವಹಿವಾಟುಗಳನ್ನು ಮಾಡುವುದನ್ನು ಮುಂದುವರಿಸುವುದು ಕೂಡ ಅವಶ್ಯಕ. ಆದಾಗ್ಯೂ, ಅಗತ್ಯವಿಲ್ಲದಿದ್ದಾಗ ನಮಗೆ ಯಾವ ಖಾತೆಯ ಅವಶ್ಯಕತೆ ಇರುವುದಿಲ್ಲವೋ ಅಂತಹ ಬ್ಯಾಂಕ್ ಖಾತೆಯನ್ನು ಮುಚ್ಚುವುದು ಒಳ್ಳೆಯದು.
ವಾಸ್ತವವಾಗಿ, ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ, ನಮಗೆ ಯಾವ ಬ್ಯಾಂಕ್ ಖಾತೆಯ ಅಗತ್ಯವಿಲ್ಲವೊ ಅಂತಹ ಖಾತೆಯನ್ನು ಮುಚ್ಚಬೇಕು. ಆದಾಗ್ಯೂ, ಇಂತಹ ಸಂದರ್ಭದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ.
ಒಂದಕ್ಕಿಂತ ಹೆಚ್ಚು ಸೇವಿಂಗ್ಸ್ ಅಕೌಂಟ್ ಇದ್ಯಾ? ಅವುಗಳನ್ನು ಮುಚ್ಚುವ ಮುನ್ನ ನೆನಪಿರಲಿ ಈ 4 ವಿಷಯ:
ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್:
ನೀವು ಯಾವ ಉಳಿತಾಯ ಖಾತೆಯನ್ನು ಮುಚ್ಚಲು ಬಯಸುತ್ತೀರೋ ಮೊದಲು ಆ ಖಾತೆಯ ಫುಲ್ ಅಕೌಂಟ್ ಸ್ಟೇಟ್ಮೆಂಟ್ ಅನ್ನು ತೆಗೆದುಕೊಳ್ಳಿ. ನೀವು ಯಾವುದೇ ಇಎಂಐ ಅನ್ನು ಪಾವತಿಸ್ಲೌ, ಇಲ್ಲವೇ ಇನ್ನಾವುದೇ ಉದ್ದೇಶಕ್ಕಾಗಿ ಈ ಖಾತೆಯನ್ನು ಬಳಸುತ್ತಿದ್ದರೆ ಸ್ಟೇಟ್ಮೆಂಟ್ ಭವಿಷ್ಯದಲ್ಲಿ ನಿಮ್ಮ ಬಳಕೆಗೆ ಬರುತ್ತದೆ.
ಯಾವುದೇ ಸ್ಕೀಮ್ ಲಿಂಕ್ ಆಗಿಲ್ಲವೇ ಎಂಬುದನ್ನು ಪರಿಶೀಲಿಸಿ:
ನೀವು ನಿಮ್ಮ ಉಳಿತಾಯ ಖಾತೆಯನ್ನು ಮುಚ್ಚುವ ಮೊದಲು ಆ ಖಾತೆಯನ್ನು ಯಾವುದೇ ಯೋಜನೆಗೆ ಲಿಂಕ್ ಮಾಡಿಲ್ಲವೇ ಎಂಬುದನ್ನೂ ಮೊದಲು ಪರಿಶೀಲಿಸಿ. ಒಂದೊಮ್ಮೆ ನೀವು ಯಾವುದಾದರೂ ಯೋಜನೆಗೆ ಈ ಖಾತೆಯನ್ನು ಲಿಂಕ್ ಮಾಡಿದ್ದರೆ ಮತ್ತು ಈ ಖಾತೆಯನ್ನು ಮುಚ್ಚಿದರೆ ಭವಿಷ್ಯದಲ್ಲಿ ಆ ಯೋಜನೆಯ ಹಣವನ್ನು ಪಡೆಯಲು ನೀವು ಪರದಾಡಬೇಕಾಗುತ್ತದೆ.
ಬಾಕಿ ಶುಲ್ಕವನ್ನು ಪಾವತಿಸಿ:
ಒಂದಕ್ಕಿಂತ ಹೆಚ್ಚಿನ ಖಾತೆ ಹೊಂದಿದ್ದರೆ ಎಲ್ಲಾ ಖಾತೆಗಳಲ್ಲೂ ಕೂಡ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಮಿನಿಮಂ ಬಾಲನ್ಸ್ ಕಾಯ್ದುಕೊಳ್ಳಲು ವಿಫಲವಾದಲ್ಲಿ ಬ್ಯಾಂಕ್ ಸೇವಾ ಶುಲ್ಕ ಸೇರಿದಂತೆ ಇನ್ನಿತರ ಶುಲ್ಕಗಳನ್ನು ವಿಧಿಸುತ್ತದೆ. ಈ ಪರಿಸ್ಥಿತಿಯಲ್ಲಿ ಖಾತೆಯನ್ನು ಮುಚ್ಚುವ ಮೊದಲು ಬಾಕಿ ಶುಲ್ಕವನ್ನು ಪಾವತಿಸಬೇಕು ಎಂಬುದನ್ನೂ ನೆನಪಿನಲ್ಲಿಡಿ.
ಅಕೌಂಟ್ ಮುಚ್ಚಲು ಪಾವತಿಸಬೇಕಾದ ಶುಲ್ಕದ ಬಗ್ಗೆ ಇರಲಿ ಮಾಹಿತಿ:
ಸಾಮಾನ್ಯವಾಗಿ, ಬ್ಯಾಂಕ್ಗಳು ಉಳಿತಾಯ ಖಾತೆಯನ್ನು ತೆರೆದ 14 ದಿನಗಳಲ್ಲಿ ಮುಚ್ಚಲು ಮತ್ತು ಒಂದು ವರ್ಷಕ್ಕಿಂತ ಹಳೆಯ ಖಾತೆಯನ್ನು ಮುಚ್ಚಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ, ಆ ಬಳಿಕ ಖಾತೆಯನ್ನು ಮುಚ್ಚಲು ಬಯಸಿದರೆ ಇದಕ್ಕಾಗಿ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಿರಿ.