ಭಾರತ ನೀಡಿದ್ದ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭದ ಹೊರತಾಗಿಯೂ 19.2 ಓವರ್ಗಳಲ್ಲಿ 170ಕ್ಕೆ ಆಲೌಟ್ ಆಗುವ ಮೂಲಕ 43 ರನ್ಗಳ ಸೋಲುಕಂಡಿತು.

ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ (India vs Sri Lanka) ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯ (T20 Series) ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ (Team India) 213ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ನಾಯಕ ಸೂರ್ಯಕುಮಾರ್ ಯಾದವ್ (Surya Kumar Yadav) 58, ಪಂತ್ 49 ಹಾಗೂ ಜೈಸ್ವಾಲ್ 40 ರನ್ಗಳಿಸಿ ಲಂಕಾಗೆ ಬಹುದೊಡ್ಡ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಅತಿಥೇಯ ತಂಡ 19.2 ಓವರ್ಗಳಲ್ಲಿ 170ಕ್ಕೆ ಆಲೌಟ್ ಆಗುವ ಮೂಲಕ 43 ರನ್ಗಳ ಸೋಲುಕಂಡಿತು.
ಉತ್ತಮ ಆರಂಭ ಪಡೆದಿದ್ದ ಲಂಕಾ
214ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಮೊದಲ ವಿಕೆಟ್ಗೆ 84 ರನ್ ಸಿಡಿಸಿ ಅದ್ಭುತ ಆರಂಭ ಪಡೆಯಿತು. ಆರಂಭಿಕರ ಪತನದ ನಂತರ ಅತಿಥೇಯ ತಂಡ ದಿಢೀರ್ ಕುಸಿತ ಕಂಡು ಸೋಲುಕಂಡಿತು. ಪಾತುಮ್ ನಿಸ್ಸಾಂಕ 48 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ 79 ರನ್ ಹಾಗೂ ಕುಸಾಲ್ ಮೆಂಡಿಸ್ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 45 ರನ್ಗಳಿಸಿದರು. ಉಳಿದ ಬ್ಯಾಟರ್ಗಳು ಭಾರತೀಯ ಬೌಲರ್ಗಳ ದಾಳಿ ಎದುರಿಸಲಾಗದೇ ವಿಕೆಟ್ ಒಪ್ಪಿಸಿದರು.
ಮ್ಯಾಚ್ ಟರ್ನಿಂಗ್ ಪಾಯಿಂಟ್ ಆ ಒಂದು ಓವರ್
ಒಂದು ಹಂತದಲ್ಲಿ ಅತಿಥೇಯ ತಂಡ 14 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 140ರನ್ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಶ್ರೀಲಂಕಾ ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈ ಹಂತದಲ್ಲಿ ಬೌಲಿಂಗ್ಗೆ ಇಳಿದ ಅಕ್ಷರ್ ಪಟೇಲ್ ಒಂದೇ ಓವರ್ನಲ್ಲಿ ನಿಸ್ಸಾಂಕ ಹಾಗೂ ಕುಸಾಲ್ ಪೆರೆರಾ ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು. ನಿಸ್ಸಾಂಕ ಔಟ್ ಆಗುವ ಮುನ್ನ 48 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ 79 ರನ್, ಪೆರೆರಾ 14 ಎಸೆತಗಳಲ್ಲಿ 20 ರನ್ಗಳಿಸಿದ್ದರು. ಈ ಇಬ್ಬರನ್ನ 15ನೇ ಓವರ್ನಲ್ಲಿ ಪೆವಿಲಿಯನ್ಗಟ್ಟುವ ಮೂಲಕ ಪಟೇಲ್ ಭಾರತದ ಗೆಲುವಿಗೆ ಕಾರಣರಾದರು.
ಭಾರತದ ಪರ ಅರ್ಶದೀಪ್ ಸಿಂಗ್ 24ಕ್ಕೆ 2, ರಿಯಾನ್ ಪರಾಗ್ 5ಕ್ಕೆ3, ಅಕ್ಷರ್ ಪಟೇಲ್ 38ಕ್ಕೆ 2, ರವಿ ಬಿಷ್ಣೋಯ್ 37ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಜೈಸ್ವಾಲ್-ಗಿಲ್ ಅಬ್ಬರ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಮೊದಲ ವಿಕೆಟ್ಗೆ 6 ಓವರ್ಗಳಲ್ಲಿ 74 ರನ್ ಕಲೆಯಾಕಿತು. ಅದ್ದೂರಿ ಫಾರ್ಮ್ನಲ್ಲಿರುವ ಸ್ಫೋಟಕ ಬ್ಯಾಟಿಂಗ್ ಮುಂದುರಿಸಿದ ಜೈಸ್ವಾಲ್ ಕೇವಲ 21 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 40 ರನ್ಗಳಿಸಿದರೆ, ಉಪನಾಯಕ ಗಿಲ್ 16 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ಗಳಿಸಿದರು. ಇವರಿಬ್ಬರು ಬ್ಯಾಕ್ ಟು ಬ್ಯಾಕ್ ಎಸೆತಕ್ಕೆ ವಿಕೆಟ್ ಒಪ್ಪಿಸಿರು.
ಆದರೆ ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ ಯುವ ಆಟಗಾರರು ದೊರೆಕಿಸಿಕೊಟ್ಟಿದ್ದ ಆರಂಭವನ್ನು ಅದೇ ಮಾದರಿಯಲ್ಲಿ ಮುಂದಕ್ಕೆ ಕೊಂಡೊಯ್ದರು. ಪಂತ್ ಜೊತೆಗೂಡಿ 3ನೇ ವಿಕೆಟ್ಗೆ 76 ರನ್ ಸೇರಿಸಿದರು. ಸೂರ್ಯ 26 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 58 ರನ್ಗಳಿಸಿದರೆ, ಪಂತ್ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 49 ರನ್ಗಳಿಸಿದರು. ಉಳಿದಂತೆ ಪಾಂಡ್ಯ 9, ಪರಾಗ್ 7, ರಿಂಕು ಸಿಂಗ್ 1, ಅಕ್ಷರ್ ಪಟೇಲ್ 10 ರನ್ಗಳಿಸಿದರು.
Views: 0