ಬೋರ್ಡ್ ಎಕ್ಸಾಂ ಗಲಿಬಿಲಿ; ಗೊಂದಲದಲ್ಲಿ ವಿದ್ಯಾರ್ಥಿಗಳು.

ಬೆಂಗಳೂರು: 5,8,9,11ನೇ ತರಗತಿ ಮಕ್ಕಳಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸರ್ಕಾರದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಆದೇಶದ ಬೆನ್ನಲ್ಲೇ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಈ ವರ್ಷ ಬೋರ್ಡ್ ಎಕ್ಸಾಮೋ?

ಶಾಲಾ ಪರೀಕ್ಷೆಯೋ ಎಂಬ ಗೊಂದಲ ಹುಟ್ಟುಹಾಕಿದ್ದರೆ, ಶಾಲಾ ಪರೀಕ್ಷೆಗಳೇ ನಡೆಯುವುದಾದಲ್ಲಿ ಪರೀಕ್ಷೆಗೆ ಕೇವಲ 4 ದಿನಗಳಿರುವಾಗ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸಂಘಟನಾತ್ಮಕ ಒತ್ತಡಕ್ಕೆ ಶಾಲೆಗಳನ್ನು ಸಿಲುಕಿಸಿದೆ.

ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ಬುಧವಾರ ಪ್ರಕಟಿಸಿದೆ. ರಾಜ್ಯ ಪಠ್ಯಕ್ರಮಗಳ ಶಾಲೆಗಳಲ್ಲಿ ಐದು, ಎಂಟು, ಒಂಭತ್ತು ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ 2023ರ ಅ.6 ಮತ್ತು 9ರಂದು ಎರಡು ಸುತ್ತೋಲೆ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿದ್ದ ರುಪ್ಸಾ, ಶಾಲಾ ಪರೀಕ್ಷೆಗಳನ್ನು ಅಧಿಸೂಚನೆ ರೂಪದಲ್ಲಿ ತರಲಾಗದು. ಇದು ಕಾಯ್ದೆಗಳ ಪ್ರಕಾರ ನಡೆಸಬೇಕಾದ ಪ್ರಕ್ರಿಯೆ. ಶಿಕ್ಷಣ ಇಲಾಖೆ ಸುತ್ತೋಲೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಜತೆಗೆ, ಈ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಸರ್ಕಾರದ ಆದೇಶ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ (ಸಿಸಿಇ) ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು. ಕಲಿಕಾ ಚೇತರಿಕೆ ಕೂಡ ಪಠ್ಯಕ್ರಮದ ಭಾಗವೇ ಆಗಿದೆ. ಸಾಮಾನ್ಯ ಪಠ್ಯಕ್ರಮದಿಂದಲೇ ಕಲಿಕಾ ಚೇತರಿಕೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ.

ಮಕ್ಕಳ ಬುದ್ಧಿಮತ್ತೆಯನ್ನು ಸಕಾರಾತ್ಮಕವಾಗಿ ವೃದ್ಧಿಸುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಲ್ಲ. ಹೀಗಾಗಿ, ಈ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಪಡೆದುಕೊಂಡಿರುವುದು ಸರಿಯಿದೆ. ಅದರಂತೆ, ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು ಸರ್ಕಾರದ ಪರ ವಕೀಲರು ಇಲಾಖೆ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಪರೀಕ್ಷೆಗೆ ಹೊರಡಿಸಿದ್ದ ಸುತ್ತೋಲೆ ರದ್ದುಪಡಿಸಿದೆ. ಅರ್ಜಿದಾರ ಒಕ್ಕೂಟದ ಪರವಾಗಿ ವಕೀಲರಾದ ಕೆ.ವಿ. ಧನಂಜಯ, ಸುದರ್ಶನ್ ಸುರೇಶ್, ಅನಿರುದ್ಧ್ ಕುಲಕರ್ಣಿ, ಸಾಯಿನಾಥ್ ಮತ್ತು ಅನನ್ಯ ವಾದಿಸಿದ್ದರು.

ಕ್ಯಾಮ್ಸ್​ ವಾದವೇನು?: ಆರ್​ಟಿಇ ತಿದ್ದುಪಡಿ ಕಾಯ್ದೆ-2019ರ ಪ್ರಕಾರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಅನುತ್ತೀರ್ಣ ಮಾಡುವ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕಿತ್ತು. ಆದರೆ, ಈ ಸರ್ಕಾರ ಕೂಡ ಕೇವಲ ಪರೀಕ್ಷೆಗೆ ಒತ್ತು ನೀಡುತ್ತಿದೆ. ಯಾವುದೇ ಮಾನದಂಡವಿಲ್ಲದೆ ಪರೀಕ್ಷೆ ನಡೆಸುತ್ತಿರುವುದು ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆ ವಿತರಣೆಯಲ್ಲಿ ಒಬ್ಬೊಬ್ಬ ಬಿಇಒ ಒಂದೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಆದ್ದರಿಂದ 5 ಮತ್ತು 8ನೇ ತರಗತಿಗೆ ಆರ್​ಟಿಇ ಕಾಯ್ದೆ ಪ್ರಕಾರ, ಆಯಾ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕ್ಯಾಮ್್ಸ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.

ಅವರ್ಸ್ ಸ್ಕೂಲ್​ನಿಂದ ಕೇವಿಯಟ್: ಮತ್ತೊಂದೆಡೆ, ಸರ್ಕಾರ ಮೇಲ್ಮನವಿ ಸಲ್ಲಿಸಿದಲ್ಲಿ ಅರ್ಜಿ ವಿಚಾರಣೆ ವೇಳೆ ತಮ್ಮ ಅಭಿಪ್ರಾಯ ಆಲಿಸಬೇಕೆಂದು ಕೋರಿ ಈ ಪ್ರಕರಣದ ಮೂಲ ಅರ್ಜಿದಾರ ಖಾಸಗಿ ಶಾಲಾ ಸಂಘಟನೆ ಅವರ್ಸ್ ಸ್ಕೂಲ್ ಹೈಕೋರ್ಟ್​ಗೆ ಕೇವಿಯೆಟ್ ದಾಖಲಿಸಿದೆ.

