ಶೀಘ್ರದಲ್ಲೇ ಸಾನಿಯಾ ಜತೆ ಮೊಹಮ್ಮದ್​ ಶಮಿ ಮದುವೆ!? ಇಲ್ಲಿದೆ ನೋಡಿ ಅಸಲಿ ಸಂಗತಿ.

ನವದೆಹಲಿ: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಭಾರತದ ಟೆನ್ನಿಸ್​ ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಟೆನ್ನಿಸ್​ನಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಿರುವ ಸಾನಿಯಾ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​ರನ್ನು ಮದುವೆಯಾಗುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಸಾನಿಯಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಮಲಿಕ್​ ಮತ್ತೊಂದು ಮದುವೆಯಾಗುವ ಮೂಲಕ ಸಾನಿಯಾಗೆ ಶಾಕ್​ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಡಿವೋರ್ಸ್​ ವದಂತಿ ಹರಿದಾಡುತ್ತಲೇ ಇತ್ತು. ಆದರೆ, ಪಾಕ್​ ನಟಿ ಸನಾ ಜಾವೇದ್​ರನ್ನು ಮಲಿಕ್​ ಮೂರನೇ ವಿವಾಹವಾಗುವ ಮೂಲಕ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಡಿವೋರ್ಸ್​ ಬಳಿಕ ಸಾನಿಯಾ ಇದೀಗ ಏಕಾಂಗಿಯಾಗಿದ್ದಾರೆ. ಸಾನಿಯಾಗೆ ಮಗ ಇಝಾನ್​ ಆಸರೆಯಾಗಿದ್ದಾರೆ. ಮಲಿಕ್​ ನಡೆಯನ್ನು ಪಾಕ್​ ಮಾಧ್ಯಮಗಳು ಸಹ ಟೀಕಿಸುತ್ತಿವೆ. ಅಲ್ಲದೆ, ಸನಾ ಜಾವೇದ್​ ಜತೆಗಿನ ಮಲಿಕ್​ ಮದುವೆಗೆ ಸ್ವತಃ ಅವರ ಕುಟುಂಬದವರೇ ಹಾಜರಾಗಿರಲಿಲ್ಲ ಮತ್ತು ಮಾಧ್ಯಮಗಳ ಮುಂದೆಯೇ ಅಸಮಾಧಾನ ಹೊರಹಾಕಿದ್ದಾರೆ. ಸಾನಿಯಾರದ್ದು ಯಾವ ತಪ್ಪು ಇಲ್ಲ ಎಂದಿದ್ದಾರೆ.

ಇನ್ನು ಸನಾರನ್ನು ಮದುವೆ ಆಗುವ ಮುಂಚೆ 3 ವರ್ಷಗಳ ಕಾಲ ಆಕೆಯೊಂದಿಗೆ ಶೋಯಿಬ್​ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇದೀಗ ಏಕಾಂಗಿಯಾಗಿರುವ ಸಾನಿಯಾರ ಮುಂದಿನ ಜೀವನ ಏನು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇದರ ನಡುವೆ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಜತೆ ಸಾನಿಯಾಗೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಶಮಿ ಕೂಡ ತಮ್ಮ ಮಾಜಿ ಪತ್ನಿ ಹಸಿನಾ ಜಹಾನ್​ರಿಂದ ದೂರಾಗಿದ್ದಾರೆ. ಶಮಿ ವಿರುದ್ಧ ಜಹಾನ್​ ಕೌಟುಂಬಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಈ ವಿಚಾರ ಕೋರ್ಟ್​ ಮೆಟ್ಟಿಲು ಸಹ ಏರಿದ್ದು, ಇಬ್ಬರು ಡಿವೋರ್ಸ್​ ಪಡೆದುಕೊಂಡಿದ್ದಾರೆ. ಶಮಿ ಕೂಡ ಇದೀಗ ಏಕಾಂಗಿಯಾಗಿದ್ದಾರೆ.

ಸಾನಿಯಾ ಮತ್ತು ಶಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ಅನೇಕ ಪೋಸ್ಟರ್​ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಇಬ್ಬರು ಕ್ರೀಡಾಪಟುಗಳ ಆಪ್ತರು ಈ ವದಂತಿಯನ್ನು ತಳ್ಳಿಹಾಕಿದ್ದು, ಇಬ್ಬರ ಖಾಸಗಿತನವನ್ನು ಗೌರವಿಸಿ ಎಂದು ಕೇಳಿಕೊಂಡಿದ್ದಾರೆ. ಸುಳ್ಳು ಮಾಹಿತಿ ಅಥವಾ ಊಹಾಪೋಹಗಳು ಖ್ಯಾತಿಯನ್ನು ಹಾನಿಗೊಳಿಸುವುದಲ್ಲದೆ ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಬಹುದು ಎಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *