ರಾಜ್ಯಾದ್ಯಂತ ವಕ್ಫ್ ವಿವಾದ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ.
![](https://samagrasuddi.co.in/wp-content/uploads/2024/11/image-148.png)
ವಕ್ಫ್ ಬೋರ್ಡ್ (Waqf Board) ಆಸ್ತಿ ವಿವಾದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಭಾರೀ ಸದ್ದು ಮಾಡುತ್ತಿದ. ಇದೀಗ ಈ ವಿವಾದ ರಾಜಕೀಯ (Political) ತಿರುವು ಪಡೆದುಕೊಂಡಿದೆ. ವಕ್ಫ್ ವಿವಾದ ಸಂಬಂಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ (BJP) ನಾಯಕರು ಕಾಂಗ್ರೆಸ್ (Congress) ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಲ ಗ್ರಾಮಗಳ ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಇದ್ದು, ಇದನ್ನ ಖಂಡಿಸಿ ಸರ್ಕಾರದ ವಿರುದ್ಧ ಇದೀಗ ರಾಜ್ಯಾದ್ಯಂತ ಪ್ರೊಟೆಸ್ಟ್ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ನಾಡಿನ ರೈತರಿಗೆ ಮೋಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ.
ವಕ್ಫ್ ವಿವಾದ ಸಂಬಂಧ ಬಿಜೆಪಿ ಹೋರಾಟ
‘ನಮ್ಮ ಭೂಮಿ, ನಮ್ಮ ಹಕ್ಕು’ ಘೋಷಣೆಯಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸುವಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕರೆ ನೀಡಿದ್ದರು. ಈ ಹಿನ್ನೆಲೆ ಮೈಸೂರು, ವಿಜಯಪುರ, ಚಿಕ್ಕೋಡಿ, ಮಂಗಳೂರು, ದಾವಣಗೆರೆ, ರಾಮನಗರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗ, ಬೆಳಗಾವಿ, ಕೋಲಾರ, ಗದಗ, ಚಿತ್ರದುರ್ಗ, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಧಾರವಾಡ ಜಿಲ್ಲೆಗಳಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಸಚಿವ ಜಮೀರ್ ರಾಜೀನಾಮೆಗೆ ಬಿಗಿಪಟ್ಟು
ಇನ್ನು ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ವೇಳೆ ಸಚಿವ ಜಮೀರ್ ರಾಜೀನಾಮೆಗೆ ಬಿಗಿಪಟ್ಟು ಹಿಡಿಯಲಾಗಿದೆ. ವಕ್ಫ್‌ನಿಂದ ತೊಂದರೆಗೀಡಾದ ರೈತರಿಂದ ದೂರು ಹಾಗೂ ಮಾಹಿತಿಯನ್ನು ಸ್ವೀಕರಿಸಲಾಗುತ್ತಿದ್ದು, ಅಹವಾಲು ಸ್ವೀಕಾರಕ್ಕಾಗಿ ರೈತರು, ವಕೀಲರು ಮತ್ತು ಪ್ರಮುಖ ಪ್ರತಿನಿಧಿಗಳನ್ನೊಳಗೊಂಡ ಐವರು ಸದಸ್ಯರ ತಂಡವೊಂದನ್ನು ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ರಚಿಸಲಾಗಿದೆ.
ರಾಜ್ಯದ ವಿವಿಧೆಡೆ ಹೋರಾಟ
ಮೈಸೂರಲ್ಲಿ ಸಂಸದ ಯದುವೀರ್ ಒಡೆಯರ್ ನೇತೃತ್ವದಲ್ಲಿ ಪ್ರೊಟೆಸ್ಟ್ ನಡೆಯುತ್ತಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ. ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪಸಿಂಹ ಸೇರಿ ಹಲವು ಮುಖಂಡರು ಭಾಗಿಯಾಗಿದ್ದಾರೆ. ಚಿಕ್ಕೋಡಿಯ ಎ.ಸಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಸಂಪಾದನಾ ಚರಮೂರ್ತಿ ಮಠದ ಶ್ರೀಗಳ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ದ ಹೋರಾಟ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ನಿಪ್ಪಾಣಿ ಶಾಸಕಿ ಮಾಜಿ ಸಚಿವೆ ಶಶಿಕಲಾ ಜೋಲ್ಲೆ ಹಾಗೂ ಸ್ಥಳೀಯ ನಾಯಕರು ಭಾಗಿಯಾಗಲಿದ್ದು, ಪಟ್ಟಣದ ಎ.ಸಿ ಕಛೇರಿ ಎದುರು ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿಎಂ ಹಾಗೂ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತ
ಮಂಗಳೂರಿನಲ್ಲಿ ವಕ್ಫ್ ಅಕ್ರಮದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನಗರದ ಟೌನ್ ಹಾಲ್ ಮುಂಬಾಗ ಗಾಂಧಿ ಪ್ರತಿಮೆ ಎದುರು ಹೋರಾಟ ನಡೆಸಲಾಗುತ್ತಿದೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಸಂಜೆ ವರೆಗೆ ಬಿಜೆಪಿ ಮುಖಂಡರಿಂದ ಪ್ರತಿಭಟನಾ ಧರಣಿ, ಸತ್ಯಾಗ್ರಹ ನಡೆಯಲಿದೆ.
ಈ ವೇಳೆ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು, ರಾಜ್ಯದಲ್ಲಿರುವುದು ಟಿಪ್ಪು ಮಾದರಿಯ ಆಡಳಿತ ಕಾಂಗ್ರೆಸ್ ನಡಸುತ್ತಿದೆ. ಸಿದ್ದರಾಮಯ್ಯ ನಡೆಸಿತ್ತಿರುವುದು ಮೊಗಲ್ ಹಾಗು ಟಿಪ್ಪು ಮಾದರಿಯ ಆಡಳಿತ. ಸಿದ್ದರಾಮಯ್ಯ ಮತ್ತು ಜಮೀರ್ ವಕ್ಪ್ ಮುಖಾಂತರ ಜನರ ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ. ಭೂ ಕಬಳಿಕೆಗೆ ಸಿದ್ದರಾಮಯ್ಯ ಮತ್ತು ಜಮೀರ್ ಅವರ ಜೊಯಿಂಟ್ ವೆಂಚರ್ ನಡೆಯುತ್ತಿದೆ. ರಾಜ್ಯದಲ್ಲಿ ವಕ್ಫ ಮೂಲಕ ಲ್ಯಾಂಡ್ ಜಿಹಾದ್ ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿಯಿಂದ ಉಗ್ರ ಹೋರಾಟ
ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಯುತ್ತಿದೆ. ಸರ್ದಾರ್ ಸಂತ ಸೇವಾಲಾಲ್ ಸ್ವಾಮೀಜಿ, ಮಾಜಿ ಸಚಿವರಾದ,ಎಂ ಪಿ ರೇಣುಕಾಚಾರ್ಯ, ರವೀಂದ್ರನಾಥ, ಬಿಜೆಪಿ ಜಿಲ್ಲಾಧ್ಯಕ್ಷ ಎನ್ ರಾಜಶೇಖರ್, ಮಾಜಿ ಶಾಸಕ ಬಸವರಾಜ್ ನಾಯ್ಕ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಜಮೀರ್ ಅಹಮದ್, ಡಿಕೆಶಿ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಗುತ್ತಿದೆ.
ರೈತರ ಜಮೀನಿಗೆ ವಕ್ಫ್ ಗೊಂದಲ ವಿಚಾರ ರಾಮನಗರದಲ್ಲಿ ಬಿಜೆಪಿ ಹೋರಾಟ ನಡೆಸುತ್ತಿದೆ. ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣಗೌಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನಗರದ ಐಜೂರು ವೃತ್ತದಲ್ಲಿ ಬೆಂ.ಮೈ.ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ – ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಓಲೈಕೆ ಮಾಡ್ತಿದೆ. ಮೊದಲು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ವಿವಾದ ಬಂತು. ಈಗ ರೈತರ ಜಮೀನಿಗೆ ವಕ್ಫ್ ಬಂದಿದೆ. ಈ ಬಗ್ಗೆ ಬಿಜೆಪಿ ಪಕ್ಷ ಉಗ್ರ ಹೋರಾಟ ಮಾಡಲಿದೆ ಎಂದು ಕಾಂಗ್ರೆಸ್ ಗೆ ಅಶ್ವಥ್ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಪ್ರವಾಸ
ಈಗಾಗಲೇ ವಕ್ಫ್ ವಿವಾದ ಸಂಬಂಧ ಬಿಜೆಪಿಯಲ್ಲಿ 3 ತಂಡಗಳನ್ನು ರಚಿಸಿಲಾಗಿದೆ. ಕೇಂದ್ರದ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಹಿರಿಯರು, ವರಿಷ್ಠರು ಸೇರಿ 3 ತಂಡಗಳು ಕಾರ್ಯ ನಿರ್ವಹಿಸುತ್ತವೆ. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ 3 ತಂಡಗಳ ನೇತೃತ್ವ ವಹಿಸುತ್ತಿದ್ದಾರೆ. ಈ ತಂಡಗಳು ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿವೆ. ರೈತರು, ಮಠಾಧೀಶರು ಸೇರಿ ತೊಂದರೆಗೆ ಒಳಗಾದವರಿಂದ ಮಾಹಿತಿ ಪಡೆಯಲಿವೆ. ಚಳಿಗಾಲದ ಅಧಿವೇಶನದಲ್ಲಿ ವಿವರ ಮಂಡಿಸಿ, ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.