ನವದೆಹಲಿ: ಭಾರತ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಅವರು ಇದೇ ಜೂ. 5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಸದ್ಯ ಅವರು ಭೂಮಿಗೆ ಹಿಂದಿರುಗುವುದು ಕಷ್ಟಕರವಾಗಿದೆ. ಐಎಸ್ಎಸ್ ನಿಂದ ಭೂಮಿಗೆ ಹಿಂದಿರುಗಬೇಕಿದ್ದ ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ.

ಇಷ್ಟೊತ್ತಿಗಾಗಲೇ ಅವರು ಭೂಮಿಗೆ ವಾಪಸ್ಸಾಗಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಅವರು ಅಲ್ಲೇ ಉಳಿಯುವಂತಾಗಿದೆ. ಈ ಹಿಂದೆ, 2003ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ ಅವರಂತೆಯೇ ಸುನಿತಾ ವಿಲಿಯಮ್ಸ್ ಅವರೂ ಭೂಮಿಗೆ ಹಿಂದಿರುಗದಂಥ ಪರಿಸ್ಥಿತಿ ಸುನೀತಾ ವಿಲಿಯಮ್ಸ್ ಅವರಿಗೂ ಬರಲಿದೆಯೇ ಎಂಬ ಆತಂಕವೂ ಎದುರಾಗಿದೆ.
ಗೂಗಲ್ ಟ್ರೆಂಡ್ಸ್ ನಲ್ಲಿ ಸುನಿತಾ ವಿಲಿಯಮ್ಸ್ ಗಾಗಿ ಇಂಟರ್ನೆಟ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಚ್ ಮಾಡಿದ್ದಾರೆ. ದಾದ್ರಾ ಮತ್ತು ನಗರ್ ಹವೇರಿ ಪ್ರಾಂತ್ಯದಲ್ಲಿ ಶೇ. 10ರಷ್ಟು, ಗೋವಾದಲ್ಲಿ ಶೇ. 58 ಮಂದಿ, ಗುಜರಾತ್ ನಲ್ಲಿ ಶೇ. 50, ಮಹಾರಾಷ್ಟ್ರದಲ್ಲಿ ಶೇ. 46, ಅರುಣಾಚಲ ಪ್ರದೇಶದಲ್ಲಿ ಶೇ. 44ರಷ್ಟು ಜನರು ಗೂಗಲ್ ಸರ್ಚ್ ಇಂಜಿನ್ ನಲ್ಲಿ ಸುನೀತಾ ವಿಲಿಯಮ್ಸ್ ಗಾಗಿ ಸರ್ಚ್ ಮಾಡಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಅವರು, ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂ. 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಪೂರ್ವ ಯೋಜನೆಯಂತೆ ಅವರು ಜೂ. 14ರಂದು ಭೂಮಿಗೆ ಹಿಂದಿರುಗಬೇಕಿತ್ತು. ಆದರೆ, ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ,
ಅವರ ವಾಪಸಾತಿಯನ್ನು ಜೂ. 26ಕ್ಕೆ ಮುಂದೂಡಲಾಗಿತ್ತು. ಆದರೆ, ತಾಂತ್ರಿಕ ದೋಷಗಳು ಸರಿಹೋಗದ ಕಾರಣ, ಅದರ ಜೊತೆಯಲ್ಲೇ ಮತ್ತಷ್ಟು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣದಿಂದಾಗಿ, ಈಗ ಪುನಃ ವಾಪಸ್ಸಾತಿ ದಿನಾಂಕವನ್ನು ಮುಂದೂಡಲಾಗಿದೆ. ಆದರೆ, ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಇದು ಆತಂಕವನ್ನು ಹೆಚ್ಚಿಸಲು ಮತ್ತೊಂದು ಕಾರಣವಾಗಿದೆ.
ಸುನಿತಾ ಹಾಗೂ ವಿಲ್ಮರ್ ಅವರನ್ನು ಭೂಮಿಗೆ ವಾಪಸ್ ಕರೆತರುವ ಸ್ಟಾರ್ ಲೈನರ್ ಆಕಾಶಕಾಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ನಿಜವಷ್ಟೇ. ಅವುಗಳನ್ನು ಬೇಗನೇ ಸರಿಪಡಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಸಲಿಗೆ, ಅದರಲ್ಲಿರುವ ಇಂಧನ 45 ದಿನಗಳಿಗೆ ಸಾಕಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲವು ದಿನಗಳ ಮಟ್ಟಿಗೆ ಹೆಚ್ಚಿಸಬಹುದು. ಆದರೆ, ತಾಂತ್ರಿಕ ದೋಷ ಬೇಗನೇ ನಿವಾರಣೆಯಾಗದಿದ್ದ ಇಂಧನ ಖಾಲಿಯಾಗುತ್ತಾ ಹೋಗುತ್ತದೆ. ತಾಂತ್ರಿಕ ದೋಷಗಳು ನಿವಾರಣೆಯಾಗುವ ಹೊತ್ತಿಗೆ ಇಂಧನ ಖಾಲಿಯಾದರೆ ಅವರು ಭೂಮಿಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.