ಕೊಪ್ಪಳ ಗವಿಮಠ ಜಾತ್ರೆ ಸಮಾರೋಪ: ಭಕ್ತರಿಗೆ ಗವಿಶ್ರೀಯ ಮೂರು ಸೂಚನೆಗಳು! ಏನೇನು ನೋಡಿ!

ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಮಾರೋಪದಲ್ಲಿ ಮಾತನಾಡಿದ ಶ್ರೀ ಅಭಿನವ ಶ್ರೀಗಳು, ಮೂರು ಸೂಚನೆಗಳನ್ನು ಇನ್ನೂ ಮುಂದೆ ಕಟ್ಟುನಿಟ್ಟಾಗಿ ಪಾಲಿಸಿ, ದಯವಿಟ್ಟು, ಗವಿಸಿದ್ದೇಶ್ವರ ಮಠವನ್ನು ಆವರಣ ಬಿಟ್ಟು ಹೊರಗಡೆ ಕರೆದುಕೊಂಡು ಹೋಗಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದರು. ಪ್ರಮುಖವಾಗಿ ಗವಿಸಿದ್ದಪ್ಪಜ್ಜ ನಿಮ್ಮೆಲ್ಲರ ಮನದಲ್ಲಿರುವಾಗ ರೈಲ್ವೆ ನಿಲ್ದಾಣಕ್ಕೆ ಮತ್ತೊಂದು ಹೆಸರೇಕೆ…? ಮುಂದೆ ವಿಶ್ವ‌ವಿದ್ಯಾಲಯಕ್ಕೆ ಹೆಸರು ಇಡಿ ಅಂತ ಅಭಿಯಾನ ಶುರು ಮಾಡತಿರಿ. ಮುಂದೆ ಇಂತಹ ಯಾವುದೇ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಹೈಲೈಟ್ಸ್‌:

  • ನಮ್ಮ ಅಜ್ಜರ ಅಂತ ಎದೆಯಲ್ಲಿ ಜಾಗ ಕೊಟ್ಟಿರಲ್ಲ ಅಷ್ಟು ಸಾಕು, ಶ್ರೀ ಅಭಿನವ ಗವಿಶ್ರೀಗಳ ಬಾವುಕ ನುಡಿ
  • ಸೂಚನೆ ಪಾಲಿಸುವಂತೆ ಕೈ ಮುಗಿದ ಗವಿಶ್ರೀ
  • ನನ್ನನ್ನು ದಯವಿಟ್ಟು ಜಾತಿ, ಧರ್ಮಗಳ ಗಲಾಟೆಗೆ ಕರೆದುಕೊಂಡು ಹೋಗಬೇಡಿ ಎಂದು ಮನವಿ

ಕೊಪ್ಪಳ: ನನಗೆ ನಿಮ್ಮ ಎದೆಯಲ್ಲಿ ‘ನಮ್ಮ ಅಜ್ಜರ ಅಂತ ಸ್ಥಾನ ಕೊಟ್ಟಿದ್ದೀರಿ…ಅಷ್ಟ ಸಾಕು…! ಹೀಗೆಂದು ನೆರೆದ ಭಕ್ತ ಸಮೂಹಕ್ಕೆ ಮೂರು ಪ್ರಮುಖ ಸೂಚನೆಗಳನ್ನು ನೀಡಿದರು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು. ಹೌದು, ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಮಾರೋಪ ಸಮಾರಂಭದ ಮಧ್ಯದಲ್ಲಿ ಬಾವುಕರಾಗಿ ಪ್ರಮುಖ ಮೂರು ಸೂಚನೆಗಳನ್ನು ಪಾಲಿಸುವಂತೆ ಭಕ್ತರಲ್ಲಿ ಕೈ ಮುಗಿದು ಮನವಿ ಮಾಡಿದರು‌.

ಮೂರು ಸೂಚನೆಗಳು:

1) ರೈಲ್ವೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಗವಿಸಿದ್ದೇಶ್ವರನ ಹೆಸರಿಡುವಂತೆ ಒತ್ತಾಯಿಸಬೇಡಿ
2) ಗವಿಮಠವನ್ನು ಇನ್ನೊಂದು ಮಠ, ನನ್ನನ್ನು ನಾಡಿನ ಇನ್ನೊಂದು ಸ್ವಾಮಿಗಳ ಜತೆಗೆ ಹೊಲಿಸಬೇಡಿ
3) ನನಗೆ ಪ್ರಶಸ್ತಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಒತ್ತಾಯಿಸಬೇಡಿ

