ಸೌರವ್ ಗಂಗೂಲಿ ಕಾರು ಭೀಕರ ಅಪಘಾತ: ಎಕ್ಸ್‌ಪ್ರೆಸ್‌ವೇಯಲ್ಲಿ ಲಾರಿ, ಬೆಂಗಾವಲು ಪಡೆ ವಾನಹಗಳು ಡಿಕ್ಕಿ

ಕೋಲ್ಕತ್ತಾ, ಫೆಬ್ರವರಿ 21: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕಾರು ಗುರುವಾರ ರಾತ್ರಿ ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯ ದಂತನ್‌ಪುರ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಬುರ್ದ್ವಾನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಪ್ರಯಾಣಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೌರವ್ ಗಂಗೂಲಿ ಅವರ ಕಾರು ದುರ್ಗಾಪುರ ಎಕ್ಸ್‌ಪ್ರೆಸ್‌ವೇ ಮೂಲಕ ಹಾದುಹೋಗುವಾಗ ಸಿಂಗೂರ್ ಬಳಿ, ಇದ್ದಕ್ಕಿದ್ದಂತೆ ವೇಗವಾಗಿ ಬಂದ ಲಾರಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

ಬೆಂಗಾವಲು ಪಡೆಯ ವಾಹನಗಳೆಲ್ಲ ಗಂಗೂಲಿ ಕಾರಿಗೆ ಡಿಕ್ಕಿ

ಲಾರಿ ಡಿಕ್ಕಿಯಾಗುತ್ತಿದ್ದಂತೆಯೇ ಸೌರವ್ ಗಂಗೂಲಿ ಅವರ ಕಾರಿನ ಚಾಲಕ ಕಾರಿನ ನಿಯಂತ್ರಣ ಪಡೆಯಲು ತಕ್ಷಣ ಬ್ರೇಕ್ ಹಾಕಿದರು. ಪರಿಣಾಮವಾಗಿ ಬೆಂಗಾವಲು ಪಡೆಯ ಎಲ್ಲಾ ವಾಹನಗಳು ಒಂದರ ನಂತರ ಒಂದರಂತೆ ಸೌರವ್ ಗಂಗೂಲಿ ಅವರ ಕಾರಿಗೆ ಡಿಕ್ಕಿ ಹೊಡೆದವು. ಆದರೆ, ಸೌರವ್ ಈ ಭೀಕರ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಬೆಂಗಾವಲು ಪಡೆಯಲ್ಲಿದ್ದ ವಾಹನಗಳಿಗೆ ಹಾನಿಯಾಗಿದೆ. ಸ್ವಲ್ಪ ಹೊತ್ತು ರಸ್ತೆಯಲ್ಲಿ ಕಾದ ನಂತರ ಗಂಗೂಲಿ ಬೇರೆ ವಾಹನದಲ್ಲಿ ಸಮಾರಂಭಕ್ಕೆ ತೆರಳಿದ್ದಾರೆ.

ಕೂದಲೆಳೆ ಅಂತರದಲ್ಲಿ ಪಾರಾದ ಸೌರವ್ ಗಂಗೂಲಿ

ಅದೃಷ್ಟವಶಾತ್ ಗಂಗೂಲಿ ಅವರಿಗಾಗಲಿ, ಅವರ ಬೆಂಗಾವಲು ಪಡೆಯಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ. ಆದಾಗ್ಯೂ, ಬೆಂಗಾವಲು ಪಡೆಯಲ್ಲಿದ್ದ ಎರಡು ವಾಹನಗಳು ಜಖಂಗೊಂಡವು. ಅಪಘಾತದ ನಂತರ, ಸೌರವ್ ಗಂಗೂಲಿ ಸುಮಾರು 10 ನಿಮಿಷಗಳ ಕಾಲ ಸ್ಥಳದಲ್ಲೇ ಇದ್ದರು. ನಂತರ ಅವರು ಬರ್ಧಮಾನ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಈ ಅಪಘಾತದಲ್ಲಿ ಸೌರವ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರಿಂದ, ದೊಡ್ಡ ಅನಾಹುತವೊಂದು ತಪ್ಪಿದೆ.

ದಾರಿಯಲ್ಲಿ ಅಪಘಾತದಿಂದಾಗಿ ಆತಂಕಕ್ಕೊಳಗಾಗಿದ್ದರೂ, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಂಗೂಲಿ ಮಾತನಾಡಿದರು. ಬಂಗಾಳ ತಂಡದಲ್ಲಿ ಈಗ ಅನೇಕ ಕ್ರಿಕೆಟಿಗರು ಹೊರಹೊಮ್ಮುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕ್ರಿಕೆಟಿಗರು ಹೊರಹೊಮ್ಮಲಿ ಎಂದು ಸೌರವ್ ಆಶಿಸಿದ್ದಾರೆ. ಬುರ್ದ್ವಾನ್‌ನಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ, ಸೌರವ್ ಕೋಲ್ಕತ್ತಾಗೆ ಮರಳಿದ್ದಾರೆ.

Source : https://tv9kannada.com/sports/cricket-news/sourav-ganguly-car-accident-lorry-convoy-vehicles-collide-on-durgapur-expressway-gsp-981189.html

Leave a Reply

Your email address will not be published. Required fields are marked *