ದಾವಣಗೆರೆ, ಮಾರ್ಚ್, 10: ಯೋಗಾಸನ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಕಷ್ಟು ಏಕಾಗ್ರತೆ, ಪರಿಶ್ರಮ, ಕಠಿಣ ಅಭ್ಯಾಸ ಬೇಕೇ ಬೇಕು. ಇದಕ್ಕಾಗಿ ತಪಸ್ಸು ಮಾಡಬೇಕು. ಅದರಲ್ಲಿಯೂ ಬಳ್ಳಿಯಂತೆ ದೇಹ ಬಳುಕಿಸುವ ಈಕೆ ಸಾಧನೆ ಮೆಚ್ಚುವಂಥದ್ದು.

ಜಿಲ್ಲೆ, ರಾಜ್ಯ ಮಟ್ಟದಲ್ಲಿಯೇ ಸಾಧನೆ ಮಾಡುವುದಂತೂ ಸುಲಭವಲ್ಲ. ಅಂಥಹದರಲ್ಲಿ ಈಕೆ ರಾಷ್ಟ್ರಮಟ್ಟದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಜೊತೆಗೆ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಸಹ ಹೌದು.ಯೋಗದಲ್ಲಿ ಇಂತಹ ಸಾಧನೆ ಮಾಡಿರುವ ಈಕೆಯ ಹೆಸರು ಕೆ.ವೈ.ಸೃಷ್ಟಿ. ಹರಿಹರದ ಯೋಗರಾಜ್ ಮತ್ತು ಶಾಂಬವಿ ದಂಪತಿ ಪುತ್ರಿ. ಹರಿಹರದಲ್ಲಿನ ಶ್ರೀ ನೀಲಕಂಠೇಶ್ವರ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಈಕೆಗೆ ಇನ್ನು 13 ವರ್ಷ. ಮಾಡಿರುವ ಸಾಧನೆ ಮಾತ್ರ ಅಪಾರ. ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಆಗಿರುವ ಕೀರ್ತಿ ಈಕೆಯದ್ದು. ಮನಸ್ಸು ಮಾಡಿದರೆ ಸಾಧ್ಯ ಎಂಬಂತೆ ಈಕೆಯು ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದಾಳೆ. ಸೃಷ್ಟಿ ತಾಯಿ ಸಹ ಯೋಗ ಶಿಕ್ಷಕಿ. ತಾಯಿ ಶಾಂಭವಿ ಇಷ್ಟೊಂದು ಸಾಧನೆ ಮಾಡದಿದ್ದರೂ ತಾಯಿಯ ಕನಸು ನನಸು ಮಾಡುತ್ತಿರುವ ಸೃಷ್ಟಿ ಯೋಗಾಸನದಲ್ಲಿ ಸೃಷ್ಟಿಸಿರುವ ದಾಖಲೆ ಮೆಚ್ಚುವಂಥದ್ದು.ನೇಪಾಳ, ಜಮ್ಮುವಿನಲ್ಲಿ ನಡೆದ ಯೋಗಾಸನ ಪಂದ್ಯಾವಳಿಗಳಲ್ಲಿ ಕಂಚು ಮತ್ತು ಚಿನ್ನದ ಪದಕ ಗೆದ್ದಿದ್ದಾಳೆ. ಕಳೆದ 3 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಈಕೆ ತನ್ನ ದೇಹವನ್ನು ಹೇಗೆ ಬೇಕಾದರೂ ತಿರುಗಿಸುವ ಸಾಮರ್ಥ್ಯ ಹೊಂದಿದ್ದಾಳೆ.
ಈ ಯೋಗ ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಕಷ್ಟು ಪರಿಶ್ರಮ, ಶ್ರಮ ಬೇಕು. ಇದಕ್ಕೆ ಕಠಿಣ ಅಭ್ಯಾಸ ಇರಲೇಬೇಕು.ಆನ್‌ಲೈನ್ ವಿಶ್ವ ಯೋಗ ಕಪ್ “ದಿ ಬೆಸ್ಟ್ ಪರ್ಫಾರ್ಮೆನ್ಸ್ ಯೋಗ ಪ್ರಶಸ್ತಿ”ಯೂ ಈಕೆಗೆ ಲಭಿಸಿದೆ. ಇಲ್ಲಿಯವರೆಗೆ 150 ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸೃಷ್ಟಿ ಒಂದಲ್ಲಾ ಒಂದು ಪದಕವನ್ನು ಗೆದ್ದುಕೊಂಡೇ ಬರುತ್ತಿದ್ದಾಳೆ. ಈ ಪೈಕಿ ಅತಿ ಹೆಚ್ಚು ಗೋಲ್ಡ್ ಮೆಡಲ್ ಗೆದ್ದಿರುವುದು ಸಾಧನೆಗೆ ಹಿಡಿದ ಕೈಗನ್ನಡಿ.
ಒಟ್ಟು 52 ಚಿನ್ನದ ಪದಕಗಳನ್ನು ಗೆದ್ದಿರುವ ಈಕೆಗೆ ಗುರು ಮತ್ತು ತರಬೇತುದಾರರು ತಾಯಿಯೇ ಆಗಿದ್ದಾರೆ.ಅಂತಾರಾಷ್ಟ್ರೀಯ, ರಾಷ್ಟ್ರೀಯ, ಅಂತರರಾಜ್ಯ, ರಾಜ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಅವರು ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಎಸ್‌ಜಿಎಫ್‌ಐ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ವರ್ಷ ಜೈಪುರದಲ್ಲಿ ನಡೆದ ಭಾರತದ ಸಾಂಪ್ರದಾಯಿಕ ಯೋಗಾಸನ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ 4ನೇ ಸ್ಥಾನವನ್ನು ಗೆದ್ದಿದ್ದಾಳೆ. ಇದುವರೆಗೆ 150 ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ-52, ಬೆಳ್ಳಿ-4, ಕಂಚು-4, ಪ್ರಶಸ್ತಿಗಳು 20 ಬಂದಿದ್ದು, ಆರು ದಾಖಲೆಗಳನ್ನು ಮಾಡಿದ ಶ್ರೇಯಸ್ಸು ಈಕೆಯದ್ದು.
ಬ್ಯೂಟಿಫುಲ್ ಸ್ಮೈಲ್ ಅವಾರ್ಡ್: ಇನ್ನು 2020ರಲ್ಲಿ ನಡೆದ ಸ್ಪರ್ಧೆಯಲ್ಲಿ ಬ್ಯೂಟಿಫುಲ್ ಸ್ಮೈಲ್ ಅವಾರ್ಡ್ ಸಹ ಸೃಷ್ಟಿಗೆ ಸಿಕ್ಕಿದೆ. ಕೇವಲ ಯೋಗಾಸನ ಸ್ಪರ್ಧೆಯಲ್ಲಿ ಮಾತ್ರ ಸಾಧನೆ ಮಾಡದೇ, ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಹೆಸರು ಸಂಪಾದನೆ ಮಾಡಿರವ ಈಕೆಯದ್ದು ಬಹುಮುಖ ಪ್ರತಿಭೆಯಾಗಿದೆ.
