3ನೇ ಅಂತರಿಕ್ಷಯಾನ ಆರಂಭಿಸಿದ ಸುನಿತಾ ವಿಲಿಯಮ್ಸ್.

ಹಲವು ಬಾರಿ ವಿಳಂಬದ ಬಳಿಕ ಫ್ಲಾರಿಡಾದ ಕೇಪ್ ಕ್ಯಾನವರಲ್ ಬಾಹ್ಯಾಕಾಶ ಕೇಂದ್ರದಿಂದ ಪ್ರಯೋಗಾರ್ಥ ನೌಕೆಯ ಉಡ್ಡಯನ ನಡೆದಿದೆ.ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಇದಾಗಿದ್ದು, ಯಾನ ಆರಂಭಕ್ಕೂ ಮುನ್ನ ‘ನಡೆ ಕ್ಯಾಲಿಪ್ಸೊ(ಬಾಹ್ಯಾಕಾಶ ನೌಕೆಯ ಹೆಸರು), ನಮ್ಮನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಮತ್ತೆ ವಾಪಸ್ ಕರೆದುಕೊಂಡು ಬಾ’ಎಂದು ಬಾಹ್ಯಾಕಾಶ ನೌಕೆಗೆ ಸುನಿತಾ ಸಂದೇಶ ನೀಡಿದ್ದಾರೆ.

ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪುವ ನಿರೀಕ್ಷೆ ಇದೆ. ಮಗಳ ಗನನಯಾನದ ಬಗ್ಗೆ ಎಬಿಸಿ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ತಾಯಿ ಬೋನಿ ಪಾಂಡ್ಯ, ಮಗಳು ಬಹಳ ಉತ್ಸಾಹದಲ್ಲಿದ್ದಾಳೆ. ಅವಳ ಬಾಹ್ಯಾಕಾಶ ಯಾನದ ಬಗ್ಗೆ ಖುಷಿ ಇದೆ ಎಂದಿದ್ದಾರೆ. 58 ವರ್ಷ ವಯಸ್ಸಿನ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಪರೀಕ್ಷಾರ್ಥ ನೌಕೆಯಲ್ಲಿ ಅಂತರಿಕ್ಷ ಯಾನ ಆರಂಭಿಸಿದ್ದಾರೆ.

ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಆರಂಭಿಕ ಪರೀಕ್ಷೆಗಳನ್ನು ನಡೆಸುವಲ್ಲಿ ಸುನಿತಾ ಮತ್ತು ಬುಚ್ ವಿಲ್ಮೋರ್ ಬಹಳ ಶ್ರಮಪಟ್ಟಿದ್ದಾರೆ ಎಂದು ನಾಸಾ ಗುರುವಾರ ಬೆಳಿಗ್ಗೆ ತಿಳಿಸಿದೆ. ‘ಮೊದಲ ಆರು ಗಂಟೆಗಳು ಸಂಪೂರ್ಣವಾಗಿ ಆಕರ್ಷಕವಾಗಿದೆ’ಎಂದು ಬಾಹ್ಯಾಕಾಶ ನೌಕೆಯ ಹಸ್ತಚಾಲಿತ ನಿಯಂತ್ರಣವನ್ನು ತೆಗೆದುಕೊಂಡಿದ್ದ ಬುಚ್ ಹೂಸ್ಟನ್‌ನಲ್ಲಿರುವ ನಾಸಾ ಕೇಂದ್ರದಲ್ಲಿರುವ ಮಿಷನ್ ಸೆಂಟರ್‌ಗೆ ಸಂದೇಶ ಕಳುಹಿಸಿದ್ದಾರೆ.

Source : https://m.dailyhunt.in/news/india/kannada/prajavani-epaper-praj/3ne+antarikshayaana+aarambhisidha+sunita+viliyams-newsid-n615071048?listname=topicsList&topic=news&index=13&topicIndex=1&mode=pwa&action=click

Leave a Reply

Your email address will not be published. Required fields are marked *