ಒಂದೇ ರೈಲ್ವೆ ಟಿಕೆಟ್ ಹಲವು ಸೇವೆ; ಊಟ, ಚಿಕಿತ್ಸೆ, ವಿಶ್ರಾಂತಿ ಕೊಠಡಿ, ಡಾರ್ಮಿಟರಿ, ಲಾಕರ್ ರೂಂ ಸೌಲಭ್ಯ.

ನವದೆಹಲಿ, ಮೇ 15: ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಖರೀದಿಸಬೇಕು. ಈ ಟಿಕೆಟ್ (IRCTC train ticket) ಕೇವಲ ರೈಲು ಪ್ರಯಾಣಕ್ಕೆ ಮಾತ್ರವೇ ಇರುವುದು ಎಂದೇ ಬಹುತೇಕರು ಭಾವಿಸಿದ್ದಾರೆ. ಈ ರೈಲು ಟಿಕೆಟ್​ನಿಂದ ಇನ್ನೂ ಹಲವು ಸೌಲಭ್ಯಗಳು ಸಿಗುತ್ತವೆ. ಆಹಾರದಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯವರೆಗೆ ಹಲವು ಸೇವೆಗಳ ಅವಕಾಶ ಈ ಒಂದು ರೈಲು ಟಿಕೆಟ್​ನಿಂದ ಲಭ್ಯ ಇರುತ್ತದೆ. ರಿಸರ್ವೇಶನ್ ಮಾಡಿಸಿ ಖಚಿತಗೊಂಡ ರೈಲು ಟಿಕೆಟ್ ಅನ್ನು ಹೊಂದಿರುವ ಪ್ರಯಾಣಿಕರಿಗೆ ಕೆಲ ಸೇವೆಗಳು ಉಚಿತವಾಗಿ ಸಿಗುತ್ತವೆ. ಇನ್ನೂ ಕೆಲವು ಸೇವೆಗಳು ಅಗ್ಗದ ಬೆಲೆಗೆ ಲಭಿಸುತ್ತವೆ.

ಕನ್​ಫರ್ಮ್ಡ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಇರುವ ಸೌಲಭ್ಯಗಳು

  • ರೈಲು ಹೊರಡುವ ಕಾಲಕ್ಕೆ ಎರಡು ಗಂಟೆ ಮುಂಚೆ ಬಿಎಂಟಿಸಿ ಇತ್ಯಾದಿ ಸರ್ಕಾರದ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಓಡಾಡಬಹುದು.
  • ಟಿಕೆಟ್ ಮೇಲೆ ಕೇವಲ 35 ಪೈಸೆ ಹೆಚ್ಚುವರಿ ಹಣಕ್ಕೆ ಟ್ರಾವಲಿಂಗ್ ಇನ್ಷೂರೆನ್ಸ್ ಸಿಗುತ್ತದೆ.
  • ರೈಲು ವಿಳಂಬವಾಗಿದ್ದರಿಂದಲೂ ಮತ್ಯಾವ ಕಾರಣದಿಂದಲೋ ನಿಮಗೆ ವಿಶ್ರಾಂತಿ ಕೊಠಡಿ ಬೇಕಿದ್ದಲ್ಲಿ ಅದೂ ಲಭ್ಯ ಇರುತ್ತದೆ. ಒಂದು ದಿನಕ್ಕೆ 20 ರೂಗೆ ಇದು ಸಿಗುತ್ತದೆ.
  • ರಿಟೈರಿಂಗ್ ರೂಮ್ ಬೇಡ, ಬರೀ ಡಾರ್ಮಿಟರಿ ಮಾತ್ರ ಸಾಕು ಎಂದರೆ ದಿನಕ್ಕೆ 10 ರೂಗೆ ಅದು ಸಿಗುತ್ತದೆ. ಈ ಡಾರ್ಮಿಟರಿ ರೂಮ್​ನಲ್ಲಿ ದಿಂಬು ಕೊಡಲಾಗುತ್ತದೆ.
  • ರೈಲು ಪ್ರಯಾಣದ ವೇಳೆ ಅನಾರೋಗ್ಯವಾದರೆ ಚಿಕಿತ್ಸೆ ಲಭ್ಯ ಇರುತ್ತದೆ.
  • ರೈಲು ಹೊರಡುವುದು ಎರಡು ಗಂಟೆಗೂ ಹೆಚ್ಚು ಕಾಲ ವಿಳಂಬವಾದರೆ ಐಆರ್​ಸಿಟಿಸಿ ಕ್ಯಾಂಟೀನ್​ನಿಂದ ಉಚಿತವಾಗಿ ಊಟ ಮಾಡಬಹುದು.
  • ರೈಲು ನಿಲ್ದಾಣಗಳಲ್ಲಿರುವ ಲಾಕರ್ ರೂಮ್, ಕ್ಲೋಕ್ ರೂಮ್ ಸೌಲಭ್ಯಗಳನ್ನು ನಿರ್ದಿಷ್ಟ ಶುಲ್ಕ ತೆತ್ತು ಪಡೆಯಬಹುದು.

ವಿಶ್ರಾಂತಿ ಕೊಠಡಿ ಸೌಲಭ್ಯ ಮೊದಲೇ ಬುಕ್ ಮಾಡಿ

ನೀವು ಟಿಕೆಟ್ ಬುಕ್ ಮಾಡಿದ ಬಳಿಕವೂ ರಿಟೈರಿಂಗ್ ರೂಮ್ ಸೌಲಭ್ಯಕ್ಕೆ ಕಾಯ್ದಿರಿಸಬಹುದು. ಐಆರ್​ಸಿಟಿಸಿ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿ, ‘ಮೈ ಬುಕಿಂಗ್’ ಸೆಕ್ಷನ್​ಗೆ ಹೋಗಿ ನಿಮ್ಮ ಟಿಕೆಟ್ ತೆರೆಯಿರಿ. ಕೆಳಗೆ ರಿಟೈರಿಂಗ್ ರೂಮ್ ಆಯ್ಕೆ ಕಾಣಬಹುದು. ಅದನ್ನು ಕ್ಲಿಕ್ ಮಾಡಿ ವಿವರ ತುಂಬಿಸಿದರೆ ರಿಟೈರಿಂಗ್ ರೂಮ್ ಅನ್ನು ಕಾಯ್ದಿರಿಸಬಹುದು. ಒಂದು ದಿನಕ್ಕೆ 20 ರೂ ಆಗುತ್ತದೆ.

10 ಲಕ್ಷ ರೂ ಇನ್ಷೂರೆನ್ಸ್ ಕವರೇಜ್

ಆನ್​ಲೈನ್​ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಇನ್ಷೂರೆನ್ಸ್ ಆಯ್ಕೆಯೂ ಇರುತ್ತದೆ. ರೈಲ್ವೆ ಟಿಕೆಟ್ ದರಕ್ಕಿಂತ ಕೇವಲ 35 ಪೈಸೆ ಹೆಚ್ಚು ನೀಡಿದರೆ ಟಿಕೆಟ್ ಜೊತೆಗೆ ಟ್ರಾವಲ್ ಇನ್ಷೂರೆನ್ಸ್ ಸಿಗುತ್ತದೆ. ಐದು ಲಕ್ಷ ರೂ ಕವರೇಜ್ ಇರುತ್ತದೆ. 49 ಪೈಸೆಗೆ 10 ಲಕ್ಷ ರೂ ಕವರೇಜ್ ಸಿಗುತ್ತದೆ. ರೈಲು ಪ್ರಯಾಣದಲ್ಲಿ ಏನಾದರೂ ಹೆಚ್ಚುಕಡಿಮೆ ಆದರೆ ಇದು ಸಹಾಯಕ್ಕೆ ಬರುತ್ತದೆ.

ವೈದ್ಯಕೀಯ ಚಿಕಿತ್ಸೆ…

ರೈಲು ಪ್ರಯಾಣದ ವೇಳೆ ನಿಮಗೆ ಅನಾರೋಗ್ಯವಾದಲ್ಲಿ ಅಥವಾ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದ್ದಲ್ಲಿ ಆರ್​ಪಿಎಫ್​ಗೆ ಮಾಹಿತಿ ನೀಡಬೇಕು. ಅಥವಾ 139 ನಂಬರ್​ಗೆ ಕರೆ ಮಾಡಬಹುದು. ರೈಲಿನಲ್ಲೇ ಪ್ರಥಮ ಚಿಕಿತ್ಸೆ ಕೊಡಲಾಗುತ್ತದೆ. ಚಿಕಿತ್ಸೆಗೆ ಬೇಕಾದ ಸೌಲಭ್ಯ ರೈಲಿನಲ್ಲಿ ಇಲ್ಲದಿದ್ದಲ್ಲಿ ಮುಂದಿನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

Source : https://tv9kannada.com/business/irctc-one-train-ticket-many-facilities-including-rooms-food-etc-snvs-832453.html

Views: 0

Leave a Reply

Your email address will not be published. Required fields are marked *