ಎಸ್‌ಬಿಐ 2,273 CBO ಹುದ್ದೆ:ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಫೆ.25 ಲಾಸ್ಟ್ ಡೇಟ್.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಯುವಜನತೆಗೆ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಹತ್ವದ ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,273 ‘ಸರ್ಕಲ್ ಬೇಸ್ಡ್ ಆಫೀಸರ್ಸ್’ (CBO – Circle Based Officers) ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಇದೀಗ ವಿಸ್ತರಿಸಲಾಗಿದೆ.

ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 18 ಕೊನೆಯ ದಿನವಾಗಿತ್ತು. ಆದರೆ, ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಗಡುವನ್ನು ಫೆಬ್ರವರಿ 25ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮರು-ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ

ಒಟ್ಟು 2,273 CBO ಹುದ್ದೆಗಳಲ್ಲಿ 2,050 ರೆಗ್ಯುಲರ್ ಹುದ್ದೆಗಳಾಗಿದ್ದು, 223 ಬ್ಯಾಕ್‌ಲಾಗ್ ಹುದ್ದೆಗಳಿವೆ.

  • ಅರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ವೈದ್ಯಕೀಯ, ಎಂಜಿನಿಯರಿಂಗ್, ಸಿಎ (CA) ಹಾಗೂ ಕಾಸ್ಟ್ ಅಕೌಂಟೆಂಟ್ ವಿದ್ಯಾರ್ಹತೆ ಹೊಂದಿದವರೂ ಸಹ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
  • ಕಡ್ಡಾಯ ನಿಯಮ: ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ನಿರ್ದಿಷ್ಟ ಸರ್ಕಲ್‌ನ (ವಲಯದ) ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಜೊತೆಗೆ ಕನಿಷ್ಠ 2 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.

ವಯೋಮಿತಿ ನಿಬಂಧನೆಗಳು

ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ ವಯಸ್ಸು 30 ವರ್ಷಗಳಾಗಿರಬೇಕು. ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ:

  • ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷ
  • ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ: 5 ವರ್ಷ
  • ಅಂಗವಿಕಲ (PwBD) ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷ
  • ಮಾಜಿ ಯೋಧರಿಗೆ: 5 ವರ್ಷ

ಅರ್ಜಿ ಶುಲ್ಕದ ವಿವರ

  • ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯುಎಸ್ (EWS) ಅಭ್ಯರ್ಥಿಗಳಿಗೆ: 750 ರೂ. * ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲ (PwBD) ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. (ಉಚಿತ)

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಕೇಂದ್ರಗಳು

ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್, ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ಆನ್‌ಲೈನ್ ಪರೀಕ್ಷೆಯು ಮಾರ್ಚ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ಕನ್ನಡಿಗರಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶವಿದೆ.
  • ಕರ್ನಾಟಕದ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮೈಸೂರು ಮತ್ತು ಮಂಗಳೂರು.

ಅರ್ಜಿ ಸಲ್ಲಿಸುವ ವಿಧಾನ

  1. ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ಅಥವಾ ನೇರ ಲಿಂಕ್ (https://ibpsreg.ibps.in/sbicbonov25/) ಗೆ ಭೇಟಿ ನೀಡಿ.
  2. ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು (Registration), ಲಾಗಿನ್ ಆಗಿ.
  3. ಅಪ್ಲಿಕೇಶನ್ ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  4. ನಿಗದಿತ ಅಳತೆಯಲ್ಲಿ ಫೋಟೋ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸುವವರಿಗೆ ಮಾತ್ರ).
  6. ಒಮ್ಮೆ ಎಲ್ಲಾ ವಿವರಗಳನ್ನು ಪರಿಶೀಲಿಸಿ, ‘Submit’ ಬಟನ್ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *