Smriti Mandhana – ಭಾರತ ತಂಡ ವಾಕಾದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಸೋಲುವ ಮೂವರ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿದೆ. ಆದರೆ ಜಿದ್ದಾಜಿದ್ದಿನ ಪಂದ್ಯದಲ್ಲಿ ವಿರೋಚಿತ ಹೋರಾಟ ಮಾಡಿ ಶತಕ ಬಾರಿಸಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಹೊಸ ವಿಶ್ವದಾಖಲೆ ಬರೆದಿದ್ದಾರೆ. 2024ರಲ್ಲಿ ಇದು ಅವರ 4ನೇ ಏಕದಿನ ಶತಕವಾಗಿದ್ದು ವೃತ್ತಿ ಜೀವನದಲ್ಲಿ 9ನೇಯದ್ದಾಗಿದೆ. ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕ ಬಾರಿಸಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.

ಭಾರತ ಮಹಿಳೆಯರ ತಂಡ ಆಸ್ಟ್ರೇಲಿಯಾ ವಿರುದ್ಧ ವಾಕಾದಲ್ಲಿ ನಡೆದ 3ನೇ ಏಕದಿನ ಪಂದ್ಯವನ್ನಾದರೂ ಗೆದ್ದು ವೈಟ್ ವಾಶ್ ನಿಂದ ತಪ್ಪಿಸಿಕೊಳ್ಳಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಆಸ್ಟ್ರೇಲಿಯಾದ ಸರ್ವಾಂಗೀಣ ಆಟದ ಎದುರು ನಿರುತ್ತರವಾದ ಭಾರತ ತಂಡ 83 ರನ್ ಗಳಿಂದ ಸೋಲೊಪ್ಪಿಕೊಂಡಿದೆ. ಆದರೆ ಇಡೀ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಶತಕ ಗಳಿಸುವುದರೊಂದಿಗೆ ಹೊಸ ಇತಿಹಾಸ ಬರೆದರು.
ಮಹಿಳಾ ಕ್ರಿಕೆಟ್ ನ ಏಕದಿನ ಪಂದ್ಯಗಳಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ನಾಲ್ಕು ಶತಕ ಬಾರಿಸಿದವರು ಇಲ್ಲ. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಸ್ಮೃತಿ ಪಾತ್ರರಾದರು. ಈ ಹಿಂದೆ 7 ಆಟಗಾರ್ತಿಯರು ಕ್ಯಾಲೆಂಡರ್ ವರ್ಷದಲ್ಲಿ 3 ಶತಕಗಳನ್ನು ಹೊಡೆದಿದ್ದಾರೆ. ಆಧರೆ ನಾಲ್ಕು ಶತಕ ಗಳಿಸಲು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸ್ಮೃತಿ ಮಂದಾನ ಅವರ ಈ ಸಾಧನೆ ಬಹಳ ಮಹತ್ವದ್ದಾಗಿದೆ.
ಒಟ್ಟಾರೆ 9ನೇ ಶತಕ
ಇದು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ 9ನೇ ಏಕದಿನ ಶತಕವಾಗಿದೆ. ವಿಶ್ವ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ 15 ಶತಕಗಳೊಂದಿಗೆ ಮೊದಲನೇ ಸ್ಥಾನದಲ್ಲಿದ್ದಾರೆ. ಆನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್ ನ ಬೇಟ್ಸ್(13), ಇಂಗ್ಲೆಂಡಿನ ಬಿಮೌಂಟ್ 3ನೇ ಸ್ಥಾನಗಳಲ್ಲಿ ಇದ್ದಾರೆ. ಸ್ಮೃತಿ ಮಂದಾನ ಅವರು ತಲಾ 9 ಶತಕ ಗಳಿಸಿರುವ ಇಂಗ್ಲೆಂಡ್ ನ ನತಾಲಿ ರುತ್ ಸಿವಿರ್ ಬ್ರಂಟ್, ಎಡ್ವರ್ಡ್ಸ್, ಶ್ರೀಲಂಕಾದ ಚಾಮರಿ ಅಟಪಟ್ಟು ಜೊತೆಗೆ ಜಂಟಿಯಾಗಿ 4ನೇ ಸ್ಥಾನದಲ್ಲಿ ಇದ್ದಾರೆ.
ಭಾರತದ ಪರ ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ಈ ಹಿಂದೆ ಮಾಜಿ ನಾಯಕಿ ಮಿಥಾಲಿ ರಾಜ್ (7 ಶತಕ) ಅವರ ಹೆಸರಿನಲ್ಲಿ ಇತ್ತು. ಆ ದಾಖಲೆಯನ್ನು ಈ ವರ್ಷದ ಪ್ರಾರಂಭದಲ್ಲಿ ಸ್ಮೃತಿ ಅವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.
ವರ್ಷದಲ್ಲಿ ಅಧಿಕ ಶತಕ
ಆಟಗಾರ್ತಿ | ದೇಶ | ಶತಕ | ವರ್ಷ |
ಸ್ಮೃತಿ ಮಂದಾನ | ಭಾರತ | 4 | 2024 |
ನತಾಲಿ ಬ್ರಂಟ್ | ಇಂಗ್ಲೆಂಡ್ | 3 | 2023 |
ಸೋಫಿ ಡಿವೈನ್ | ನ್ಯೂಜಿಲೆಂಡ್ | 3 | 2018 |
ಲೌರಾ ವಲ್ ವರ್ಡ್ತ್ | ದಕ್ಷಿಣ ಆಫ್ರಿಕಾ | 3 | 2024 |
ಸಿದ್ರಾ ಅಮೀನ್ | ಪಾಕಿಸ್ತಾನ | 3 | 2022 |
ಬೆಲಿಂಡಾ ಕ್ಲಾರ್ಕ್ | ಆಸ್ಟ್ರೇಲಿಯಾ | 3 | 1997 |
ಏನಿ ಸಟ್ಟರ್ಥ್ ವೈಟ್ | ನ್ಯೂಜಿಲೆಂಡ್ | 3 | 2016 |
ಮೆಗ್ ಲ್ಯಾನಿಂಗ್ | ಆಸ್ಟ್ರೇಲಿಯಾ | 3 | 2016 |
ಸಂಕ್ಷಿಪ್ತ ಸ್ಕೋರ್
- ಆಸ್ಟ್ರೇಲಿಯಾ ಮಹಿಳಾ ತಂಡ 298/6- ಅನಾಬೆಲ್ ಸದರ್ ಲ್ಯಾಂಡ್ 110, ಟೆಹ್ಲಾ ಮೆಕ್ ಗ್ರಾಥ್ 56 ನಾಟೌಟ್, ಆಶ್ಲೇ ಗಾರ್ಡನರ್ 50, ಅರುಂಧತಿ ರೆಡ್ಡಿ 26ಕ್ಕೆ 4
- ಭಾರತ ಮಹಿಳಾ ತಂಡ 45.1 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್- ಸ್ಮೃತಿ ಮಂಜಾನ 105, ಹರ್ಲಿನ್ ಡಿಯೋಲ್ 39, ಆ್ಯಶ್ಲೆ ಗಾರ್ಡನರ್ 30ಕ್ಕೆ 5