ಯೋಗದತ್ತ ಆಸಕ್ತಿ ತೋರಿದ್ದು ಯಾಕೆ?: ನನ್ನ ತಾಯಿ ಯೋಗ ಶಿಕ್ಷಕಿ. ಬೇರೆ ಮಕ್ಕಳಿಗೂ ಹೇಳಿಕೊಡುತ್ತಿದ್ದನ್ನು ನೋಡುತ್ತಿದ್ದೆ. ನನಗೂ ಯೋಗ ಮಾಡಬೇಕೆಂಬ ಆಸೆ ಬಂತು. ತಾಯಿಯ ಬಳಿ ಕೇಳಿಕೊಂಡೆ. ಕೊರೊನಾ ಸೋಂಕು ಕಾಣಿಸಿಕೊಂಡಾಗ ಎರಡನೇ ಲಾಕ್‌ಡೌನ್ ವೇಳೆ ನನಗೂ ಕೊರೊನಾ ಸೋಂಕು ತಗುಲಿತ್ತು ಎಂದು ಸಾಧಕಿ ಸೃಷ್ಟಿ ಹೇಳಿದ್ದಾರೆ.ಆಗ ಯೋಗ ಶುರು ಮಾಡಿದೆ. ಆಮೇಲೆ ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದೆ. ಸ್ಪರ್ಧೆಗಳಲ್ಲಿ ಪದಕ ಬರುತ್ತಾ ಹೋಯಿತು. ಮತ್ತಷ್ಟು ಕಠಿಣ ಅಭ್ಯಾಸ ಮಾಡಿದೆ.
ನನ್ನ ತಾಯಿ-ತಂದೆ ಕೊಟ್ಟ ಪ್ರೋತ್ಸಾಹ, ಶಾಲೆಯ ಶಿಕ್ಷಕರು, ಸ್ನೇಹಿತರು ನೀಡಿದ ಪ್ರೋತ್ಸಾಹ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಕೆ.ವೈ.ಸೃಷ್ಟಿ ಹೇಳಿದರು.ಬಡತನದಲ್ಲಿ ಅರಳಿದ ಪ್ರತಿಭೆ: ತಂದೆ ಯೋಗರಾಜ್ ಅವರು, ಹೋಮ್ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಈ ದುಡಿಮೆಯಲ್ಲಿ ಜೀವನ ಸಾಗಿಸಬೇಕು. ತಂದೆ-ತಾಯಿಯೂ ಯಾವುದಕ್ಕೂ ಕಡಿಮೆ ಮಾಡಿಲ್ಲ. ಎಲ್ಲೇ ಸ್ಪರ್ಧೆ ಇದ್ದರೂ ಸಾಲ ಮಾಡಿಯಾದರೂ ನನ್ನನ್ನು ಸ್ಪರ್ಧೆಗಳಿಗೆ ಕಳುಹಿಸಿಕೊಡುತ್ತಿದ್ದರು.
ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಶಿಕ್ಷಕರು ಸಹ ಧೈರ್ಯ ತುಂಬಿದರು. ಇನ್ನು ಹೆಚ್ಚಿನ ಸಾಧನೆ ಮಾಡಬೇಕೆಂಬ ಆಸೆಯಿದೆ. ಇದಕ್ಕಾಗಿ ಮತ್ತಷ್ಟು ಶ್ರಮ ವಹಿಸುವೆ ಎನ್ನುವ ಸೃಷ್ಟಿ, ಡ್ಯಾನ್ಸ್, ಯೋಗ, ಕರಾಟೆ ಹಾಗೂ ಡ್ರಾಯಿಂಗ್‌ನಲ್ಲಿ ನಿಪುಣೆ.ಓದಿನತ್ತಲೂ ಗಮನ ನೀಡಿರುವ ಸೃಷ್ಟಿ ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಯೋಗಾಸನ ಮಾಡಲು ಶುರು ಮಾಡಿದ ಮೇಲೆ ಆರೋಗ್ಯ ಉತ್ತಮವಾಗಿದೆ. ಕಾಯಿಲೆಯೂ ಮಾಯವಾಗಿದೆ. ಯೋಗಾಸನ ಮಾಡುವುದರಿಂದ ಮನಸ್ಸಿಗೆ ಪ್ರಶಾಂತತೆ, ಸದೃಢ ಆರೋಗ್ಯ, ಓದಲು ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. ದಿನಕ್ಕೆ 2 ಗಂಟೆಯವರೆಗೆ ಅಭ್ಯಾಸ ಮಾಡುತ್ತೇನೆ ಎನ್ನುತ್ತಾಳೆ ಸೃಷ್ಟಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1