ಈ ಮೇಲಿನ ಮೂರು ಗಂಭೀರ ಸೂಚನೆಗಳನ್ನು ಭಕ್ತ ಸಮೂಹಕ್ಕೆ ಪಾಲಿಸುವಂತೆ ತುಂಬಾ ಬಾವುಕರಾಗಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ನೀಡಿದಾಗ ನೆರೆದ ಭಕ್ತ ಸಮೂಹ ಏಕಕಾಲಕ್ಕೆ ಸ್ತಭ್ತವಾಯಿತು. ಮಾತು ಮುಂದುವರೆಸಿದ ಶ್ರೀಗಳು, ಮೂರು ಸೂಚನೆಗಳನ್ನು ಇನ್ನೂ ಮುಂದೆ ಕಟ್ಟುನಿಟ್ಟಾಗಿ ಪಾಲಿಸಿ, ದಯವಿಟ್ಟು, ಗವಿಸಿದ್ದೇಶ್ವರ ಮಠವನ್ನು ಆವರಣ ಬಿಟ್ಟು ಹೊರಗಡೆ ಕರೆದುಕೊಂಡು ಹೋಗಬೇಡಿ.
ಪ್ರಮುಖವಾಗಿ ಗವಿಸಿದ್ದಪ್ಪಜ್ಜ ನಿಮ್ಮೆಲ್ಲರ ಮನದಲ್ಲಿರುವಾಗ ರೈಲ್ವೆ ನಿಲ್ದಾಣಕ್ಕೆ ಮತ್ತೊಂದು ಹೆಸರೇಕೆ…? ಮುಂದೆ ವಿಶ್ವ‌ವಿದ್ಯಾಲಯಕ್ಕೆ ಹೆಸರು ಇಡಿ ಅಂತ ಅಭಿಯಾನ ಶುರು ಮಾಡತಿರಿ. ಮುಂದೆ ಇಂತಹ ಯಾವುದೇ ಕೆಲಸ ಮಾಡಬೇಡಿ ಎಂದರು.

ನಾಡಿನ ಉಳಿದ ಸ್ವಾಮಿಗಳ ಪಾದದ ಧೂಳಿಗಿ ಸಮ ನಾನು. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಇನ್ನೊಂದು ಮಠ, ಸ್ವಾಮಿಗಳ ಜತೆಗೆ ಹೋಲಿಕೆ ಮಾಡಬೇಡಿ. ಅಲ್ಲದೆ, ಅರಸಿ ಬರುವ ಪ್ರಶಸ್ತಿ ತಿರಸ್ಕಾರ ಮಾಡುವ ದೊಡ್ಡ ವ್ಯಕ್ತಿ ನಾನಲ್ಲ, ಆದರೆ, ಅದನ್ನು ತೆಗೆದುಕೊಳ್ಳುವ ಅರ್ಹತೆ ನನಗಿಲ್ಲ ಎನ್ನುವುದು ನನ್ನ ಭಾವನೆ. ಹೀಗಾಗಿ ಯಾರು ಕೂಡ ನನಗೆ ಪ್ರಶಸ್ತಿ ಕೊಡಿ ಅಂತ ಎಲ್ಲಿಯೂ ಒತ್ತಾಯ ಮಾಡಬೇಡಿ. ನಾನು ಪೂಜೆ, ಓದು ಮತ್ತು ಸೇವೆ ಅಷ್ಟೆ ಮಾಡುವೆ. ನನ್ನನ್ನು ದಯವಿಟ್ಟು ಜಾತಿ, ಧರ್ಮಗಳ ಗಲಾಟೆಗೆ ಕರೆದುಕೊಂಡು ಹೋಗಬೇಡಿ ಎಂದು ಮನವಿ ಮಾಡಿದರು.

ನಾನು ಫೋಟೋ ಏಕೆ ಹಾಕಿಲ್ಲ ಗೊತ್ತೆ…?;

ಮಠದಲ್ಲಿ ನನ್ನದು ಒಂದು ಫೋಟೋ ಹಾಕಿಲ್ಲವಲ್ಲ ಎಂದು ಕಲಬುರಗಿ ಭಕ್ತರೊಬ್ಬರು ಮಠಕ್ಕೆ ಬಂದಾಗ ನನ್ನನ್ನು ಕೇಳಿದ್ರು.
ಅವರು ಮಠದ ತುಂಬೆಲ್ಲಾ ನೋಡಿಕೊಂಡು ಬಂದಿದ್ರು. ಹಾಗ ನನ್ನ ಹತ್ತಿರ ಬಂದು ಕೇಳಿದರು, ಅಜ್ಜರ ಮಠದಲ್ಲಿ ಒಂದು ಕಡೆಯೂ ನಿಮ್ಮ ಫೋಟೋ ಇಲ್ಲವಲ್ಲ ಅಂತ. ಮಠದಲ್ಲಿರುವುದು ಗುರುಗಳಾದ ಶಿವಶಾಂತವೀರ ಶರಣರ ಫೋಟೋ ಅಷ್ಟೆ. ಮನೆಯಲ್ಲಿ ಮನೆಯ ಯಜಮಾನನ ಫೋಟೋ ಇರುತ್ತದೆ. ಕೆಲಸ ಮಾಡುವವ( ಆಳು) ಫೋಟೋ ಹಾಕಲಿಕ್ಕೆ ಹಾಗುತ್ತದೆಯೇ..? ನಾನು ಆಳಾಗಿ ಕೆಲಸ ಮಾಡುವವ ಅಷ್ಟೆ ಎಂದು ಹೇಳಿದೆ.

ದಯವಿಟ್ಟು ನನ್ನ ಭಾವನೆ ಅರ್ಥ ಮಾಡಿಕೊಳ್ಳಿ, ಈ ದೇಹ, ಜೀವ ಇರುವ ತನಕ ಭಕ್ತರ ಸೇವೆ ಮಾಡಿಕೊಂಡು ಹೋಗುವುದಷ್ಟೆ ನನ್ನ ಕಾಯಕ. ಇದನ್ನ ನನ್ನ ಗುರುಗಳು ಪಾಲಿಸುವಂತೆ ಹೇಳಿದ್ದಾರೆ. ಅದನ್ನು ನಾನು ಪಾಲಿಸುವೆ. ಇನ್ನೂ ಮುಂದೆ ಯಾರು ದಯವಿಟ್ಟು ಮಠವನ್ನು ಹಾಗೂ ನನ್ನನ್ನು ಮಠದ ಆವರಣ ಬಿಟ್ಟು ಕರೆದುಕೊಂಡು ಹೋಗಬೇಡಿ ಎಂದು ನೆರೆದ ಭಕ್ತರಿಗೆ ಕೈ ಮುಗಿದು ಮನವಿ ಮಾಡಿದರು.

ಮಕ್ಕಳಿಗೆ ಸಂಸ್ಕಾರ ಕಲಿಸಿ- ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿಕೆ

ಇಂದಿನ ಮಕ್ಕಳಿಗೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ತಂದೆ- ತಾಯಿ ಹಾಗೂ ಪೋಷಕರು ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ಕಲಿಸಿ ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ.ಶ್ರೀಶಾನನಂದ ಸಲಹೆ ನೀಡಿದರು. ಗವಿಮಠದ ಕೈಲಾಸ ಮಂಟಪದಲ್ಲಿ ಶುಕ್ರವಾರ ರಾತ್ರಿ ಜರುಗಿದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು. ನಟ- ನಟಿಯರನ್ನು ರೋಲ್ ಮಾಲ್ ಮಾಡದೇ ಈ ವೇದಿಕೆಯಲ್ಲಿರುವಂತ ಉತ್ತಮ ವ್ಯಕ್ತಿಗಳನ್ನು ಮಕ್ಕಳಿಗೆ ರೋಲ್ ಮಾಲ್ ಮಾಡಿಸಿ, ನಾವೆಲ್ಲ ಶರಣರು ಕೊಟ್ಟ ವಿಚಾರಗಳನ್ನು ಮರೆತು
ಪಾಶ್ಚಾತ್ಯ ಸಂಸ್ಕೃತಿ ಮೊರೆ ಹೋಗಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೇ ಮನುಷ್ಯನಿಗೆ ಉಳಿಗಾಲವಿಲ್ಲ ಎಂದರು.

ಇಂದಿನ ಮಕ್ಕಳೆಲ್ಲ ಮೊಬೈಲ್ ದಾಸರಾಗಿದ್ದಾರೆ. ತಂತ್ರಜ್ಞಾನ ಮಾನವನ ಉನ್ನತಿಗೆ ಬೇಕು. ಆದರೆ, ಅದರಿಂದ ಅವನತಿ ಹಾಗಬಾರದು.
ನೆರೆದಿರುವ ತಾಯಂದಿರೆಲ್ಲ ಒಂದು ಪ್ರಮುಖ ವಾಗ್ದಾನ ಮಾಡಿ, ನಿಮ್ಮ ಯಜಮಾನ್ರು ಸಂಬಳದ ಹಣ ಬಿಟ್ಟು ಬೇರೆ ಹಣ ಮನೆಗೆ ತಂದರೇ ತಿರಸ್ಕರಿಸಿ ಕಳುಹಿಸಿ, ಹೀಗಾದಾಗ ಐದು ವರ್ಷಗಳಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಿತ್ತು ಬಿಸಾಕಬಹುದು. ನ್ಯಾಯವಾದ ದುಡ್ಡಿನಿಂದ ಸಂಪತ್ತು ಮಾಡಿಲ್ಲವೆಂದರೇ ನಾಯಿಯ ಮೊಲದಲ್ಲಿರುವ ಜೇನಿನಂತೆ ಎನ್ನುವ ಸಂಕಲ್ಪ ನಿಮ್ಮದಾಗಲಿ, ಹೀಗಾದಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿದೆ ಎಂದರು.

ಯಾವ ದೇಶದಲ್ಲಿ ಸಂಸ್ಕೃತಿ ನಾಶವಾಗುತ್ತದೆಯೋ ಆ ದೇಶ ಹಾಳಾಗುತ್ತದೆ. ಸಂಜೆಯಾದರೇ ಇಷ್ಟ ಪಟ್ಟ ದೇವರಿಗೆ ನಮಸ್ಕಾರ ಹಾಕಿ, ಶಾಲೆಯಲ್ಲಿ ಏನು…? ಹೇಳಿಕೊಟ್ಟಿದ್ದಾರೆ ನೋಡೋಣ ಬಾ ಮಗು ಅಂದರೇ ಆ ಮನೆ ಉದ್ದಾರವಾಗುತ್ತದೆ.
ಆದರೀಗ ಅದು ನಡೆಯುತ್ತಿಲ್ಲ. ಮನೆಯೊಂದು ಮೂರು ಬಾಗಿಲಿನಿಂತ ಧಾರವಾಯಿಯ ಬೆನ್ನ ಹಿಂದೆ ಬಿದ್ದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಇನ್ನೂ ಮುಂದೆ ಜಗತ್ತಿನ ಸಮಸ್ಯೆಗಳಿಗೆ ಉತ್ತರ ದೊರೆಯುವ ಗಮ್ಯ ವಿಜ್ಞಾನ( ಗವಿಮಠ) ತೊರಿಸುವ ಮಠಕ್ಕೆ ನೀವು ಬನ್ನಿ, ನಿಮ್ಮ ಮಕ್ಕಳನ್ನು ಕರೆ ತನ್ನಿ ಎಂದು ಕರೆ ನೀಡಿದರು.ಒಂದು ಮಗು ಹುಟ್ಟಿದ ಕೂಡಲೇ ರಿರ್ಟನ್ ಟಿಕೇಟ್ ಕೊಟ್ಟು ಕೂಡ ದೇವರು ಕಳುಹಿಸಿ ಬಿಟ್ಟಿರುತ್ತಾನೆ. ಆದರೆ, ನಾವು ಅದನೆಲ್ಲವೂ ಮರೆತು ಸ್ವಾರ್ಥಗಳಾಗಿ ಬದುಕುತ್ತಿದ್ದೇವೆ. ಮನುಕುಲದ ಅರಿವಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅನುಕೂಲ, ಈ ಜಾತ್ರೆಯ ಮೂಲಕ ಗಮ್ಯದಲ್ಲಿ( ಗವಿಸಿದ್ದೇಶನಲ್ಲಿ) ಮುಟ್ಟುವುದಕ್ಕೆ ಬೇಕಾದ ಎಲ್ಲ ಅಂಶಗಳನ್ನು ನಿಮ್ಮಲ್ಲಿ ಗಮ್ಯ ಮಾಡಿಕೊಳ್ಳಿ ಎಂದ ಅವರು, ರಥದ ಮೇಲಿನ ಶಿಖರ ನಮಗೆ ಧ್ಯೋತಕವಾಗಬೇಕು. ನಾವು ನಮ್ಮನ್ನು ಉನ್ನತೀಕರಣಗೊಳಿಸಿಕೊಳ್ಳಬೇಕು ಎಂದರು.

ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸಂತರ ಸಮಾಗಮವಾಗಿದೆ. ಅಲ್ಲದೆ, ಗವಿಸಿದ್ದೇಶ್ವರ ಜಾತ್ರೆ ಎಂದರೇ ಶಿವ- ಪಾರ್ವತಿ ಅವರು ಮೇಲಿಂದ ನೋಡುತ್ತಿದ್ದಾರೆ ಎನ್ನುವಂತೆ ಬಾಸವಾಗುತ್ತಿದೆ. ಇಲ್ಲಿ ಅನ್ನ, ಅಕ್ಷರ, ಆಧ್ಯಾತ್ಮ ದಾಸೋಹವಿದೆ. ಅಲ್ಲದೆ, ಜ್ಞಾನ ದಾಸೋಹವನ್ನು ಗವಿಸಿದ್ದೇಶ್ವರನ ಜಾತ್ರೆಯಲ್ಲಿ ಉಣ ಬಡಿಸಲಾಗಿದೆ ಎಂದು ಗವಿಶ್ರೀಗಳ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Source : https://vijaykarnataka.com/news/koppal/koppal-gavi-mutt-jatra-concludes-gavishris-three-instructions-for-devotees-look-what/articleshow/117345020.cms

Leave a Reply

Your email address will not be published. Required fields are marked *