ಗಂಗಾವತಿ (ಕೊಪ್ಪಳ ಜಿಲ್ಲೆ): ತಮ್ಮ ತಾಯಿ ಮೃತಪಟ್ಟ ದುಃಖದ ನಡುವೆಯೂ ತಾಲ್ಲೂಕಿನ ಕೆಸರಹಟ್ಟಿ ಗ್ರಾಮದ ಅಡಿವೆಯ್ಯಸ್ವಾಮಿ ಹಿರೇಮಠ ಎಂಬ ವಿದ್ಯಾರ್ಥಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆದಿದ್ದಾನೆ.

ಅಡಿವೆಯ್ಯಸ್ವಾಮಿ ಕೆಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ.
ಕೆಲ ದಿನಗಳ ಹಿಂದೆ ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ ಅವರು ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ರಕ್ತ ಹೆಪ್ಪುಗಟ್ಟಿದ್ದರಿಂದ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ತಾಯಿ ನಿಧನದ ಸುದ್ದಿಯ ನೋವಿನ ನಡುವೆಯೂ ಶಿಕ್ಷಕರು, ವಿದ್ಯಾರ್ಥಿ ಮತ್ತು ಅವರ ಕುಟುಂಬ ಸದಸ್ಯರ ಮನವೊಲಿಸಿ ಪರೀಕ್ಷೆ ಬರೆಯಿಸಿದ್ದಾರೆ. ನಂತರ ಮಗ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Source: Prajavani
Views: 0