Smriti Madhana: ಸತತ ಎರಡನೇ ಸೋಲು: ಪಂದ್ಯದ ಬಳಿಕ ಬೇಸರದಿಂದ ಸ್ಮೃತಿ ಮಂಧಾನ ಏನು ಹೇಳಿದ್ರು ನೋಡಿ

Smriti Mandhana MIW vs RCBW

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ (WPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ದ್ವಿತೀಯ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ (MIW vs RCBW) ಸೋಲು ಕಂಡಿತು. ಬ್ಯಾಟಿಂಗ್​ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಮಂಧಾನ ಪಡೆಯಲ್ಲಿ ಬೌಲರ್​ಗಳು ಕೂಡ ಕಮಾಲ್ ಮಾಡಲಿಲ್ಲ. ಎದುರಾಳಿಯ ಒಂದು ವಿಕೆಟ್ ಕೀಳಲಷ್ಟೇ ಶಕ್ತರಾದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ (Smriti Madhana) ಏನು ಹೇಳಿದರು ನೋಡಿ.

”ನಾವು ಇನ್ನಷ್ಟು ಉತ್ತಮ ರನ್ ಕಲೆಹಾಕಲು ಕಲಿಯಬೇಕು. ಈ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಬಲಿಷ್ಠವಾಗಿ ಮುಂದಿನ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುತ್ತೇವೆ. ನನ್ನನ್ನು ಸೇರಿದಂತೆ 2-3 ಬ್ಯಾಟರ್​ಗಳು 20+ ರನ್ ಹೊಡೆದರು ಆದರೆ, ಅದು ಸಾಕಾಗಲಿಲ್ಲ. ನಾವು ಉತ್ತಮ ಬೌಲಿಂಗ್ ವಿಭಾಗವನ್ನು ಹೊಂದಿದ್ದೇವೆ, 6-7 ಜನ ಬೌಲರ್​ಗಳಿದ್ದಾರೆ. ಆದರೆ, ಬ್ಯಾಟರ್​ಗಳು ರನ್ ಗಳಿಸದೇ ಇದ್ದಾಗ ಬೌಲರ್​ಗಳಿಗೆ ಹೆಚ್ಚಿನದ್ದನ್ನು ಹೇಳಲು ಸಾಧ್ಯವಿಲ್ಲ,” ಎಂದು ಸೋಲಿಗೆ ಕಾರಣ ನೀಡಿದ್ದಾರೆ.

ಮಾತು ಮುಂದುವರೆಸಿದ ಸ್ಮೃತಿ, ”ಈ ಟೂರ್ನಿಯಲ್ಲಿ ಕಡಿಮೆ ಪಂದ್ಯ ಇದೆ. ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಒಮ್ಮೆ ಗೆಲ್ಲಲು ಪ್ರಾರಂಭಿಸಿದರೆ ನಂತರ ಅದೇ ಲಯದಲ್ಲಿ ಮುಂದೆ ಸಾಗಬಹುದು. ನಮ್ಮ ಟಾಪ್ ಆರ್ಡರ್ ಕುಸಿತ ಕಂಡ ನಂತರ ಕನಿಕಾ ಹಾಗೂ ಶ್ರೀಯಾಂಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರಲ್ಲಿ ಒಳ್ಳೆಯ ಬ್ಯಾಟಿಂಗ್ ಟೆಕ್ನಿಕ್ ಇದೆ. ಅವರು ಆಡಿದ ರೀತಿ ನಿಜಕ್ಕೂ ಖುಷಿ ತಂದಿದೆ,” ಎಂದು ಮಂಧಾನ ಹೇಳಿದ್ದಾರೆ.

IND vs AUS: ವೀಕ್ಷಕ ವಿವರಣೆ ನೀಡಲಿದ್ದಾರೆ ಮೋದಿ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ 4ನೇ ಟೆಸ್ಟ್

ಗೆದ್ದ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಮಾತನಾಡಿ, ”ನಮ್ಮ ಬ್ಯಾಟಿಂಗ್ ಕಳೆದ ಪಂದ್ಯದ ರೀತಿಯಲ್ಲೇ ಇತ್ತು. ಆದರೆ, ಬೌಲಿಂಗ್​ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಹುದಿತ್ತು. ಆದರೂ ಎದುರಾಳಿಯನ್ನು ಕಡಿಮೆ ಸ್ಕೋರ್​ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದೆವು. ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯ ತನ್ನ ಜವಾಬ್ದಾರಿಯನ್ನು ಅರಿತು ಆಡುತ್ತಿದ್ದಾರೆ. ಇದು ಖುಷಿ ನೀಡುತ್ತದೆ,” ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ನಾಯಕಿ ಸ್ಮೃತಿ ಮಂದಾನ ಹಾಗೂ ಸೋಫಿ ಡಿವೈನ್‌ ಬಿರುಸಿನ ಆರಂಭ ನೀಡಿದರು. ಕೇವಲ 4.1 ಓವರ್‌ಗಳಲ್ಲಿ 39 ರನ್‌ ಗಳಿಸಿದರು. ಆದರೆ, ಈ ಹಂತದಲ್ಲಿ ಆರ್‌ಸಿಬಿಗೆ ಡಬಲ್ ಆಘಾತ ಉಂಟಾಯಿತು. ಒಂದೇ ಓವರ್‌ನಲ್ಲಿ ಸೋಫಿ (16) ಹಾಗೂ ದಿಶಾ ಕಾಸತ್‌ (0) ಔಟಾದರು. ಸ್ಮೃತಿ (23) ಹಾಗೂ ಹೆಥರ್ ನೈಟ್‌ (0) ಕೂಡ ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಿತು. ರಿಚಾ ಘೋಷ್‌ (28), ಕನಿಕಾ ಅಹುಜಾ (22), ಶ್ರೇಯಾಂಕಾ ಪಾಟಿಲ್‌ (23) ಹಾಗೂ ಮೇಗನ್‌ ಶುಟ್‌ (20) ಕೆಳ ಕ್ರಮಾಂಕದಲ್ಲಿ ಕೈಲಾದಷ್ಟು ಸಹಾಯ ಮಾಡಿ ಔಟಾದರು. ಪರಿಣಾಮ ಆರ್​​ಸಿಬಿ 18.4 ಓವರ್​ಗಳಲ್ಲಿ 155 ರನ್​ಗೆ ಆಲೌಟ್ ಆಯಿತು. ಮುಂಬೈ ಪರ ಹೀಲಿ ಮ್ಯಾಥ್ಯೂಸ್‌ 3 ವಿಕೆಟ್‌ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿತು. ಸ್ಪೋಟಕಆಟವಾಡಿದ ಹೇಯ್ಲೀ ಮ್ಯಾಥ್ಯೂಸ್‌ ಕೇವಲ 38 ಎಸೆತಗಳಲ್ಲಿ 13 ಫೋರ್‌ ಮತ್ತೊಂದು ಸಿಕ್ಸರ್‌ ಮೂಲಕ ಅಜೇಯ 77 ರನ್‌ ಸಿಡಿಸಿದರು. ಯುವ ಬ್ಯಾಟರ್‌ ಯಸ್ತಿಕಾ ಭಾಟಿಯಾ 23 ರನ್‌ ಗಳಿಸಿ ಔಟಾದರೂ ತಂಡಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ನತಾಲಿ ಶಿವರ್‌ 29 ಎಸೆತಗಳಲ್ಲಿ 9 ಫೋರ್‌ ಮತ್ತೊಂದು ಸಿಕ್ಸರ್‌ ಸಹಿತ ಅಜೇಯ 55 ರನ್‌ ಬಾರಿಸಿದರು. ಪರಿಣಾಮ ಮುಂಬೈ ತಂಡ 14.2 ಓವರ್‌ಗಳಲ್ಲೇ 159 ರನ್‌ ಸಿಡಿಸಿ 9 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಸತತ ಎರಡು ದೊಡ್ಡ ಗೆಲುವನೊಂದಿಗೆ ಮುಂಬೈ ಪಾಯಿಂಟ್ ಟೇಬಲ್​ನಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/smriti-mandhana-in-the-post-match-presentation-after-mumbai-indians-women-vs-rcb-women-wpl-2023-match-vb-au48-532036.html

Leave a Reply

Your email address will not be published. Required fields are marked *