Starship: ಬೆಂಕಿಯ ಉಂಡೆಯಾಯ್ತು ಎಲಾನ್ ಮಸ್ಕ್ ಸ್ಟಾರ್‌ಶಿಪ್; ಬಾಹ್ಯಾಕಾಶದಲ್ಲಿ ಸ್ಫೋಟಗೊಂಡು ಬಹಾಮಾಸ್ ಬಳಿ ಪತನ!

ಅಮೆರಿಕ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಅವರ ಬಾಹ್ಯಾಕಾಶ ಕಂಪನಿ ಸ್ಪೇಸ್‌ಎಕ್ಸ್‌ಗೆ (SpaceX) ಇತ್ತೀಚೆಗೆ ದೊಡ್ಡ ಹಿನ್ನಡೆಯಾಯಿತು. ಕಂಪನಿಯ ಬೃಹತ್ ಸ್ಟಾರ್‌ಶಿಪ್ (Starship) ಮೆಗಾ-ರಾಕೆಟ್ ವ್ಯವಸ್ಥೆಯು ತನ್ನ ಎಂಟನೇ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡು (Explodes) ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಈ ಘಟನೆಯು ಮಸ್ಕ್ ಅವರ ಮಹತ್ವಾಕಾಂಕ್ಷೆಯ ಮಂಗಳ ಗ್ರಹದ ಅನ್ವೇಷಣಾ ಯೋಜನೆಗೆ ಹಿನ್ನಡೆ ಎಂದು ಪರಿಗಣಿಸಲಾಗಿದೆ.

ಗುರುವಾರ ಟೆಕ್ಸಾಸ್‌ನಿಂದ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಸ್ಫೋಟಗೊಂಡಿತು. ಈ ವರ್ಷ ಎಲೋನ್ ಮಸ್ಕ್ ಅವರ ಮಂಗಳ ಗ್ರಹ ರಾಕೆಟ್ ಕಾರ್ಯಕ್ರಮಕ್ಕಾಗಿ ಅಣಕು ಉಪಗ್ರಹಗಳನ್ನು ನಿಯೋಜಿಸುವ ಪ್ರಯತ್ನವನ್ನು ಈ ಉಡಾವಣೆ ಹೊಂದಿತ್ತು. ಆದರೆ ಸ್ಟಾರ್‌ಶಿಪ್ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡು ದಕ್ಷಿಣ ಫ್ಲೋರಿಡಾ ಮತ್ತು ಬಹಾಮಾಸ್ ಬಳಿ ಉರಿಯುತ್ತಿರುವ ಅವಶೇಷಗಳು ಬಿದ್ದವು. ಸಾಮಾಜಿಕ ಮಾಧ್ಯಮದಲ್ಲಿನ ಹಲವಾರು ವೀಡಿಯೊಗಳು ಈ ಭಯಾನಕ ದೃಶ್ಯವನ್ನು ಸೆರೆಹಿಡಿದಿವೆ.

ತಿಂಗಳೊಳಗೆ ಎರಡು ಬಾರಿ ಸ್ಟಾರ್‌ಶಿಪ್ ಸ್ಫೋಟ

ಸ್ಪೇಸ್‌ಎಕ್ಸ್ ಕಾರ್ಯಾಚರಣೆಯ ನೇರಪ್ರಸಾರದ ಪ್ರಕಾರ, ಸ್ಟಾರ್‌ಶಿಪ್‌ನ ಎಂಜಿನ್‌ಗಳು ಸ್ಥಗಿತಗೊಂಡು ಅನಿಯಂತ್ರಿತವಾಗಿ ತಿರುಗಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಸ್ಫೋಟ ಸಂಭವಿಸಿದೆ. ಕಂಪನಿಯ ಏಳನೇ ಸ್ಟಾರ್‌ಶಿಪ್ ಹಾರಾಟವು ಕೂಡ ಸ್ಫೋಟಕ ವೈಫಲ್ಯದಲ್ಲಿ ಕೊನೆಗೊಂಡಿತ್ತು. ಒಂದು ತಿಂಗಳೊಳಗೆ ಎರಡು ಬಾರಿ ಸ್ಟಾರ್‌ಶಿಪ್ ಸ್ಫೋಟಗೊಂಡಿರುವುದು ಮಸ್ಕ್ ಅವರ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಮುಸ್ಕ್ ತಂಡಕ್ಕೆ ಸ್ವಲ್ಪ ಸಮಾಧಾನ

ಆದಾಗ್ಯೂ, ಈ ವೈಫಲ್ಯ ಎಲಾನ್ ಮಸ್ಕ್ ಅವರನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿಲ್ಲ ಎಂದು ವರದಿಗಳು ಹೇಳುತ್ತವೆ. ಸಿಎನ್‌ಎನ್ ವರದಿಯ ಪ್ರಕಾರ, ರಾಕೆಟ್ ಉಡಾವಣಾ ಗೋಪುರಕ್ಕೆ ಹಿಂತಿರುಗುತ್ತಿದ್ದಂತೆ ಬೂಸ್ಟರ್ ಅನ್ನು ಹಿಡಿಯುವಲ್ಲಿ ಸ್ಪೇಸ್‌ಎಕ್ಸ್ ಯಶಸ್ವಿಯಾಗಿದೆ. ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಕಳೆದುಹೋದರೂ, ಬೂಸ್ಟರ್ ಅನ್ನು ಉಪಯೋಗಿಸಬಹುದಾದ ಸ್ಥಿತಿಯಲ್ಲಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮುಸ್ಕ್ ತಂಡಕ್ಕೆ ಸ್ವಲ್ಪ ಸಮಾಧಾನ ತಂದಿದೆ.

https://twitter.com/NorcrossUSA/status/1897796234502349117

ಕೆಲ ಕಾಲ ವಿಮಾನಗಳ ಹಾರಾಟ ರದ್ದು

ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್‌ನ ಅವಶೇಷಗಳು ಬೀಳುವ ಭೀತಿಯಿಂದಾಗಿ ಅಮೆರಿಕದ ವಾಯುಯಾನ ಅಧಿಕಾರಿಗಳು ಫ್ಲೋರಿಡಾದ ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ರದ್ದುಗೊಳಿಸಿದ್ದರು. ಸ್ಪೇಸ್‌ಎಕ್ಸ್ ಘಟನೆಯಿಂದ ಯಾವುದೇ ಗಾಯಗಳು ಅಥವಾ ಹಾನಿಗಳು ವರದಿಯಾಗಿಲ್ಲ.

ಈ ವೈಫಲ್ಯಗಳ ಹೊರತಾಗಿಯೂ, ಎಲಾನ್ ಮಸ್ಕ್ ಅವರು ತಮ್ಮ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳಿಂದ ಹಿಂದೆ ಸರಿಯುವ ಸಾಧ್ಯತೆ ಕಡಿಮೆ. ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಮೆಗಾ-ರಾಕೆಟ್ ವ್ಯವಸ್ಥೆಯು ಮಾನವರನ್ನು ಮತ್ತು ಸರಕುಗಳನ್ನು ಚಂದ್ರ, ಮಂಗಳ ಮತ್ತು ಅದಕ್ಕೂ ಮೀರಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಯೋಜನೆ ಯಶಸ್ವಿಯಾದರೆ, ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಹೊಸ ಯುಗವೇ ಆರಂಭವಾಗಲಿದೆ.

Source : https://kannada.news18.com/news/national-international/spacex-launched-starship-explodes-in-space-and-crashes-over-bahamas-brm-ws-ad-2016356.html

Leave a Reply

Your email address will not be published. Required fields are marked *