
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2023) ರೋಚಕ ಘಟ್ಟದತ್ತ ತಲುಪುತ್ತಿದೆ. ಮುಂಬೈ ಇಂಡಿಯನ್ಸ್ ಆಡಿದ ಎಲ್ಲ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಸೋಮವಾರ ನೇವಿ ಮುಂಬೈನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ (DCW vs RCBW) ಸೋಲು ಕಂಡಿತು. ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ಬೆಂಗಳೂರಿಗೆ ಗೆಲ್ಲಲು ಸಾಧ್ಯವಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ (Smriti Mandhana) ಏನು ಹೇಳಿದರು ನೋಡಿ.
”ನಮ್ಮ ತಂಡದ ಬೌಲರ್ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ಕೊನೆಯ 20 ಓವರ್ ವರೆಗೂ ಪಂದ್ಯವನ್ನು ಕೊಂಡೊಯ್ಯಿದಿದ್ದಾರೆ. ಖಂಡಿತವಾಗಿಯೂ ಸಾಕಷ್ಟು ಬೆಳವಣಿಗೆ ಆಗಿದೆ. ಹೀಗಿದ್ದರೂ ತಂಡದಲ್ಲಿ ಸರಿಪಡಿಸಿಕೊಳ್ಳಬೇಕಾದ ಕೆಲಸ ತುಂಬಾ ಇದೆ,” ಎಂದು ಹೇಳಿದರು. ಇದೇವೇಳೆ 34 ಎಸೆತಗಳಲ್ಲಿ 74 ರನ್‌ಗಳ ಜೊತೆಯಾಟ ಆಡಿದ ಎಲಿಸ್ಸಾ ಪೆರಿ ಮತ್ತು ರಿಚ್ಚಾ ಘೋಷ್ ಆಟದ ಬಗ್ಗೆ ಮಾತನಾಡಿದ ಮಂಧಾನ, ”ಈ ಪಂದ್ಯದಲ್ಲಿ ಉತ್ತಮ ಜೊತೆಯಾಟ ಆಡಿದೆವು. ರಿಚ್ಚಾ-ಪೆರಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ತಮ್ಮ ಅನುಭವವನ್ನು ದಾರೆ ಎರೆದ ಪರಿಣಾಮ ತಂಡ ಸವಾಲಿನ ಟಾರ್ಗೆಟ್ ನೀಡಲು ಕಾರಣವಾಯಿತು,” ಎಂದು ಹೇಳಿದ್ದಾರೆ.
IND vs AUS: ಟೆಸ್ಟ್ ಕ್ರಿಕೆಟ್ನಲ್ಲಿ ಅಪರೂಪದ ದಾಖಲೆ ಬರೆದ ಅಕ್ಷರ್ ಪಟೇಲ್
”ನಮ್ಮ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇದರಲ್ಲಿ ನನ್ನ ಕಳಪೆ ಬ್ಯಾಟಿಂಗ್ ಕೂಡ ಸೇರಿದೆ. ಮೊದಲ 14 ಓವರ್ ನಮಗೆ ನಿಜಕ್ಕೂ ನೋವು ನೀಡಿತು. ಇನ್ನೂ 10 ರಿಂದ 15 ರನ್ ಹೆಚ್ಚು ಕಲೆಹಾಕುತ್ತಿದ್ದರೆ ಸಹಾಯ ಆಗುತ್ತಿತ್ತು. ಪಂದ್ಯ ಸಾಗುತ್ತಾ ವಿಕೆಟ್ ನಿಧಾನವಾಗಲು ಪ್ರಾರಂಭಿಸಿತು. ಸ್ಪಿನ್ನರ್ಗಳು ಉತ್ತಮ ಟರ್ನ್ ಪಡೆದರು, ವೇಗಿಗಳು ಒಳ್ಳೆಯ ಲಯ ಕಂಡುಕೊಂಡಿದ್ದರು, ಸ್ಲೋವರ್ ಬಾಲ್ ಕೂಡ ಕೆಲಸ ಮಾಡುತ್ತಿತ್ತು,” ಎಂಬುದು ಮಂಧಾನ ಮಾತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭಿಕ ಆಘಾತಕ್ಕೊಳಗಾಯಿತು. ಮತ್ತೊಮ್ಮೆ ವೈಫಲ್ಯ ನುಭವಿಸಿದ ಕ್ಯಾಪ್ಟನ್ ಸ್ಮೃತಿ ಮಂಧಾನ 15 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಉತ್ತಮ ಲಯದಲ್ಲಿದ್ದ ಸೋಫಿ ಡಿವೈನ್ 19 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಈ ಸಂದರ್ಭ ತಂಡಕ್ಕೆ ನೆರವಗಿದ್ದು ಆಲ್‌ರೌಂಡರ್ ಎಲಿಸ್ಸಾ ಪೆರಿ ಹಾಗೂ ರಿಚಾ ಘೋಷ್. ಅತ್ಯುತ್ತಮ ಜೊತೆಯಾಟ ಆಡಿದ ಈ ಜೋಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಘೋಷ್ 17 ಎಸೆತಗಳಲ್ಲಿ 3 ಸಿಕ್ಸರ್, 2 ಫೋರ್ನೊಂದಿಗೆ 37 ರನ್ ಸಿಡಿಸಿದರೆ 52 ಎಸೆತಗಳನ್ನು ಎದುರಿಸಿದ ಪೆರಿ 4 ಫೋರ್ ಮತ್ತು 5 ಸಿಕ್ಸರ್‌ಗಳೊಂದಿಗೆ 67 ರನ್ ಬಾರಿಸಿ ಔಟಾಗದೆ ಉಳಿದರು. ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 150 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ತಂಡವು ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (0) ವಿಕೆಟ್ ಅನ್ನು ಮೊದಲ ಓವರ್ನಲ್ಲೇ ಕಳೆದುಕೊಂಡಿತು. ಮೆಗ್ ಲ್ಯಾನಿಂಗ್ (15) ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಅಲಿಸ್ ಕ್ಯಾಪ್ಸಿ (38), ಜೆಮಿಮಾ ರಾಡ್ರಿಸಗ್ (32), ಮರಿಜಾನ್ ಕಾಪ್ (ಔಟಾಗದೆ 32) ಮತ್ತು ಜೆಸ್ ಜೊನಾಸೆನ್ (ಔಟಾಗದೆ 29) ತಂಡವನ್ನು ಜಯದ ದಡ ಸೇರಿಸಿದರು. ಕೊನೆಯ ಓವರ್ನಲ್ಲಿ ಡೆಲ್ಲಿ ಗೆಲುವಿಗೆ 9 ರನ್‌ಗಳ ಅವಶ್ಯಕತೆಯಿತ್ತು. ಆದರೆ, ರೇಣುಕಾ ಸಿಂಗ್ ಈ ಮೊತ್ತವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಇನ್ನೂ 2 ಎಸೆತ ಬಾಕಿ ಇರುವಂತೆಯೆ ಡೆಲ್ಲಿ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿ 6 ವಿಕೆಟ್ಗಳ ಜಯ ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Views: 0