IPL 2023: ಅಜೇಯ 99 ರನ್ ಬಾರಿಸಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಶಿಖರ್ ಧವನ್..!

IPL 2023: ಕ್ರಿಕೆಟ್ ಅಂಗಳದಲ್ಲಿ ಏಕಾಂಗಿ ಹೋರಾಟ ಹೇಗಿರುತ್ತೆ ಎಂದು ತಿಳಿಯಲು ಐಪಿಎಲ್​ನ 14ನೇ ಪಂದ್ಯದಲ್ಲಿ ಶಿಖರ್ ಧವನ್ ಮಾಡಿದ ಬ್ಯಾಟಿಂಗ್ ಅನ್ನು ವೀಕ್ಷಿಸಲೇಬೇಕು. ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಎಸ್​ಆರ್​ಹೆಚ್ ಬೌಲಿಂಗ್ ಆಯ್ದುಕೊಂಡಿತು.
ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಕಣಕ್ಕಿಳಿದ ಪಂಜಾಬ್ ಕಿಂಗ್ಸ್​ಗೆ ಎಸ್​ಆರ್​ಹೆಚ್​ ಬೌಲರ್​ಗೆ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್​ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ತಂಡವು ಆ ಬಳಿಕ ಚೇತರಿಸಿಕೊಳ್ಳುವ ಪ್ರಯತ್ನ ಮಾಡಿತು. ಆದರೆ 88 ರನ್​ಗಳಿಸುಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಇನಿಂಗ್ಸ್​ ಅಂತ್ಯಗೊಳಿಸುವ ಹಂತಕ್ಕೆ ಬಂದು ನಿಂತಿತು.ಆದರೆ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ ಮಾತ್ರ ಬಂಡೆಯಂತೆ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದರು. ಎಸ್​ಆರ್​ಹೆಚ್​ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಧವನ್ ರನ್​ ಪೇರಿಸುತ್ತಾ ಸಾಗಿದರು. ಪರಿಣಾಮ ಪಂಜಾಬ್ ಕಿಂಗ್ಸ್ ತಂಡದ ಮೊತ್ತ 100ರ ಗಡಿದಾಟಿತು.16ನೇ ಓವರ್​ ವೇಳೆ ಕೊನೆಯ ಬ್ಯಾಟ್ಸ್​ಮನ್ ಮೋಹಿತ್ ರಥಿ ಕ್ರೀಸ್​ಗೆ ಆಗಮಿಸಿದರೂ, ಶಿಖರ್ ಧವನ್ ಕೇವಲ 2 ಬಾರಿ ಮಾತ್ರ ಸ್ಟ್ರೈಕ್ ನೀಡಿದ್ದರು. ಅಂದರೆ ಕೊನೆಯ 22 ಎಸೆತಗಳನ್ನೂ ಕೂಡ ಏಕಾಂಗಿಯಾಗಿ ಶಿಖರ್ ಧವನ್ ಆಡಿದ್ದರು. ಇತ್ತ ಧವನ್ ವಿಕೆಟ್ ಪಡೆಯಲು ಎಸ್​ಆರ್​​ಹೆಚ್ ನಾಯಕ ಐಡೆನ್ ಮಾರ್ಕ್ರಾಮ್ ನಾನಾ ತಂತ್ರಗಳನ್ನು ಹೂಡಿದರೂ ಫಲ ನೀಡಲಿಲ್ಲ. ಬದಲಾಗಿ ಶಿಖರ್ ಅಬ್ಬರ ಮುಂದುವರೆಯಿತು. ಕೊನೆಯ ವಿಕೆಟ್​ನಲ್ಲಿ 55 ರನ್​ ಕಲೆಹಾಕಿದರು. ಈ ಐವತ್ತೈದು ರನ್​ಗಳಲ್ಲಿ ಶಿಖರ್ ಧವನ್ 54 ರನ್​ ಬಾರಿಸಿದ್ದರು ಎಂಬುದೇ ವಿಶೇಷ.ಅಲ್ಲದೆ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 143 ಕ್ಕೆ ತಂದು ನಿಲ್ಲಿಸಿದರು. 66 ಎಸೆತಗಳನ್ನು ಎದುರುಸಿದ ಧವನ್ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 99 ರನ್​ಗಳಿಸಿ ಮಿಂಚಿದರು. ಈ ಅತ್ಯಧ್ಭುತ ಅರ್ಧಶತಕದ ಇನಿಂಗ್ಸ್​ನೊಂದಿಗೆ ಶಿಖರ್ ಧವನ್ ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯನ್ನು ಮುರಿದರು. ಅಂದರೆ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್​ಗಳಿಸಿದವರ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿದ್ದಾರೆ.ಇದಕ್ಕೂ ಮುನ್ನ 50 ಬಾರಿ 50+ ಸ್ಕೋರ್​ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ಇದೀಗ ಎಸ್​ಆರ್​ಹೆಚ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಧವನ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.ಶಿಖರ್ ಧವನ್ 208 ಐಪಿಎಲ್ ಇನಿಂಗ್ಸ್​ನಲ್ಲಿ ಒಟ್ಟು 51 ಬಾರಿ 50+ ಸ್ಕೋರ್​ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 49 ಅರ್ಧಶತಕಗಳು ಸೇರಿವೆ. ಈ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು 50 ಕ್ಕಿಂತ ಅಧಿಕ ರನ್​ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. 165 ಐಪಿಎಲ್ ಇನಿಂಗ್ಸ್​ ಆಡಿರುವ ವಾರ್ನರ್ ಒಟ್ಟು 61 ಬಾರಿ 50+ ಸ್ಕೋರ್​ಗಳಿಸಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿರುವುದು ವಿಶೇಷ.

source https://tv9kannada.com/photo-gallery/cricket-photos/ipl-2023-shikhar-dhawan-99-runs-breaks-virat-kohlis-record-kannada-news-zp-au50-552687.html

Views: 0

Leave a Reply

Your email address will not be published. Required fields are marked *