ಸ್ಟಾರ್ಕ್ ಮಿಂಚಿನ ದಾಳಿ; ನಿತೀಶ್ ಹೋರಾಟ, 180 ರನ್​ಗಳಿಗೆ ಭಾರತ ಆಲೌಟ್.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಅಡಿಲೇಡ್ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 180 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಕಾಂಗರೂ ವೇಗಿಗಳ ದಾಳಿಗೆ ನಲುಗಿದ ಟೀಂ ಇಂಡಿಯಾ ಮೊದಲ ದಿನದಾಟದ ಎರಡನೇ ಸೆಷನ್​ನಲ್ಲೇ ತನ್ನ ಮೊದಲ ಇನ್ನಿಂಗ್ಸ್​ಗೆ ಅಂತ್ಯ ಹಾಡಿತು. ಟೀಂ ಇಂಡಿಯಾ ಪರ ಕೊನೆಯಲ್ಲಿ ಏಕಾಂಗಿ ಹೋರಾಟ ನೀಡಿದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 42 ರನ್​ಗಳ ಇನ್ನಿಂಗ್ಸ್ ಆಡಿದರು. ಟಾಪ್ ಆರ್ಡರ್​ನಲ್ಲಿ ಕೆಎಲ್ ರಾಹುಲ್ ಹಾಗೂ ಶುಭ್​ಮನ್ ಗಿಲ್ ಕ್ರಮವಾಗಿ 37 ಮತ್ತು 31 ರನ್​ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ.

ಭಾರತಕ್ಕೆ ಆರಂಭಿಕ ಆಘಾತ

ಅಡಿಲೇಡ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ನಾಯಕನ ಈ ನಿರ್ಧಾರ ತಪ್ಪು ಎಂಬುದು ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಸಾಭೀತಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಅಡಿಲೇಡ್‌ನಲ್ಲಿ ಮೊದಲ ಎಸೆತದಲ್ಲೇ ಔಟಾದರು. ಆದರೆ ಆ ಬಳಿಕ ಕೆಎಲ್ ರಾಹುಲ್ ಮತ್ತು ಶುಭ್​ಮನ್ ಗಿಲ್ ಜೊತೆಗೂಡಿ ಈ ಇಬ್ಬರೂ ಎರಡನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವನ್ನು ಮಾಡಿದರು. ಆದರೆ ಕೆಎಲ್ ರಾಹುಲ್ ಔಟಾದ ಬಳಿಕ ಭಾರತದ ಇನ್ನಿಂಗ್ಸ್ ತತ್ತರಿಸಿತು.

https://twitter.com/ICC/status/1864955015338570180

ಮಧ್ಯಮ ಕ್ರಮಾಂಕವೂ ಫೇಲ್

ವಿರಾಟ್ ಕೊಹ್ಲಿ ಬಂದ ಕೂಡಲೇ ಅತ್ಯಂತ ಕೆಟ್ಟ ಶಾಟ್ ಆಡುವ ಮೂಲಕ ವಿಕೆಟ್ ಕಳೆದುಕೊಂಡರು. ಅವರು ಮಿಚೆಲ್ ಸ್ಟಾರ್ಕ್‌ ಎಸೆತದಲ್ಲಿ ಸ್ಲಿಪ್ಸ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್​ಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಶುಭ್​ಮನ್ ಗಿಲ್ 31 ರನ್​ಗಳ ವೈಯಕ್ತಿಕ ಸ್ಕೋರ್​ನಲ್ಲಿ ಬೋಲ್ಯಾಂಡ್​ಗೆ ವಿಕೆಟ್ ನೀಡಿದರು. ಇದಾದ ಬಳಿಕ ನಾಯಕ ರೋಹಿತ್ ಶರ್ಮಾ ಕೂಡ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡವು ವಿಕೆಟ್‌ಕೀಪರ್ ರಿಷಬ್ ಪಂತ್ ಅವರಿಂದ ರನ್​ಗಳ ಭರವಸೆ ಹೊಂದಿತ್ತು. ಆದರೆ ಪಂತ್ ಕೂಡ ಕಮಿನ್ಸ್ ಅವರ ಶಾರ್ಟ್ ಬಾಲ್‌ನಲ್ಲಿ 21 ರನ್‌ಗಳಿಸಿ ಕ್ಯಾಚಿತ್ತು ಔಟಾದರು. ಇದರಿಂದ ಭಾರತ ತಂಡದ 6 ವಿಕೆಟ್‌ಗಳು 109 ರನ್‌ಗಳಿಗೆ ಪತನಗೊಂಡವು.

ನಿತೀಶ್ ಸ್ಫೋಟಕ ಬ್ಯಾಟಿಂಗ್

ಒಂದೆಡೆ ಭಾರತದ ಇತರೆ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ಮತ್ತೊಂದೆಡೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಆಲ್ ರೌಂಡರ್ ನಿತೀಶ್ ರೆಡ್ಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ನಿತೀಶ್ ರೆಡ್ಡಿ ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 42 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಿತೀಶ್ ಅವರ ಈ 42 ರನ್​ಗಳ ಕಾಣಿಕೆ ಇಲ್ಲದಿದ್ದರೆ ಭಾರತ ಇನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು. ಆಸೀಸ್ ಪರ ಮಾರಕ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ನೀಡಿ 6 ವಿಕೆಟ್ ಪಡೆದರು. ಇದು ಭಾರತದ ವಿರುದ್ಧ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

Source : https://tv9kannada.com/sports/cricket-news/ind-vs-aus-2nd-test-india-bowled-out-for-180-runs-psr-945785.html

Leave a Reply

Your email address will not be published. Required fields are marked *