ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರ ಬೇಡಿಕೆಗಳನ್ನು ಸರ್ಕಾರ ಈಡೇರಸದ ಹಿನ್ನೆಲೆಯಲ್ಲಿ ರಾಜ್ಯ ಖಾಸಗಿ ವಾಹನ ಒಕ್ಕೂಟ ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ಗೆ ಕರೆ ನೀಡಿದೆ. ಸೆ.11 ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಖಾಸಗಿ ವಾಹನಗಳು ನಗರದಲ್ಲಿ ಸಂಚರಿಸುವುದಿಲ್ಲ.

ಬೆಂಗಳೂರು: ಶಕ್ತಿಯೋಜನೆ (Shakti Yojana) ಜಾರಿ ಬಳಿಕ ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಖಾಸಗಿ ವಾಹನ ಒಕ್ಕೂಟ ಸಚಿವ ರಾಮಲಿಂಗಾರಡ್ಡಿ (Ramlinga Reddy) ಅವರ ಜೊತೆ ಮಾತುಕತೆ ನಡೆಸಿ, ತನ್ನ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿತ್ತು. ಸರ್ಕಾರ ಆಗಸ್ಟ್ 31ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಈ ಬೇಡಿಕೆಗಳನ್ನು ಸರ್ಕಾರ ಇನ್ನು ಕೂಡ ಈಡೇರಸದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಿಸಲು ಖಾಸಗಿ ವಾಹನ ಒಕ್ಕೂಟ ಮುಂದಾಗಿದೆ. 32 ಖಾಸಗಿ ಸಾರಿಗೆ ಒಕ್ಕೂಟಗಳು ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ಗೆ (Bengaluru Bandh) ಕರೆ ನೀಡಿವೆ. ಸೆಪ್ಟೆಂಬರ್ 11 ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಆಟೋ ಟ್ಯಾಕ್ಸಿ, ಖಾಸಗಿ ಬಸ್, ಶಾಲಾ ಬಸ್ ಬಂದ್ ಇರಲಿವೆ.
ಖಾಸಗಿ ವಾಹನ ಒಕ್ಕೂಟದ ಬೇಡಿಕೆಗಳೇನು?
- ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ
- ರ್ಯಾಪಿಡ್ ಬೈಕ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ
- ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ
- ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು
- ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡೋದಕ್ಕೆ ಬ್ರೇಕ್
- ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ
- ಓಲಾ, ಊಬರ್ ಆಪ್ ಆಧಾರಿತ ಸೇವೆಗಳ ನಿರ್ಬಂಧ
- ಖಾಸಗಿ ಬಸ್ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ
- ಖಾಸಗಿ ವಾಹನಗಳನ್ನ ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯುವುದು
- ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು
ಇನ್ನು ಸೆ.11 ರಂದು ಪ್ರಮುಖ ಜಂಕ್ಷನ್ ಮತ್ತು ಹೆದ್ದಾರಿಗಳಲ್ಲಿ ವಾಹನಗಳ ತಡೆಗೆ ಒಕ್ಕೂಟ ಪ್ಲಾನ್ ಮಾಡಿದೆ. ಮೆಜೆಸ್ಟಿಕ್ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸಲಿದ್ದು, ಸರ್ಕಾರ ಲಿಖಿತ ಆದೇಶ ನೀಡೋವರೆಗೂ ಬಂದ್ ಕೈ ಬಿಡಲ್ಲ ಎಂದು ನಿನ್ನೆ (ಆ.31) ರಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii