ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಫೆ,25,: ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ 40ನೇ ವಾರ್ಷಿಕೋತ್ಸವದ ಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ 19ನೆ ವಾಚನ ವ್ಯಾಖ್ಯಾನ ಕಾರ್ಯಕ್ರಮ ಇದೆ 23ನೇ ಭಾನುವಾರ ಸಂಜೆ ನಗರದ ಜೆಸಿಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರು ಕವಿ ಕೆ.ಪಿ.ರತ್ನಾಕರ ಭಟ್ಟರು ಬರೆದ ಶ್ರೀ ಶಂಕರಾಯಣ ಕಾವ್ಯದ ಭಾಗದಲ್ಲಿ ಶ್ರೀ ಶಂಕರಾ ಚಾರ್ಯರ ಬಾಲ್ಯದ
ಮಹಿಮೆಗಳನ್ನು ವರ್ಣಿಸುವ ಈ ಕಾರ್ಯಕ್ರಮವನ್ನು ಶ್ರೀ ಶಾರದಾ ಸಂಗೀತ ಕಲಾ ಕೇಂದ್ರದ ಮಕ್ಕಳೇ ನಡೆಸಿಕೊಟ್ಟದ್ದು
ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ವಿದ್ವಾನ್ ಜಿ.ಎಸ್. ಗಣಪತಿ ಭಟ್ ಅವರು ಈ ಕಾವ್ಯವು ಶಂಕರಾಚಾರ್ಯರ ಮಹಿಮೆಯನ್ನು
ಅತ್ಯಂತ ಹೃದಯಂಗಮವಾಗಿ ಬಣ್ಣಿಸುತ್ತದೆ. ಅದರಲ್ಲಿ ಶಂಕರರ ಬಾಲ್ಯ ಆ ಕಾಲದಲ್ಲಿ ತೋರಿದ ಅವರು ಸನ್ಯಾಸದ ಅಂಬಲ ಹಾಗೂ
ಮಾತೃಭಕ್ತಿ ಅತ್ಯಂತ ಮನೋಜ್ಞವಾದದ್ದು. ಈ ಭಾಗದ ಸ್ಮರಣೆ ಎಲ್ಲರಿಗೂ ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಶ್ರೇಯಸ್ಕರ ಎಂದರು.
ಶಾರದಾ ಸಂಗೀತ ಕಲಾ ಕೇಂದ್ರದ ಮಕ್ಕಳಾದ ಸ್ತುತಿ ಸಿ.ಆರ್., ಸನ್ನಿಧಿ ಪಿ, ಎಚ್ .,ಅವನಿ ಬಿ.ಕೆ., ಮಾನ್ಯತಾ, ವಿಸ್ಮಯಿ ಬಿ. ಎನ್.,
ವೃತ್ತಿಕಾ ಕೆ. ವೈ., ನಿಹಾಲ್, ಆದ್ಯ ಹಾಗೂ ಸಿರಿ ಇವರು ಈ ವಾಚನ ವ್ಯಾಖ್ಯಾನವನ್ನು ನಡೆಸಿಕೊಟ್ಟರು. ಶಂಕರಾಚಾರ್ಯರ ಜನನ
ಅವರ ಬಾಲ್ಯ, ವೈದಿಕ ಸಂಪಾದನೆ ,ಸನ್ಯಾಸದ ಅಂಬಲ, ಮೊಸಳೆಗೆ ಸಿಕ್ಕಿ ಹಾಕಿಕೊಳ್ಳುವುದು, ತಾಯಿ ಅನುಮೋದನೆ, ಸನ್ಯಾಸ
ಸ್ವೀಕಾರ ,ದೇಶ ಪರ್ಯಟನೆ, ತಾಯಿ ಮರಣ ಹೊಂದಿದಾಗ ತಮ್ಮ ಕೈಯಲ್ಲಿ ಅಗ್ನಿಯನ್ನು ಸೃಷ್ಟಿಸಿಕೊಂಡು ಆಕೆಯ ಶವಸಂಸ್ಕಾರ
ಮಾಡುವುದು ಮೊದಲಾದ ಸಂಗತಿಗಳನ್ನು ಮಕ್ಕಳು ವಾಚನ ಮತ್ತು ವ್ಯಾಖ್ಯಾನ ಮಾಡಿದ ಪರಿ ನಿಜಕ್ಕೂ ಚೇತೋಹಾರಿಯಾಗಿತ್ತು.
ವಿಶೇಷವಾಗಿ ಮೋಹನ, ರೇವತಿ, ಶುಭಪಂತುವರಾಳಿ, ಸಿಂಧು ಭೈರವಿ ಮುಂತಾದ ಕ್ಲಿಷ್ಟ ರಾಗಗಳನ್ನು ಬಳಸಿಕೊಂಡ ಪರಿ ಹಾಗೂ
ಅಸ್ಖಲಿತ ವಾಣಿಯಲ್ಲಿ ಅದರ ವ್ಯಾಖ್ಯಾನ ಮಾಡಿದ್ದು ಸೈ ಸೈ ಎನ್ನುವಂತಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಮಕ ,ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ .ಆರ್ ರಮಾದೇವಿ ವೆಂಕಣ್ಣಾಚಾರ್ ಈ ಮಕ್ಕಳ
ಕಲಾವಂತಿಕೆಯನ್ನು ನೋಡಿದರೆ ಗಮಕ ಕಲೆ ಉಳಿದು ಬಾಳುತ್ತದೆ ಎಂದು ಆಶಿಸುವಂತಾಗಿದೆ. ತಂದೆ ತಾಯಿಗಳು ದಯವಿಟ್ಟು
ಇಂತಹ ಮಕ್ಕಳನ್ನು ಗಮಕ ಕಲೆಯನ್ನು ಕಲಿಯಲು ಪ್ರೋತ್ಸಾಹ ನೀಡಬೇಕು ಎಂದರು.
ಈ ಮಕ್ಕಳಿಗೆ ಗಮಕ ಕಲೆಯಲ್ಲಿ ತರಬೇತಿ ಕೊಟ್ಟ ವಿದುಷಿ ಮೀನಾಕ್ಷಿ ಭಟ್ ಮತ್ತು ಮಾರ್ಗದರ್ಶನ ನೀಡಿದ ವಿದ್ವಾನ್ ಜಿ. ಎಸ್
.ಗಣಪತಿ ಭಟ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.ಗಣಪತಿ ದೇವಾಲಯದ ಖಜಾಂಚಿ ಪ್ರೊ. ಹರೀಶ್ ಕಲಾವಿದ
ಮಕ್ಕಳಿಗೆ ಪಾರಿತೋಷಕಗಳನ್ನು ನೀಡಿ ಅಭಿನಂದಿಸಿದರು.
ಶ್ರೀ ಶಾರದ ಸಂಗೀತ ಕಲಾ ಕೇಂದ್ರದ ಮಕ್ಕಳಾದ ಮನಸ್ವಿ ಆರ್ .ಎಸ್., ಶ್ರೀಹಿತ .ಆರ್. ಎಸ್., ಶ್ರೀ ವಲ್ಲಿ ಕೆ.ಎ., ಶ್ರೀನಿಕ. ಕೆ.ಎ.,
ಇವರು ಹಾಡಿದ ಶಂಕರ ಸ್ತುತಿ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಉಮಾ ಬಿ.ಎಲ್., ಸ್ವಾಗತಿಸಿದರು. ವಿದ್ವಾನ್ ಅನಂತ
ಕೃಷ್ಣ ವಂದಿಸಿದರು. ಶಶಿಧರ್ ಶ್ಯಾನುಭೋಗ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂಘದ 20ನೆಯ ಕಾರ್ಯಕ್ರಮವು ದಿನಾಂಕ 22.03.2025 ರ ಶನಿವಾರ ದಂದು ಸಂಜೆ 6 ಗಂಟೆಗೆ ಜೆಸಿಆರ್ ಗಣಪತಿ
ದೇವಾಲಯದ ಸಭಾಂಗಣದಲ್ಲಿ ನಡೆಯಲಿದ್ದು. ಬೆಂಗಳೂರು ಇಸ್ರೋದಲ್ಲಿ ವಿಜ್ಞಾನಿಗಳಾಗಿರುವ ಶ್ರೀ ಜಯಸಿಂಹ ಮತ್ತು ಅವರ ಪತ್ನಿ
ಶಿಕ್ಷಕಿ ಶ್ರೀಮತಿ ಸುಮಾ ದಂಪತಿಗಳು ಕುಮಾರವ್ಯಾಸ ಭಾರತದ ವಿಶ್ವರೂಪ ದರ್ಶನ ಪ್ರಸಂಗವನ್ನು ವಾಚನ ವ್ಯಾಖ್ಯಾನ
ನಡೆಸಿಕೊಡಲಿದ್ದಾರೆಂದು ಸಂಘವು ತಿಳಿಸಿದೆ.