ಚಿತ್ರದುರ್ಗ: ಕುಟುಂಬದ ಸಂಪರ್ಕ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಮೈಗೆ ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ರಾಜೇಂದ್ರ ನಗರದ ನಿವಾಸಿ ಗೋಪಿನಾಥ್ (50) ಆತ್ಮಹತ್ಯೆಗೆ ಯತ್ನಿಸಿದವರು. ದೇಹದಲ್ಲಿ ಶೇ 70ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗೋಪಿನಾಥ್ಗೆ ಪತ್ನಿ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಆದರೆ, ಕುಟುಂಬದಿಂದ ಸಂಪರ್ಕ ಕಳೆದುಕೊಂಡಿದ್ದ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ‘ಆತ್ಮಹತ್ಯೆ ಕಾರಣವನ್ನು ಚೀಟಿಯಲ್ಲಿ ಬರೆದು ಬ್ಯಾಗ್ನಲ್ಲಿ ಇಟ್ಟಿರುವುದಾಗಿ ಗೋಪಿನಾಥ್ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಪತಿಯನ್ನು ನೋಡಲು ಆಸ್ಪತ್ರೆಗೆ ಬಂದ ಭಾಗ್ಯಮ್ಮ ಮಾತನಾಡಿ, ‘ಎರಡು ವರ್ಷಗಳ ಹಿಂದೆ ಹಿರಿಯ ಮಗಳು ಪ್ರೀತಿಸಿ ಮದುವೆ ಮಾಡಿಕೊಂಡ ನಂತರ ಮಾನಸಿಕವಾಗಿ ನೊಂದಿದ್ದರು. ಕುಟುಂಬ ಸಂಪರ್ಕವೂ ಕಡಿತವಾಗಿತ್ತು. ಆತ್ಮಹತ್ಯೆಗೆ ಕಾರಣ ನನಗೂ ಗೊತ್ತಿಲ್ಲ’ ಎಂದು ತಿಳಿಸಿದರು. ಘಟನಾ ಸ್ಥಳಕ್ಕೆ ಡಿಎಸ್ಪಿ ದಿನಕರ್ ಪಿಕೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.