IND vs BAN: ಭಾರತವನ್ನು ಸೋಲಿನಿಂದ ಪಾರು ಮಾಡಿದ ಶಮಿ, ಗಿಲ್, ರಾಹುಲ್; ಗೆಲುವಿನ ಶುಭಾರಂಭ

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ತನ್ನ ಪ್ರಯಾಣವನ್ನು ಗೆಲುವಿನೊಂದಿಗೆ ಆರಂಭಿಸಿದೆ. ದುಬೈನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಪಂದ್ಯದಲ್ಲಿಯೇ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದ ನಡೆದ ಈ ಪಂದ್ಯದಲ್ಲಿ 229 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಸುಲಭವಾಗಿ ಜಯ ಸಾಧಿಸಲು ಬಾಂಗ್ಲಾದೇಶ ಬಿಡಲಿಲ್ಲ. ಆದರೆ ಒಂದು ತುದಿಯಲ್ಲಿ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದ ಶುಭ್​ಮನ್ ಗಿಲ್ ಅದ್ಭುತ ಶತಕ ಬಾರಿಸಿದಲ್ಲದೆ, ತಂಡಕ್ಕೆ ಗೆಲುವು ತಂದುಕೊಟ್ಟ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಗಿಲ್ ಗಿಂತ ಮೊದಲು, ಸ್ಟಾರ್ ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಬಾಂಗ್ಲಾದೇಶದ ಭರವಸೆಯನ್ನು ಹುಸಿಗೊಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿಗೆ ಅಡಿಪಾಯ ಹಾಕಿದರು.

ಬಾಂಗ್ಲಾ ತಂಡಕ್ಕೆ ಆರಂಭಿಕ ಆಘಾತ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಪವರ್ ಪ್ಲೇ ಅಂತ್ಯಕ್ಕೂ ಮುನ್ನವೇ ಅಂದರೆ 9 ನೇ ಓವರ್ ವೇಳೆಗೆ ಬಾಂಗ್ಲಾ ತಂಡವು ಕೇವಲ 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಶಮಿ 2 ವಿಕೆಟ್‌ಗಳನ್ನು ಪಡೆದರೆ, ರಾಣಾ 1 ವಿಕೆಟ್ ಉರುಳಿಸಿದ್ದರು. ಈ ವೇಳೆ 9ನೇ ಓವರ್‌ನಲ್ಲಿ ದಾಳಿಗಿಳಿದ ಅಕ್ಷರ್ ಪಟೇಲ್ ಸತತ ಎರಡು ವಿಕೆಟ್‌ಗಳನ್ನು ಪಡೆದರು. ಆದರೆ ರೋಹಿತ್ ಶರ್ಮಾ ಜೇಕರ್ ಅಲಿ ಅವರ ಕ್ಯಾಚ್ ಅನ್ನು ಕೈಬಿಡುವ ಮೂಲಕ ಅಕ್ಷರ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವನ್ನು ಕಸಿದುಕೊಂಡರು.

ಭಾರತಕ್ಕೆ ದುಬಾರಿಯಾದ ಕ್ಯಾಚ್ ಡ್ರಾಪ್

ಈ ಕ್ಯಾಚ್ ಕೈಬಿಟ್ಟ ಪರಿಣಾಮವನ್ನು ಟೀಂ ಇಂಡಿಯಾ ಅನುಭವಿಸಬೇಕಾಯಿತು. ತೌಹೀದ್ ಹೃದಯೋಯ್ ಜೊತೆಗೂಡಿ ಜೇಕರ್ ಅಲಿ ಆರನೇ ವಿಕೆಟ್‌ಗೆ 154 ರನ್‌ಗಳ ಅದ್ಭುತ ಜೊತೆಯಾಟವನ್ನಾಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ಹಾರ್ದಿಕ್ ಪಾಂಡ್ಯ ಕೂಡ ತೌಹೀದ್ ಹೃದಯೋಯ್ ಅವರ ಕ್ಯಾಚ್ ಬಿಡುವ ಮೂಲಕ ಸಾಕಷ್ಟು ದುಬಾರಿಯಾದರು. ಹಾರ್ದಿಕ್ ಕ್ಯಾಚ್ ಕೈಚೆಲ್ಲಿದ ಸಮಯದಲ್ಲಿ ತೌಹೀದ್ ಹೃದಯೋಯ್ ಕೇವಲ 23 ರನ್ ಗಳಿಸಿದ್ದರು. ಆದರೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಇದರ ಲಾಭವನ್ನು ಪಡೆದುಕೊಂಡು 154 ರನ್​​ಗಳ ಬೃಹತ್ ಜೊತೆಯಾಟ ಕಟ್ಟಿದರು.

5 ವಿಕೆಟ್ ಪಡೆದ ಶಮಿ

ಈ ವೇಳೆ ಜೇಕರ್ ಅವರನ್ನು ಔಟ್ ಮಾಡುವ ಮೂಲಕ ಶಮಿ ಏಕದಿನ ಪಂದ್ಯದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಏತನ್ಮಧ್ಯೆ, ತೌಹೀದ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕವನ್ನು ಪೂರ್ಣಗೊಳಿಸುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿದರು. ಇತ್ತ ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಶಮಿ 5 ವಿಕೆಟ್‌ಗಳನ್ನು ಕಬಳಿಸಿ ಬಾಂಗ್ಲಾದೇಶದ ಇನ್ನಿಂಗ್ಸ್ ಅನ್ನು 228 ರನ್‌ಗಳಿಗೆ ಕಟ್ಟಿಹಾಕಿದರು.

ಭಾರತಕ್ಕೆ ಭರ್ಜರಿ ಆರಂಭ

ಈ ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೂಡ ಆರಂಭದಲ್ಲಿ ತೊಂದರೆಗಳನ್ನು ಎದುರಿಸಿತು. ಆದರೆ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿಯಾಗಿ ಆಡಲು ಪ್ರಾರಂಭಿಸಿದ ನಂತರ, ಬಾಂಗ್ಲಾದೇಶ ಹಿನ್ನಡೆ ಅನುಭವಿಸಿತು. ರೋಹಿತ್ ಮತ್ತೊಮ್ಮೆ ವೇಗದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಬಲವಾದ ಆರಂಭವನ್ನು ನೀಡಿದರು. ಆದರೆ ಈ ಬಾರಿ ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ರೋಹಿತ್​ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾ 69 ರನ್‌ಗಳ ಉತ್ತಮ ಆರಂಭ ಪಡೆದ ನಂತರ ಮೊದಲ ವಿಕೆಟ್ ಕಳೆದುಕೊಂಡಿತು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಇಲ್ಲಿಂದ ರನ್‌ಗಳ ವೇಗ ಕಡಿಮೆಯಾಯಿತು. ರೋಹಿತ್ ವಿಕೆಟ್ ಬಳಿಕ ಟೀಂ ಇಂಡಿಯಾ ಸುಮಾರು 8 ಓವರ್‌ಗಳವರೆಗೆ ಯಾವುದೇ ಬೌಂಡರಿ ಗಳಿಸಲಿಲ್ಲ. ಈ ಸಮಯದಲ್ಲಿ, ಶುಭ್​ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ರನ್ ಕಲೆಹಾಕಲು ಪ್ರಾರಂಭಿಸಿದರು. ಆದರೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸ್ಪಿನ್ನರ್‌ಗಳ ವಿರುದ್ಧ ತೊಂದರೆಗೊಳಗಾಗುತ್ತಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ಲೆಗ್ ಸ್ಪಿನ್ನರ್‌ಗೆ ವಿಕೆಟ್ ಕಳೆದುಕೊಂಡರು.

ಗಿಲ್- ರಾಹುಲ್ ಜೊತೆಯಾಟ

ಕೊಹ್ಲಿ ವಿಕೆಟ್ ಬಳಿಕ ಬಂದ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ 31ನೇ ಓವರ್‌ನಲ್ಲಿ ಟೀಂ ಇಂಡಿಯಾ 144 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿರುವಂತೆ ಕಾಣುತ್ತಿತ್ತು. ಕೆಎಲ್ ರಾಹುಲ್ ಅವರ ಸುಲಭ ಕ್ಯಾಚ್ ಅನ್ನು ಜಾಕಿರ್ ಅಲಿ ಹಿಡಿದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಆ ಸಮಯದಲ್ಲಿ ರಾಹುಲ್ ಕೇವಲ 9 ರನ್ ಗಳಿಸಿದ್ದರು. ಇದಾದ ನಂತರ ರಾಹುಲ್ ಯಾವುದೇ ಅವಕಾಶ ನೀಡದೆ ಗಿಲ್ ಜೊತೆ 87 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಮಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಗೆಲುವಿನ ಸಿಕ್ಸ್ ಬಾರಿಸಿದ್ದು ರಾಹುಲ್ (ಅಜೇಯ 41) ಆದರೆ ಅದಕ್ಕೂ ಸ್ವಲ್ಪ ಮೊದಲು, ಗಿಲ್ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

Source : https://tv9kannada.com/sports/cricket-news/india-wins-champions-trophy-opener-psr-981163.html

Leave a Reply

Your email address will not be published. Required fields are marked *