ರುಪ್ಸಾ ವಾದವೇನು?: ಪರೀಕ್ಷೆಗಳನ್ನು ಅಧಿಸೂಚನೆ ರೂಪದಲ್ಲಿ ತರಲಾಗದು, ಶಾಲಾ ಪರೀಕ್ಷೆ ಕಾಯ್ದೆ ಪ್ರಕಾರ ನಡೆಸುವ ಪ್ರಕ್ರಿಯೆ, ಸುತ್ತೋಲೆ ಸರ್ಕಾರಿ ಶಾಲೆಗಳಿಗಷ್ಟೇ ಅನ್ವಯಿಸುತ್ತದೆ, ಕಲಿಕಾ ಚೇತರಿಕೆ ಪಠ್ಯಕ್ರಮದ ಪ್ರಶ್ನೆಗೆ ಉತ್ತರಿಸುವುದು ಕಷ್ಟ

ಇಂದೇ ಮೇಲ್ಮನವಿ: ಮೌಲ್ಯಾಂಕನ ಪರೀಕ್ಷೆ ರದ್ದುಪಡಿಸಿರುವ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಶಿಕ್ಷಣ ಇಲಾಖೆಯು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಇಲಾಖೆಯು ಈಗಾಗಲೇ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂಬಂಧ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ. ಪರೀಕ್ಷೆಗೆ ಕೇವಲ 4 ದಿನಗಳಷ್ಟೇ ಉಳಿದಿರುವ ಸಮಯದಲ್ಲಿ ನ್ಯಾಯಾಲಯವು ಪರೀಕ್ಷೆಯನ್ನು ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಗುರುವಾರವೇ ಮೇಲ್ಮನವಿ ಸಲ್ಲಿಸುವುದಾಗಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್​ಕುಮಾರ್ ಸಿಂಗ್ ತಿಳಿಸಿದ್ದಾರೆ.

ಏನಿದು ಪ್ರಕರಣ?: 2023-24ನೇ ಸಾಲಿನಿಂದಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (ಬೋರ್ಡ್ ಪರೀಕ್ಷೆ) ನಡೆಸಲು ಸರ್ಕಾರ ಆದೇಶಿಸಿತ್ತು. ಹಾಗೆಯೇ 11ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಅನುದಾನರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು.

28 ಲಕ್ಷ ಮಕ್ಕಳಿಗೆ ಟೆನ್ಷನ್: ಕೊನೇ ಕ್ಷಣದಲ್ಲಿ ಪರೀಕ್ಷೆ ರದ್ದುಗೊಳಿಸಿರು ವುದರಿಂದ ಪಾಲಕರು ಮಕ್ಕಳಲ್ಲಿ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ನಿರ್ವಣವಾಗಿದೆ. 5ನೇ ತರಗತಿಯಲ್ಲಿ 9.3 ಲಕ್ಷ, 8ನೇ ತರಗತಿಯಲ್ಲಿ 9.35 ಲಕ್ಷ ಮತ್ತು 9ನೇ ತರಗತಿಯಲ್ಲಿ 9.48 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 28.14 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಇದರ ಜತೆಗೆ ಪರೀಕ್ಷೆಗೆ ಸಿದ್ಧತೆ ನಡೆಸಿರುವ 69,127 ಶಾಲೆಗಳಿಗೂ ಮುಂದೇನು ಎಂಬ ತಳಮಳ ಶುರುವಾಗಿದೆ.

ಆರ್​ಟಿಇ ಪ್ರಕಾರ ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪರ್ಯಾಯ ಬೋಧನೆ ಮಾಡಬೇಕೆಂಬುದು ಸಿಸಿಇ ನಿಯಮವಾಗಿದೆ. ಆದರೆ, ಸರ್ಕಾರವು 5, 8ರ ಜತೆಗೆ ಈ ಬಾರಿ 9 ಮತ್ತು 11ನೇ ತರಗತಿಗೂ ಮಂಡಳಿ ಪರೀಕ್ಷೆ ನಡೆಸುತ್ತಿದೆ. ಇದು ಸಿಸಿಇ ನಿಯಮದ ವಿರುದ್ಧವಾಗಿದೆ. ನಮ್ಮ ಪರ ಹೈಕೋರ್ಟ್ ತೀರ್ಪು ನೀಡಿರುವುದನ್ನು ಸ್ವಾಗತಿಸುತ್ತೇನೆ.

| ಲೋಕೇಶ್ ತಾಳಿಕಟ್ಟೆ ರುಪ್ಸಾ ಅಧ್ಯಕ್ಷ

ಹೈಕೋರ್ಟ್​ನ ಏಕ ಸದಸ್ಯಪೀಠ ನೀಡಿರುವ ತೀರ್ಪನ್ನು ವಿಭಾಗೀಯ ಪೀಠದ ಮುಂದೆ ಪ್ರಶ್ನಿಸುತ್ತೇವೆ. ತುರ್ತಾಗಿ ವಿಚಾರಣೆ ನಡೆಸಬೇಕಿರುವ ಕಾರಣ ಗುರುವಾರವೇ ಮೇಲ್ಮವನಿ ಸಲ್ಲಿಸಲಾಗುತ್ತದೆ.

– ರಿತೇಶ್​ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ವರತಾ ಇಲಾಖೆ ಪ್ರಧಾನ ಕಾರ್ಯದರ್ಶಿ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *