ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.19:
ಬೆವರು ಸುರಿಸಿ ದುಡಿಯುವ ವರ್ಗಕ್ಕೆ ತಕ್ಕ ಪ್ರತಿಫಲ ಮತ್ತು ಸಾಮಾಜಿಕ ಗೌರವ ಸಿಗದಿದ್ದರೆ ಸಮಾನತೆಯ ಸಮಾಜ ನಿರ್ಮಾಣ ಅಸಾಧ್ಯ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಲಾದ ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತಿ (ಶರಣೋತ್ಸವ) ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಶರಣರು ಕಾಯಕವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸರ್ವಸಮಾನತೆಯ ಸಮಾಜ ನಿರ್ಮಿಸಿದ್ದನ್ನು ಸ್ಮರಿಸಿದರು.
ಒಕ್ಕಲಿಗ ಮುದ್ದಣ್ಣರು ನೇಗಿಲ ಧರ್ಮವನ್ನು ಆಚರಿಸಿ ಕೃಷಿ ಕಾಯಕದ ಮೂಲಕ ಅನ್ನ ನೀಡಿದಷ್ಟೇ ಅಲ್ಲ, ವಚನಗಳ ಮೂಲಕ ಬೌದ್ಧಿಕ ಚಿಂತನೆಗೂ ಕೊಡುಗೆ ನೀಡಿದ ಶರಣರು ಎಂದು ವಿವರಿಸಿದರು. ಕಾಯಕ ಪದಗಳು ಇಂದಿನ ದಿನಗಳಲ್ಲಿ ಜಾತಿಗಳಾಗಿ ಪರಿವರ್ತನೆಯಾಗುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು. ಲಿಂಗಾಯತ ಎಂಬುದು ಜಾತಿಯಲ್ಲ, ಆಚರಣಾಧಾರಿತ ಜೀವನ ಪಥ ಎಂದು ತಿಳಿಸಿದರು.
ಅಂದಿನ ಸಮಾಜದಲ್ಲಿ ದುಡಿದು ತಿನ್ನುವ ಧರ್ಮವಿತ್ತು. ಯಾರಿಗೂ ದುಡಿಯದೇ ತಿನ್ನುವ ಹಕ್ಕಿರಲಿಲ್ಲ. ಕಾಯಕದಿಂದಲೇ ಗುರು–ಶಿಷ್ಯ, ರಾಜ–ಪ್ರಜೆ ಎಲ್ಲರೂ ತಮ್ಮನ್ನು ಗುರುತಿಸಿಕೊಂಡಿದ್ದರು. ಆದರೆ ಇಂದು ಶ್ರಮವಿಲ್ಲದ ಜೀವನ ಶೈಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ಪೋಷಕರು ಮಕ್ಕಳನ್ನು ಕೇವಲ ಪಠ್ಯಾಧಾರಿತ ಶಿಕ್ಷಣ ಮತ್ತು ಹಣದ ಹಿಂದೆ ಓಡಿಸುತ್ತಿದ್ದು, ಕೌಶಲ್ಯ, ಕಾಯಕ ಹಾಗೂ ಸಂಸ್ಕೃತಿಯಿಂದ ದೂರವಾಗುತ್ತಿರುವುದು ಅಪಾಯಕಾರಿಯಾಗಿದೆ ಎಂದರು. ಓದಿದವರು ಕೃಷಿ ಮಾಡಬಾರದು ಎನ್ನುವ ಭ್ರಮೆ ಬಿಡಬೇಕು. ಬಿಡುವಿನ ಸಮಯದಲ್ಲಿ ಕೃಷಿ ಹಾಗೂ ಶ್ರಮಾಧಾರಿತ ಚಟುವಟಿಕೆಗಳಿಗೆ ಒತ್ತು ನೀಡಿದರೆ ಆರೋಗ್ಯಪೂರ್ಣ ಮತ್ತು ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಕಾಳೇಗೌಡ ಬಸಪ್ಪ ಗುಡಸಿ, ಭಕ್ತರು, ಸಾರ್ವಜನಿಕರು, ಎಸ್‌ಜೆಎಂ ವಿದ್ಯಾಸಂಸ್ಥೆಯ ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸ್‌ಜೆಎಂ ಔಷಧ ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಕಟ್ಟಿ ವಚನ ಪ್ರಾರ್ಥನೆ ನೆರವೇರಿಸಿದರು. ಸಹ ಪ್ರಾಧ್ಯಾಪಕಿ ಪೂಜಾ ಸ್ವಾಗತಿಸಿ, ಮೇಘನಾ ಶರಣು ಸಮರ್ಪಣೆ ಸಲ್ಲಿಸಿದರು. “ಉಳುವಾ ಯೋಗಿಯ ನೋಡಲ್ಲಿ” ರೈತಗೀತೆ ಹಾಡುವ ಮೂಲಕ ಶಿವಶರಣ ಒಕ್ಕಲಿಗ ಮುದ್ದಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
Views: 153