ಮುಂಬೈ, ಜನವರಿ 31:
ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅವರು ಇಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು, ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾದ ಮೊದಲ ಮಹಿಳೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎನ್‌ಸಿಪಿ ಶಾಸಕಾಂಗ ಪಕ್ಷವು ಸುನೇತ್ರಾ ಪವಾರ್ ಅವರನ್ನು ತನ್ನ ನಾಯಕಿಯಾಗಿ ಆಯ್ಕೆ ಮಾಡಿದ್ದು, ನಂತರ ಅವರಿಗೆ ಉಪಮುಖ್ಯಮಂತ್ರಿಯ ಜವಾಬ್ದಾರಿ ವಹಿಸಲಾಯಿತು. ತಮ್ಮ ಪತಿಯ ರಾಜಕೀಯ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಇದೀಗ ಅವರ ಹೆಗಲೇರಿದೆ.
61ನೇ ವಯಸ್ಸಿನಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುನೇತ್ರಾ ಪವಾರ್, ಇದುವರೆಗೆ ಬಹುತೇಕ ಸಾಮಾಜಿಕ ಮತ್ತು ಸಾರ್ವಜನಿಕ ಸೇವಾ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದರು. ಪ್ರಬಲ ರಾಜಕೀಯ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದರೂ, ಅವರು ನೇರ ರಾಜಕಾರಣದಿಂದ ದೂರವಿದ್ದು ಕುಟುಂಬ ಮತ್ತು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಸಮಯ ನೀಡಿದ್ದರು.
ಸುನೇತ್ರಾ ಪವಾರ್ ಅವರ ಸಹೋದರ ಪದಂಸಿಂಗ್ ಬಾಜಿರಾವ್ ಪಾಟೀಲ್ ಅವರು ಮಾಜಿ ಸಚಿವರಾಗಿದ್ದು, ಎನ್‌ಸಿಪಿಯ ಆರಂಭಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. ಶರದ್ ಪವಾರ್ ಅವರ ಆಪ್ತ ವಲಯದಲ್ಲೂ ಅವರು ಗುರುತಿಸಿಕೊಂಡಿದ್ದರು. ಇಂತಹ ರಾಜಕೀಯ ಹಿನ್ನೆಲೆಯ ನಡುವೆಯೂ ಸುನೇತ್ರಾ ಅವರು ತಡವಾಗಿ ರಾಜಕೀಯ ಪ್ರವೇಶ ಮಾಡಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಅವರು ಅಧಿಕೃತ ರಾಜಕೀಯ ಜೀವನ ಆರಂಭಿಸಿದರು. ಆ ಚುನಾವಣೆಯಲ್ಲಿ ಸೋಲು ಕಂಡರೂ, ನಂತರ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದ್ದು, ಸಂಸದೆಯಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು.
ಈಗ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕತ್ವದ ಜೊತೆಗೆ ಉಪಮುಖ್ಯಮಂತ್ರಿಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಸುನೇತ್ರಾ ಪವಾರ್ ಮುಂದೆ ದೊಡ್ಡ ಸವಾಲುಗಳು ಎದುರಿವೆ. ಛಗನ್ ಭುಜಬಲ್, ಪ್ರಫುಲ್ ಪಟೇಲ್ ಸೇರಿದಂತೆ ಅನುಭವಿ ನಾಯಕರಿರುವ ಪಕ್ಷವನ್ನು ಮುನ್ನಡೆಸುವುದು ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದು ಅವರ ಮುಂದಿರುವ ಪ್ರಮುಖ ಜವಾಬ್ದಾರಿಯಾಗಿದೆ.
ಸಕ್ರಿಯ ಆಡಳಿತ ಅನುಭವ ಕಡಿಮೆಯಿದ್ದರೂ, ಹೊಸ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮಹಾರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.