ಪರೀಕ್ಷೆಯಲ್ಲಿ ನಕಲು ತಡೆದ ಶಿಕ್ಷಕರ ಮೇಲೆ ವಿದ್ಯಾರ್ಥಿ ಹಲ್ಲೆ: ಕಲಬುರಗಿಯಲ್ಲಿ ಘಟನೆ.

ಕಲಬುರಗಿ: ಪರೀಕ್ಷೆಯ ವೇಳೆ ನಕಲು ಮಾಡುತ್ತಿದ್ದುದನ್ನು ಪ್ರಶ್ನಿಸಿ ತಡೆದ ಶಿಕ್ಷಕರ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿದ ಘಟನೆ ಕಲಬುರಗಿಯ ಹೋಮಿಯೋಪಥಿ ಕಾಲೇಜೊಂದರಲ್ಲಿ ನಡೆದಿದೆ. ಈ ಘಟನೆ ಕಾಲೇಜು ವಲಯದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.

ಮಾಹಿತಿ ಪ್ರಕಾರ, ಕಾಲೇಜಿನಲ್ಲಿ ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಆಂತರಿಕ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷಾ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್ ಅವರು ವಿದ್ಯಾರ್ಥಿ ಶಹಬಾಜ್ ಮೊಬೈಲ್ ಬಳಸಿ ನಕಲು ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.

ಈ ವೇಳೆ ಶಿಕ್ಷಕರು ವಿದ್ಯಾರ್ಥಿಯನ್ನು ಪ್ರಶ್ನಿಸಿ ಉತ್ತರಪತ್ರಿಕೆಯನ್ನು ವಶಪಡಿಸಿಕೊಂಡು, ತರಗತಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಶಿಕ್ಷಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದನೆಂದು ತಿಳಿದುಬಂದಿದೆ.

ಘಟನೆ ಬಳಿಕ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಯ ವರ್ತನೆ ಕುರಿತು ಪಾಲಕರಿಗೆ ಮಾಹಿತಿ ನೀಡಿದ್ದು, ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣ ಸಂಬಂಧವಾಗಿ ಕಾಲೇಜು ಆಡಳಿತ ಮಂಡಳಿ ಅಥವಾ ಗಾಯಗೊಂಡ ಸಹಾಯಕ ಪ್ರಾಧ್ಯಾಪಕರಿಂದ ಇನ್ನೂ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಈ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಹಾಗೂ ಭದ್ರತೆ ಕುರಿತು ಮತ್ತೆ ಪ್ರಶ್ನೆಗಳನ್ನು ಎತ್ತಿದೆ.

Leave a Reply

Your email address will not be published. Required fields are marked *